Tuesday, 3rd December 2024

HD Kumaraswamy: ಪೂರ್ತಿ ಆಡಿಯೊ ಬಿಟ್ರೆ ಇವರ ಬಂಡವಾಳ ಗೊತ್ತಾಗುತ್ತೆ; ಡಿ.ಕೆ. ಸುರೇಶ್‌ಗೆ ಎಚ್‌ಡಿಕೆ ತಿರುಗೇಟು

HD Kumaraswamy

ಚನ್ನಪಟ್ಟಣ/ ರಾಮನಗರ: ಸಿಡಿ ಬ್ರದರುಗಳಿಗೆ ಸಿಡಿ, ವಿಡಿಯೊ, ಆಡಿಯೊ ಮಾಡುವುದೇ ಕೆಲಸ. ಹಾಸನದಲ್ಲಿ ಇಂಥದೇ ಷಡ್ಯಂತ್ರ ಮಾಡಿದರು. ಚನ್ನಪಟ್ಟಣದಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣಾ ಪ್ರಚಾರದ ನಡುವೆ ಚನ್ನಪಟ್ಟಣದ ಸೋಗಾಲಪಾಳ್ಯದಲ್ಲಿ ಪ್ರತಿಕ್ರಿಯಿಸಿದ ಸಚಿವರು, ನಾನು ವಿಧಾನಸೌಧದಲ್ಲಿ ಮಾತನಾಡಿರುವ ಆಡಿಯೊವನ್ನು ಅವರು ಎಲ್ಲಾ ಸಭೆಗಳಲ್ಲಿ ಕೇಳಿಸುತ್ತಿದ್ದಾರೆ. ಅವರಿಗೆ ಎಷ್ಟು ಹತಾಶೆ, ಸೋಲಿನ ಭೀತಿ ಕಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೇವಲ ಒಂದು ತುಣುಕು ಕತ್ತರಿಸಿ ಬಿಡುವುದಲ್ಲ, ಪೂರ್ಣ ಆಡಿಯೊ ಬಿಡಲಿ, ಆಗ ಅವರ ಮರ್ಯಾದೆ ಏನು ಎನ್ನುವುದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಆಡಿಯೊ ಬಿಡುಗಡೆ ಡಿ.ಕೆ. ಸುರೇಶ್ ಬಗ್ಗೆ ಕೆಂಡಾಮಂಡಲರಾದ ಎಚ್‌ಡಿಕೆ ಸಿಡಿ ಆಡಿಯೊ, ವಿಡಿಯೊ ಬಿಡುವುದಲ್ಲಿ ಡಿ.ಕೆ. ಸಹೋದರರು ನಿಪುಣರು. ಅವರು ಇಂತಹ ದಂಧೆಗಳನ್ನೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಆ ಆಡಿಯೊ ಹಳೆಯದು. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು. ಒಂದು ವಾರದಿಂದ ಅದನ್ನು ಕತ್ತರಿಸಿ ಹಂಚುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದ ಆಡಿಯೊ ಅದು. ಇಸ್ಪೀಟ್, ಕ್ರಿಕೆಟ್‌ ಬೆಟ್ಟಿಂಗ್ ದಂಧೆ ನಡೆಸುವವರು ಐದು ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ಅದನ್ನೇ ಇವರು ಚನ್ನಪಟ್ಟಣಕ್ಕೆ ತಂದು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಇವರಂತೆ ನಾನು ಅಕ್ರಮ ಮಾಡಿ ಚುನಾವಣೆ ಮಾಡುವುದಿಲ್ಲ. ನನ್ನ ಚುನಾವಣೆಯನ್ನು ಕಾರ್ಯಕರ್ತರೇ ಮಾಡುತ್ತಾರೆ, ಅವರೇ ಮತ ಕೇಳುತ್ತಾರೆ. ನಾನು ಆ ರೀತಿ ಮಾತನಾಡುವ ಅವಶ್ಯಕತೆ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದವರು ಇಂತವರಿಂದ ನಗಣ್ಯ ಆಗುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಹೇಳಿದ್ದೆ. ಆ ಆಡಿಯೊವನ್ನು ಪೂರ್ತಿ ಹಾಕಿ ಕೇಳಿಸಿದರೆ ಇವರ ಬಂಡವಾಳ, ಯೋಗ್ಯತೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಹಾಸನದಲ್ಲೂ ಇದಕ್ಕಿಂತ ಕೆಟ್ಟದಾಗಿ ಮಾಡಿದರು. ನನ್ನ ಮೇಲೆ ಹೇಳಲು ಇವರಿಗೆ ಏನೂ ಇಲ್ಲವಲ್ಲ, ಅದಕ್ಕಾಗಿ ಇಂಥ ಕೆಟ್ಟ ಚೇಷ್ಟೆ ಮಾಡುತ್ತಿದ್ದಾರೆ. ಯೋಗೇಶ್ವರ ಅವರ ಸಂಸ್ಕೃತಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಇವರೆಲ್ಲಾ ಸಿಡಿ ಪ್ಲೈಯರ್ಸ್ ಆ ಸಂತತಿಯಲ್ಲಿ ಬಂದವರು. ಇದಕ್ಕೆಲ್ಲಾ ನಮ್ಮ ಜನ ಬೆಲೆ ಕೊಡುತ್ತಾರಾ? ನಾನು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊರಟಿದ್ದೇನೆ. ಅವರು ಏನೇ ಮಾತನಾಡಿದರೂ ಚನ್ನಪಟ್ಟಣದ ಜನ ನವೆಂಬರ್ 13ಕ್ಕೆ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.

