Wednesday, 27th November 2024

DK Shivakumar: ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸಿ; ಕೇಂದ್ರ ಸಚಿವ ಜೋಶಿಗೆ ಡಿ.ಕೆ.ಶಿವಕುಮಾರ್ ಮನವಿ

DK Shivakumar

ನವ ದೆಹಲಿ: ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ಕೊಡಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಪ್ರಲ್ಹಾದ್‌ ಜೋಶಿ ಅವರನ್ನು ಬುಧವಾರ ಭೇಟಿ ಮಾಡಿದ ಶಿವಕುಮಾರ್ ಅವರು, ಜನ್ಮದಿನದ ಶುಭಾಶಯ ಕೋರಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.

“ಮೇಕೆದಾಟು ಯೋಜನೆಯು ಸುಸ್ಥಿರ ಕುಡಿಯುವ ನೀರಿನ ಯೋಜನೆಯಾಗಿದ್ದು, ಈ ಯೋಜನೆ ಜಾರಿ ಅಗತ್ಯವಾಗಿದೆ. ಕೃಷ್ಣಾ ವಿವಾದಿತ ನೀರು ನ್ಯಾಯಾಧಿಕರಣ 2ರ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಇದರ ಜತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು” ಎಂದು ಮನವಿ ಮಾಡಿದರು.

“ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ನೀರಾವರಿ ಸೌಲಭ್ಯ ಹೆಚ್ಚಿಸಿ ರೈತರಿಗೆ ನೀರು ಒದಗಿಸಿಕೊಡಬೇಕು. ಇನ್ನು ಮಹದಾಯಿ ಯೋಜನೆಗೆ ಅಗತ್ಯ ಅನುಮತಿ ಕೊಡಿಸಿ ಈ ಭಾಗದಲ್ಲಿರುವ ನೀರಿನ ಅಭಾವ ನೀಗಿಸಬೇಕಿದೆ. ಈ ಪ್ರಮುಖ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಗತ್ಯ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ; ಸಿಎಂ ಸಿದ್ದರಾಮಯ್ಯ

ಕೇಂದ್ರ ಸಚಿವ ಭೂಪೇಂದರ್ ಯಾದವ್‌ಗೆ ಮನವಿ ಪತ್ರ

ನವ ದೆಹಲಿ: “ಕಳಸಾ ಬಂಡೂರಿ ನಾಲೆ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವರು ಮಧ್ಯಪ್ರವೇಶ ಮಾಡಿ ಅಗತ್ಯವಿರುವ ಅರಣ್ಯ ಹಾಗೂ ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು” ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಬುಧವಾರ ಭೇಟಿ ಮಾಡಿದ ಜಲ ಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು, ಈ ಬಗ್ಗೆ ಮನವಿ ಪತ್ರ ಸಲ್ಲಿಸಿದರು.

“2024ರ ಅ.9ರಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ತನ್ನ 80ನೇ ಸಭೆಯಲ್ಲಿ ಕರ್ನಾಟಕದ ಅರ್ಜಿ ವಿಚಾರಣೆಯನ್ನು ಮುಂದೂಡಿ ಈ ವಿಚಾರವಾಗಿ ಇರುವ ಕಾನೂನು ಸಮಸ್ಯೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ರಾಜ್ಯವು ದಿನಾಂಕ 10-10-2024 ಹಾಗೂ 16-10-2024 ದಿನಾಂಕದಂದು ಅಗತ್ಯ ಸ್ಪಷ್ಟನೆಯನ್ನು ಪತ್ರದ ಮೂಲಕ ಸಲ್ಲಿಕೆ ಮಾಡಲಾಗಿದೆ.

ಕಳಸಾ ನಾಲೆ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 10.6852 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಸುತ್ತಲಿನ ಹಳ್ಳಿಗಳ ಪ್ರದೇಶವನ್ನು ಇದು ಹೊಂದಿದೆ. ಇದರಲ್ಲಿ ಜಾಕ್ ವೆಲ್ ಸಹಿತ ಪಂಪ್ ಹೌಸ್, ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುವುದು.

ಸ್ಥಾಯಿ ಸಮಿತಿಯ 80ನೇ ಸಭೆ ಚರ್ಚೆಯಾದ ಅಂಶಗಳು:
ಗೋವಾದ ವನ್ಯಜೀವಿ ಮಂಡಳಿ ಮುಖ್ಯಸ್ಥರು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 29 ಅನ್ನು ಪ್ರಸ್ತಾಪಿಸಿ ಈ ಯೋಜನೆ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ರಾಜ್ಯವು ಸುಪ್ರೀಂ ಕೋರ್ಟ್ ಮುಂದೆ ಸೂಕ್ತ ದಾಖಲೆಗಳನ್ನು ಮಂಡಿಸಿದೆ.

ಈ ಸುದ್ದಿಯನ್ನೂ ಓದಿ | DA Hike: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.10.75ಕ್ಕೆ ಹೆಚ್ಚಳ; ಸರ್ಕಾರದಿಂದ ಅಧಿಕೃತ ಆದೇಶ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ತಜ್ಞರ ಸಮಿತಿ ರಚಿಸಿತ್ತು. ಈ ತಂಡ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತನ್ನ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಪ್ರಾಧಿಕಾರವು ಮಹದಾಯಿ ನೀರು ವಿವಾದ ನ್ಯಾಯಾಧೀಕರಣ ತೀರ್ಪಿನ ಬಗ್ಗೆ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವಣ ಕಾನೂನು ಸಮರ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ತಿಳಿಸಿತ್ತು.

