Tuesday, 3rd December 2024

CM Siddaramaiah: ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah

ಕೊಪ್ಪಳ: ಸುಳ್ಳು, ಸುಳ್ಳು, ಸುಳ್ಳು… ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡು ಎಂದು ನಾವು ಶಾಸಕ ಮುನಿರತ್ನಗೆ ಹೇಳಿರಲಿಲ್ಲ. ನಮ್ಮ ಸರ್ಕಾರ ಯಾರ ವಿಷಯದಲ್ಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ‌ಹೇಳಿದರು.

ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಶಾಸಕ ಮುನಿರತ್ನ ವಿರುದ್ಧ ಮೂರು ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆ ಕೆಲವು ಶಾಸಕರು,‌ ಸಚಿವರು ಎಸ್‌ಐಟಿ ರಚಿಸಿ,‌ ತನಿಖೆ ಮಾಡುವಂತೆ ನನಗೆ ಮನವಿ ಕೊಟ್ಟಿದ್ದಾರೆ. ಅವರ ಮೇಲೆ ಜಾತಿನಿಂದನೆ, ಕೊಲೆಗೆ ಸಂಚು, ಅತ್ಯಾಚಾರ ‌ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆ ನಾವು ಎಸ್ಐಟಿ ರಚನೆ ಮಾಡಿದ್ದೇವೆ. ದ್ವೇಷ ರಾಜಕಾರಣ, ಒಳಸಂಚು ಎಂಬುದೆಲ್ಲ ಸುಳ್ಳು ಎಂದು ತಮ್ಮದೇ ದಾಟಿಯಲ್ಲಿ ಪುರುಚ್ಚರಿಸಿದರು.

ತುಂಗಭದ್ರಾ ಡ್ಯಾಂ ಮತ್ತೇ ತುಂಬಿದೆ. ಮುಂಗಾರು ಜೊತೆಗೆ ಹಿಂಗಾರು ಬೆಳೆಗೂ ನೀರು ಸಿಗುವ ಭರವಸೆ ಇದೆ.‌ ಆಗಸ್ಟ್ ನಲ್ಲಿ 19ನೇ ಕ್ರಸ್ಟ್‌ ಗೇಟ್ ಕಿತ್ತು ಹೋಗಿದ್ದಾಗ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಮತ್ತು ಜಮೀರ್‌ ಅಹ್ಮದ್ ಅವರು‌ ಎಂಜಿನಿಯರ್ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ಶ್ರಮಿಸಿದ್ದಾರೆ. ಅಧಿಕಾರಿಗಳು, ತಂತ್ರಜ್ಞರ ತಂಡದ ಕೆಲಸದಿಂದ 20 ಟಿಎಂಸಿ ನೀರು ಉಳಿದಿದೆ. ಇದರಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ, ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಿಸಲು ಬಂದಿದ್ದೇನೆ. ಮಳೆರಾಯನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಕಿತ್ತು ಹೋದ ನಂತರ ತಜ್ಞರ ಸಮಿತಿ ಮಾಡಿದ್ದೇವೆ. ಸಮಿತಿ ವರದಿಯಂತೆ ಸರ್ಕಾರ ಕೆಲಸ ಮಾಡಿದೆ. ಇದು 70 ವರ್ಷ ಡ್ಯಾಂ. ಗರಿಷ್ಠ 50 ವರ್ಷಕ್ಕೆ ಗೇಟ್ ಬದಲಾವಣೆ ಮಾಡಬೇಕು. ಸಮಿತಿ ಶಿಫಾರಸು ಆಧರಿಸಿ ಸರ್ಕಾರ ಕ್ರಮ ವಹಿಸಲಿದೆ ಎಂದರು. ಈ ಹಿಂದಿನ ಸರ್ಕಾರದ 5 ವರ್ಷದ ಅವಧಿಯ ಸರ್ಕಾರಕ್ಕೆ ರಸ್ತೆ ಅಭಿವೃದ್ಧಿ ಮಾಡಲು ಆಗಿಲ್ಲ. ನಮ್ಮ ಸರ್ಕಾರ ಅನುದಾನ ಮೀಸಲಿಟ್ಟು, ಅಭಿವೃದ್ಧಿ ಮಾಡಲಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪೂರ, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜೆ.ಎನ್.ಗಣೇಶ, ಡಿಸಿ ನಲಿನ್ ಅತುಲ್, ಎಸ್ಪಿ ರಾಮ್ ಎಲ್.ಅರಸಿದ್ದಿ ಸೇರಿ ಇತರರು ಇದ್ದರು.

ಅರ್ಕಾವತಿ ರೀ ಡೂ ಪ್ರಕರಣಕ್ಕೆ ಸಂಬಂಧಿಸಿ, ರಾಜ್ಯಪಾಲರ ಪತ್ರಕ್ಕೆ ಸರ್ಕಾರ ಉತ್ತರ ಕೊಡುತ್ತದೆ. ರಾಜಭವನದ ಯಾವುದಾದರೂ ಮಾಹಿತಿ ಸೋರಿಕೆ ಆಗಿದ್ದರೆ ರಾಜ್ಯಪಾಲರ ಕಚೇರಿಯಿಂದಲೂ ಮಾಹಿತಿ ಸೋರಿಕೆ ಆಗಿರಬಹುದು. ಈ ಬಗ್ಗೆ ತನಿಖೆ ಮಾಡಿಸಲಿ.
| ಸಿದ್ದರಾಮಯ್ಯ, ಸಿಎಂ