ನಿಖಿಲ್ ಪರವಾಗಿ ದೇವೇಗೌಡರು, ಯಡಿಯೂರಪ್ಪ ಪ್ರಚಾರ

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಬುಧವಾರ ಮತಯಾಚನೆ ನಡೆಸಿದರು. ಇಬ್ಬರೂ ಹಿರಿಯ ನಾಯಕರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರಲ್ಲದೆ, ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಅಭಿವೃದ್ಧಿಪರ ರಾಜಕಾರಣಕ್ಕೆ ಮಣೆ ಹಾಕಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ವೈಫಲ್ಯ ಎತ್ತಿಹಿಡಿದ ಮಾಜಿ ಪ್ರಧಾನಿ

ಪ್ರಚಾರ ಸಭೆಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಡಳಿತ ವೈಫಲ್ಯಗಳನ್ನು ಜನರ ಮುಂದೆ ಎತ್ತಿ ಹಿಡಿದ ದೇವೇಗೌಡರು, ರಾಜ್ಯ ಖಜಾನೆ ಖಾಲಿ ಆಗಿದೆ, ರಾಜ್ಯ ದಿವಾಳಿ ಆಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ. ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿ, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ದೊಡ್ಡ ಪ್ರಮಾಣದ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದರಲ್ಲಿ ನನಗೆ ಯಾವುದೇ ಸಂಶಯ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಜೀವ ಬೆದರಿಕೆ ಆರೋಪ; FIR ರದ್ದು ಕೋರಿ ಹೈಕೋರ್ಟ್‌ಗೆ ಎಚ್‌ಡಿಕೆ, ನಿಖಿಲ್‌ ಕುಮಾರಸ್ವಾಮಿ ಅರ್ಜಿ

2006ರಲ್ಲಿ ನಾನು ಮತ್ತು ಕುಮಾರಸ್ವಾಮಿ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್, ಸಂಧ್ಯಾ ಸುರಕ್ಷಾ ಸೇರಿ ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ಇದೆಲ್ಲವನ್ನು ಜನತೆ ಮರೆಯಬಾರದು ಇಂದು ಅವರು ಮನವಿ ಮಾಡಿದರು.