Tuesday, 22nd October 2024

Heritage Site: ವಿಜಯಪುರದಲ್ಲಿ 1,494 ಎಕರೆ ಅರಣ್ಯ ಇನ್ನು ಸಿದ್ದೇಶ್ವರ ಶ್ರೀಗಳ ನೆನಪಿನ ಪಾರಂಪರಿಕ ತಾಣ

heritage site

ಬೆಂಗಳೂರು: ವಿಜಯಪುರದ (Vijayapura news) ಮಮದಾಪುರ ಗ್ರಾಮ ಪಂಚಾಯಿತಿಯಲ್ಲಿ 1,494.38 ಎಕರೆ ಮೀಸಲು ಅರಣ್ಯ (Reserved forest) ಭೂಮಿಯನ್ನು ‘ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆಯ ತಾಣ’ (Shri Siddeshwara Swamiji Biodiversity Heritage Site) ಎಂದು ರಾಜ್ಯ (Karnataka Government) ಸರ್ಕಾರ ಘೋಷಿಸಿದೆ. ಸಿದ್ದೇಶ್ವರ ಶ್ರೀಗಳ (Siddeshwara Swamiji) ಪುಣ್ಯತಿಥಿಯಾದ ಜನವರಿ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiaih) ಅವರು ಪಾರಂಪರಿಕ ತಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬುಧವಾರ ಈ ಕುರಿತು ಸರಕಾರ ಅಧಿಸೂಚನೆ ಹೊರಡಿಸಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸುದ್ದಿಗಾರರಿಗೆ ತಿಳಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೇ.5ರಷ್ಟು ಅರಣ್ಯ ಪ್ರದೇಶವಿದ್ದು, ವಿಜಯಪುರದಲ್ಲಿ ಶೇ.1ಕ್ಕಿಂತ ಕಡಿಮೆ ಇದೆ. ಈ ಘೋಷಣೆಯು ಹಸಿರು ಹೊದಿಕೆಯ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ ಎಂದು ಸಚಿವರು ಹೇಳಿದರು.

ಅರಣ್ಯ ಭೂಮಿಯನ್ನು ಪಾರಂಪರಿಕ ತಾಣವೆಂದು ಘೋಷಿಸುವುದರಿಂದ ಸಸ್ಯ ಮತ್ತು ಪ್ರಾಣಿ ಸಂಕುಲದ ರಕ್ಷಣಾ ಕ್ರಮಗಳನ್ನು ಹೆಚ್ಚಿಸಬಹುದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಜಯಪುರದಲ್ಲಿ ಅರಣ್ಯ ಇಲಾಖೆಗೆ ಒಳಪಡುವ ಒಟ್ಟು ಜಮೀನು 2 ಸಾವಿರ ಹೆಕ್ಟೇರ್. ಈ ಪಾರಂಪರಿಕ ತಾಣದಲ್ಲಿ ಎರಡು ಕೆರೆಗಳು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿದೆ.

‘ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾಡಿನಲ್ಲಿ ಜನವಸತಿ ಇಲ್ಲ. ಬಹಮನಿ ಸಾಮ್ರಾಜ್ಯವು ಈ ಭೂಮಿಯನ್ನು ಸಂರಕ್ಷಿಸಿತ್ತು. ಇದು ಮೊದಲು ಜಲಮೂಲಗಳಿಂದ ಆವೃತವಾಗಿತ್ತು. 200 ಹೆಕ್ಟೇರ್‌ನಲ್ಲಿ ಹನಿ ನೀರಾವರಿ ಮೂಲಕ ಹಸಿರು ಹೊದಿಕೆ ಹೆಚ್ಚಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

ವಿಜಯಪುರ ರಾಜ್ಯದಲ್ಲಿಯೇ ಅತಿ ಕಡಿಮೆ ಅರಣ್ಯ ಹೊಂದಿದೆ ಎಂದು ಅಧಿಕಾರಿ ಗಮನ ಸೆಳೆದರು. “ಸಾಮಾನ್ಯವಾಗಿ ಪಾರಂಪರಿಕ ತಾಣಗಳು ಮತ್ತು ಸಂರಕ್ಷಣಾ ಮೀಸಲು ತಾಣಗಳನ್ನು ಬೆಂಗಳೂರು ಸುತ್ತಮುತ್ತ ಅಥವಾ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಘೋಷಿಸಲಾಗುತ್ತದೆ. ಯಾವಾಗಲೂ ಬಯಲು ಸೀಮೆಯ ಭೂಮಿಗೆ ಇಂತಹ ಟ್ಯಾಗ್ ಸಿಗುವುದಿಲ್ಲ” ಎಂದಿದ್ದಾರೆ.

ಈ ಪಾರಂಪರಿಕ ತಾಣವು ಒಣ ಎಲೆ ಉದುರುವ ಗಿಡಗಳು ಮತ್ತು ಕುರುಚಲು ಅರಣ್ಯ ಪ್ರದೇಶವಾಗಿದೆ. ಚಿರತೆಗಳು, ಭಾರತೀಯ ನರಿಗಳು, ಸ್ಟ್ರಿಪ್ಡ್ ಹೈನಾಗಳು ಮತ್ತು ಇತರ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿದೆ ಎಂದು ಖಂಡ್ರೆ ಹೇಳಿದರು. ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಯವರ ಕೊಡುಗೆಗಳನ್ನು ಪ್ರದರ್ಶಿಸುವ ವಿಜ್ಞಾನ ಕೇಂದ್ರ ಮತ್ತು ವಸ್ತುಸಂಗ್ರಹಾಲಯವನ್ನು ಸಹ ಸ್ಥಾಪಿಸಲಾಗುತ್ತದೆ.

ಇದನ್ನೂ ಓದಿ: ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ನಿಂದ “ಡಾಟರ್ ಆಫ್ ಪ್ರಾವಿಡೆನ್ಸ್” ಚಿತ್ರಕಲಾ ಪ್ರದರ್ಶನ