ಈ ಎಲ್ಲಾ ವಿಚಾರವಾಗಿ ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದು, ಸುಪ್ರೀಂ ಕೋರ್ಟ್ ಈ ಯೋಜನೆ ಜಾರಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದರ ಜತೆಗೆ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರದ ಎಲ್ಲಾ ಅನುಮತಿಗಳು ಸಿಕ್ಕ ನಂತರವಷ್ಟೇ ಈ ಯೋಜನೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

ಈ ಯೋಜನೆಯು ಅಭಯಾರಣ್ಯದ ಭಾಗವಲ್ಲದಿದ್ದರೂ ಹುಲಿ ಕಾರಿಡಾರ್ ಪ್ರದೇಶ ವ್ಯಾಪ್ತಿಯಲ್ಲಿ ಬರುತ್ತದೆ. ಈ ಯೋಜನೆಯಲ್ಲಿ ನಿರ್ಮಿಸಲಾಗುವ ಜಲ ಮೂಲಗಳು ವನ್ಯಜೀವಿಗೆ ಅಗತ್ಯ ನೀರು ಪೂರೈಸಲಿದೆ. ಹೀಗಾಗಿ ಈ ಯೋಜನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕದ ವನ್ಯಜೀವಿ ಸಂರಕ್ಷಣಾ ಮಂಡಳಿಯು ಸ್ಥಾಯಿ ಸಮಿತಿಗೆ ಮಾಹಿತಿ ನೀಡಿತು.

ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಸ್ಥಾಯಿ ಸಮಿತಿಯು ಕಾನೂನು ವಿಚಾರಗಳ ಬಗ್ಗೆ ಸ್ಪಷ್ಟನೆ ಕೋರಿತ್ತು. ಜತೆಗೆ ಪ್ರಾಧಿಕಾರದ ಅಭಿಪ್ರಾಯ ಸಲ್ಲಿಕೆಗೆ ಸೂಚಿಸಿತ್ತು. ಸ್ಥಾಯಿ ಸಮಿತಿಯ ಈ ಎಲ್ಲಾ ಮಾರ್ಗದರ್ಶನವನ್ನು ಕರ್ನಾಟಕ ರಾಜ್ಯ ಪಾಲಿಸಿದೆ. ಆದರೂ ಈ ಯೋಜನೆಗೆ ಅನುಮತಿ ನೀಡುವುದು ವಿಳಂಬವಾಗುತ್ತಿದೆ.

ಹೀಗಾಗಿ, ಕೇಂದ್ರ ಅರಣ್ಯ ಸಚಿವರಾದ ತಾವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಕರ್ನಾಟಕದ ಲಿಖಿತ ಮನವಿ ಬಗ್ಗೆ ಪ್ರಾಧಿಕಾರದ ಅಭಿಪ್ರಾಯವನ್ನು ಪರಿಶೀಲಿಸಿ ಆದಷ್ಟು ಬೇಗ ಯೋಜನೆಗೆ ಅನುಮತಿ ನೀಡಬೇಕು. ಕಳಸಾ ಯೋಜನೆಗೆ ಅಗತ್ಯವಿರುವ ಅನುಮತಿ ನೀಡಲು ರಿಜನಲ್ ಎಂಪವರ್ ಕಮಿಟಿ, ಇಂಟರ್ ಗ್ರೇಟೆಡ್ ರೀಜನಲ್ ಆಫೀಸ್, ಪರಿಸರ ಮತ್ತು ಅರಣ್ಯ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ | CM Siddaramaiah: ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ; ಸಿಎಂ ಸಿದ್ದರಾಮಯ್ಯ

“ಕರ್ನಾಟಕ ರಾಜ್ಯವು ಕಳಸಾ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯ ಪ್ರಮಾಣವನ್ನು 258 ಹೆಕ್ಟೇರ್ ಪ್ರದೇಶದಿಂದ ಕೇವಲ 26.9255 ಹೆಕ್ಟೇರ್ ಪ್ರದೇಶಕ್ಕೆ ಇಳಿಸಿದೆ. ಬಂಡೂರಿ ನಾಲೆ ಯೋಜನೆಗೆ ಅಗತ್ಯವಿರುವ ಅರಣ್ಯ ಪ್ರದೇಶ ಭೂಮಿಯನ್ನು 243 ಹೆಕ್ಟೇರ್ ನಿಂದ ಕೇವಲ 28.4427 ಹೆಕ್ಟೇರ್ ಪ್ರದೇಶಗಳಿಗೆ ಇಳಿಸಿದೆ. ಆಮೂಲಕ ಪರಿಸರ ಸಂರಕ್ಷಣೆಯಲ್ಲಿ ರಾಜ್ಯ ತನ್ನ ಬದ್ಧತೆ ಪ್ರದರ್ಶಿಸಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರವು ವಿಳಂಬ ಮಾಡದೇ ಈ ಯೋಜನೆಗೆ ಅನುಮತಿ ನೀಡಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.