Saturday, 4th January 2025

Haripriya: ನೀಲಿ- ನೀಲಿ ಫೋಟೋಶೂಟ್‌ ಹಂಚಿಕೊಂಡು ಬೇಬಿ ಬಂಪ್ ತೋರಿಸಿದ ಹರಿಪ್ರಿಯಾ- ವಸಿಷ್ಠ ಸಿಂಹ

haripriya vasishta simha

ಬೆಂಗಳೂರು: ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಚಂದನವನದ ಮುದ್ದಾದ ಯುವಜೋಡಿ ಹರಿಪ್ರಿಯಾ (Haripriya) – ವಸಿಷ್ಠ ಸಿಂಹ (Vasistha Simha), ಜಂಟಿ ಫೋಟೋಶೂಟ್‌ ಅನ್ನು ಹಂಚಿಕೊಂಡಿದೆ. ಹರಿಪ್ರಿಯಾ ಬೇಬಿ ಬಂಪ್‌ (Baby bump) ಪ್ರದರ್ಶಿಸಿ ತಮ್ಮ ಹೊಸ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

ಈ ಜೋಡಿ ಇತ್ತೀಚೆಗಷ್ಟೇ ತಾವು ಪೋಷಕರಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈ ಜೋಡಿ ಮಾಲ್ಡೀವ್ಸ್ ಗೆ ಟ್ರಿಪ್ ಮಾಡಿದ್ದರು. ಅಲ್ಲಿ ಸಮಯ ಕಳೆದ ವಿಡಿಯೋವನ್ನು ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ, ಹರಿಪ್ರಿಯಾಗೆ 5 ತಿಂಗಳು ಎಂಬುದನ್ನು ತಿಳಿಸಿದ್ದರು. ಅದು ಹರಿಪ್ರಿಯಾ ಹುಟ್ಟುಹಬ್ಬದ ಸಂದರ್ಭವೂ ಆಗಿತ್ತು.

ನವಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ದಿನ ವಿಡಿಯೋ ಮೂಲಕ ಈ ಜೋಡಿ, ಕರ್ನಾಟಕ ರಾಜ್ಯೋತ್ಸವ ಶುಭ ಕೋರಿ, ನಾವು ನಮ್ಮ ಕುಡಿಗಾಗಿ ಎದುರು ನೋಡುತ್ತಿದ್ದೇವೆ, ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳು ಇರಲಿ ಎಂದಿದ್ದರು. ಇದೀಗ ಹೊಸ ವರ್ಷದ ಮೊದಲ ದಿನ ವಿಶೇಷ ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದಾರೆ. ಆ ಮೂಲಕ ಹೊಸ ವರ್ಷವನ್ನು ಮತ್ತಷ್ಟು ಸುಂದರವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ರೀಲ್ಸ್ ಶೇರ್ ಮಾಡಿದ್ದು, ಪೋಸ್ ಕೊಟ್ಟ ಫೋಟೊ ಹಂಚಿಕೊಂಡಿದ್ದು, ಬೇಬಿ ಬಂಪ್ ಹೈಲೈಟ್ ಮಾಡಲಾಗಿದೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇಬ್ಬರೂ ನೀಲಿ ಬಣ್ಣದ ಪ್ಯಾಂಟ್ ಮತ್ತು ಬ್ಲೇಜರ್ ಧರಿಸಿದ್ದು, ವೈಟ್ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಹರಿಪ್ರಿಯಾ ತಮ್ಮ ಹೊಟ್ಟೆಯನ್ನು ಹಿಡಿದು ಪೋಸ್ ನೀಡಿದ್ದಾರೆ. ಈ ಫೋಟೊ ಶೂಟನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ನೆಟಿಜೆನ್‌ಗಳು ಜೋಡಿಯ ಫೋಟೋ ಶೂಟನ್ನು ಮೆಚ್ಚಿಕೊಂಡಿದ್ದು, ಆರೋಗ್ಯಯುತ ಮಗುವಿಗಾಗಿ ಶುಭ ಹಾರೈಸಿದ್ದಾರೆ. ಜೂನಿಯರ್ ಸಿಂಹ ಸದ್ಯದಲ್ಲೇ ಬರಲಿ ಎಂದಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಹಲವು ವರ್ಷಗಳಿಂದ ಪ್ರೀತಿಸಿ 2023ರ ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2024ರಲ್ಲಿ ಐದು ತಿಂಗಳು ಕಳೆದ ಮೇಲೆ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ಈ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಹರಿಪ್ರಿಯಾ ತಾಯಿಯಾಗಲಿದ್ದಾರೆ.