ವಿಶ್ವವಾಣಿಯೊಂದಿಗೆ ಜಿಲ್ಲಾಧಿಕಾರಿಯ ಮೊದಲ ಮಾತುಕತೆ
ಸ್ಥಳೀಯ ಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು
ತುಮಕೂರು: ಫೆ.20ರಂದು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮವನ್ನು ಕಂದಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿಯವರು ಹಳ್ಳಿಯಲ್ಲಿ ವಾಸ್ತವ್ಯ ಮಾಡುತ್ತಿರುವುದು ಜನತೆಯಲ್ಲಿ ಆಶಾ ಭಾವನೆ ಮೂಡಿಸಿದೆ. ಈ ಕುರಿತು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ವಿಶ್ವವಾಣಿಯ ತುಮಕೂರು ಜಿಲ್ಲಾ ವರದಿಗಾರ ರಂಗನಾಥ ಕೆ.ಮರಡಿ ಅವರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅದರ ಪೂರ್ಣಪಾಠ ಇಲ್ಲಿದೆ.
ಲಕ್ಷ್ಮಿಪುರ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಮಧುಗಿರಿ ತಾಲೂಕು ಮಿಡಿಗೇಶಿ ಹೋಬಳಿ, ರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಷ್ಮಿಪುರ ಜಿಲ್ಲಾಕೇಂದ್ರದಿಂದ ದೂರವಿದ್ದು, ಗಡಿ ಭಾಗದ ಗ್ರಾಮವಾಗಿದೆ. ದೂರದ ಗ್ರಾಮಗಳ ಸಮಸ್ಯೆೆಗಳನ್ನು ಅಧಿಕಾರಿಗಳು ಖುದ್ದು ಅರಿಯಲು ಅನುಕೂಲವಾಗುತ್ತದೆ.
ಗ್ರಾಮಗಳಲ್ಲಿ ಸಮಸ್ಯೆಗಳು ಪರಿಹಾರವಾಗಿಲ್ಲದಿರಲು ಕಾರಣವೇನು?
ಸ್ಥಳೀಯ ಮಟ್ಟದ ಅಧಿಕಾರಿಗಳು ಜನತೆಯ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವ ಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು. ಸ್ಥಳೀಯಮಟ್ಟದಲ್ಲಿ ಸಮಸ್ಯೆಗಳು ಬಗೆಹರಿದರೆ ಮೇಲಧಿಕಾರಿಗಳ ಕಚೇರಿಗೆ ಜನರು ಅಲೆಯುವುದು ತಪ್ಪುತ್ತದೆ. ಗ್ರಮಗಳ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಅಧಿಕಾರಿಗಳು
ಕಾರ್ಯೋನ್ಮುಖವಾಗಬೇಕು.
ಗ್ರಾಮ ವಾಸ್ತವ್ಯದಲ್ಲಿ ಯಾವ ಸಮಸ್ಯೆಗಳನ್ನು ಬಗೆಹರಿಸುವಿರಿ?
ಫೆ.20ರಂದು ಎಲ್ಲಾ ಅಧಿಕಾರಿಗಳು ಗ್ರಾಮ ವಾಸ್ಯವದಲ್ಲಿ ಲಭ್ಯವಿದ್ದು, ಸರಕಾರಿ ಶಾಲೆ ಒತ್ತುವರಿ, ಪಹಣಿ ಸಮಸ್ಯೆ, ಪಡಿತರ ಚೀಟಿ ಸಮಸ್ಯೆ, ನರೇಗಾ, ಪಿಎಂ ಕಿಸಾನ್, ರಸ್ತೆ ಸಮಸ್ಯೆ ಸೇರಿದಂತೆ ಇನ್ನಿತರ ಸಾಮಾನ್ಯ ಸಮಸ್ಯೆಗಳನ್ನು ಸ್ಥಳಲ್ಲಿಯೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು.
ಗ್ರಾಮ ವಾಸ್ತವ್ಯ ಚಿತ್ರಣ ಹೇಗಿದೆ?
ನಾನು ಸಹ ಗ್ರಾಮೀಣ ಭಾಗದವನು. ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜನರ ಒಡನಾಟವನ್ನು ಬಲ್ಲವನಾಗಿದ್ದೇನೆ.
ಗ್ರಾಮದಲ್ಲಿ ಶಾಲೆ ಅಥವಾ ಯಾವುದಾದರೂ ಸಾರ್ವಜನಿಕರ ಮನೆಯಾದರೂ ವಾಸ್ತವ್ಯ ಮಾಡುತ್ತೇವೆ. ಈ ಬಗ್ಗೆೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದೇ?
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಹಳ್ಳಿಗಳಲ್ಲಿ ತಾತ್ಕಾಲಿಕವಾಗಿ ಶೌಚಾಲಯ, ನೀರು,
ರಸ್ತೆ, ಚರಂಡಿ ಇನ್ನಿತರ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುವಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತ ರಿಸಿದ ಜಿಲ್ಲಾಧಿಕಾರಿಗಳು, ಗ್ರಾಮದ ಪ್ರತಿಯೊಂದು ಸಮಸ್ಯೆಗಳಿಗೂ ಖುದ್ದು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಾಸ್ತವ್ಯ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಮಾದರಿಯಾಗಿ ಉಳಿಯುವುದು.