Saturday, 4th January 2025

Cow Slaughter: ನೇತ್ರಾವತಿಗೆ ಸೇರುವ ನದಿನೀರಿನಲ್ಲಿ ಗೋವಿನ ರುಂಡ ಮುಂಡದ ರಾಶಿ! ನಡೆಯಿತಾ ಪುಣ್ಯನದಿ ಅಪವಿತ್ರಕ್ಕೆ ಸಂಚು?

netravathi13

ಮಂಗಳೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರವಾದ ಧರ್ಮಸ್ಥಳದಲ್ಲಿ (Dharmasthala) ಲಕ್ಷಾಂತರ ಮಂದಿ ತೀರ್ಥಸ್ನಾನ ನಡೆಸುವ ನೇತ್ರಾವತಿಗೆ (Netravathi) ಬಂದು ಸೇರುವ ಉಪನದಿಯಲ್ಲಿ ರಾಶಿ ರಾಶಿ ಗೋವಿನ ತ್ಯಾಜ್ಯ (Cow Slaughter) ಪತ್ತೆಯಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಪುಣ್ಯನದಿಗೆ ಉದ್ದೇಶಪೂರ್ವಕ ಗೋವಿನ ಮಾಂಸ ಸುರಿದು ಅಪವಿತ್ರಗೊಳಿಸುವ ಸಂಚು ನಡೆಯುತ್ತಿದೆ ಎನ್ನುವ ಅನುಮಾನವನ್ನು ಹಿಂದೂ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಬಳಿ ಈ ದುಷ್ಕೃತ್ಯ ನಡೆದಿದೆ. ನೇತ್ರಾವತಿ ನದಿಗೆ ಬಂದು ಸೇರುವ ಉಪನದಿ ಮೃತ್ಯುಂಜಯ ನದಿಗೆ ಗೋಹತ್ಯೆಯ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ಎಸೆಯಲಾಗಿದೆ. ಮೂಟೆಗಟ್ಟಲೆ ಗೋವಿನ ರುಂಡ, ಮುಂಡ, ಚರ್ಮ ಎಸೆದು ಪವಿತ್ರ ನದಿಯನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ.

ಮೃತ್ಯುಂಜಯ ಹೊಳೆ ಪಶ್ಚಿಮಘಟ್ಟದಿಂದ ಹರಿದು ಧರ್ಮಸ್ಥಳದ ಬಳಿ ನೇತ್ರಾವತಿಯನ್ನು ಸೇರುತ್ತದೆ. ಪ್ರತಿನಿತ್ಯ ಸಾವಿರಾರು ಭಕ್ತರು ನೇತ್ರಾವತಿ ಸ್ನಾನ ಘಟ್ಟದಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ಪುಣ್ಯತೀರ್ಥವನ್ನು ಬಳಸಲಾಗುತ್ತದೆ. ಹೀಗಿರುವ ಕೋಟ್ಯಂತರ ಭಕ್ತರ ನಂಬಿಕೆಗೆ ಗೋ ಹಂತಕರು ಕೊಳ್ಳಿ ಇಟ್ಟಿದ್ದಾರೆ. ಈ ಹಿಂದೆಯೂ ಹಲವು ಬಾರಿ ಮೃತ್ಯುಂಜಯ ನದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಗೋವಿನ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಇದೀಗ ಒಮ್ಮಿಂದೊಮ್ಮೆಗೆ 11 ಮೂಟೆಗೂ ಹೆಚ್ಚಿನ ತ್ಯಾಜ್ಯ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಚಾರ್ಮಾಡಿ ಗ್ರಾಮದ ಹಲವು ಮನೆ ಹಾಗೂ ಕಾಡು ಪ್ರದೇಶಗಳಲ್ಲಿ ಅಕ್ರಮ ಗೋ ಹತ್ಯೆಯಾಗುತ್ತಿದೆ ಎಂಬ ಅನುಮಾನ ಇದರಿಂದ ಮೂಡಿದೆ. ಗೋ ಹತ್ಯೆ ಬಳಿಕ ತ್ಯಾಜ್ಯ ಮತ್ತು ಅವಶೇಷಗಳನ್ನೂ ಮೂಟೆ ಕಟ್ಟಿ ಎಸೆಯುತ್ತಿದ್ದಾರೆ. ಮೃತ್ಯುಂಜಯ ನದಿಯಲ್ಲಿ 11 ಮೂಟೆ ಗೋವಿನ ತ್ಯಾಜ್ಯ ಪತ್ತೆಯಾಗಿರುವ ಬೆನ್ನಲ್ಲೇ ಬಜರಂಗದಳ ಸಿಡಿದೆದ್ದಿದ್ದು, ಪರಮ ಪವಿತ್ರ ನೇತ್ರಾವತಿಯ ಪಾವಿತ್ರ್ಯತೆಗೆ ಧಕ್ಕೆ ತಂದವರ ವಿರುದ್ಧ ಸಮರ ಸಾರಿದೆ.

ಉದ್ದೇಶಪೂರ್ವಕವಾಗಿ ಪವಿತ್ರ ನದಿ ನೇತ್ರಾವತಿಯನ್ನು ಅಪವಿತ್ರಗೊಳಿಸಲಾಗುತ್ತಿದೆ. ವಾರದೊಳಗೆ ಆರೋಪಿಗಳನ್ನು ಬಂಧಿಸಬೇಕು. ಬಂಧನವಾಗದೇ ಇದ್ದಲ್ಲಿ ಜಿಲ್ಲೆಯ ಹಿಂದೂ ನಾಯಕರನ್ನು ಸೇರಿಸಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಧರ್ಮಸ್ಥಳ ಪೊಲೀಸರಿಗೆ ಬಜರಂಗದಳ ಎಚ್ಚರಿಕೆ ನೀಡಿದೆ. ಹಲವು ಬಾರಿ ದೂರು ನೀಡಿದರೂ ಧರ್ಮಸ್ಥಳ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಂಘಟನೆಗಳು ಕಿಡಿ ಕಾರಿವೆ.

ಇದನ್ನೂ ಓದಿ: ಎತ್ತಿನಹೊಳೆ: ಮುಗಿಯದ ಕಾಮಗಾರಿ