ಬೆಂಗಳೂರು: ಫೆಂಗಲ್ ಚಂಡಮಾರುತ ಪ್ರಭಾವದಿಂದ ರಾಜಧಾನಿ ಬೆಂಗಳೂರು, ಚಾಮರಾಜನಗರ, ಕೋಲಾರ ಸೇರಿ ಹಲವೆಡೆ ಕಳೆದ ರಾತ್ರಿ ಭರ್ಜರಿ ಮಳೆಯಾಗಿದ್ದು, ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಕೂಡ ಮೆಜೆಸ್ಟಿಕ್, ವಿಜಯನಗರ, ಆರ್.ಆರ್.ನಗರ, ರಾಜಾಜಿನಗರ, ಕೆ.ಆರ್.ಮಾರುಕಟ್ಟೆ ಸೇರಿ ವಿವಿಧೆಡ ಭಾರಿ ಮಳೆಯಾಯಿತು. ಇಂದು ಬೆಂಗಳೂರು ದಕ್ಷಿಣದ ದೊಡ್ಡ ತೋಗೂರಿನಲ್ಲಿ ಅತ್ಯಧಿಕ 40.5 ಮಿ.ಮೀ. ಮಳೆಯಾಗಿದೆ.
ರಾಜಧಾನಿಯಲ್ಲಿ ಮದ್ಯಾಹ್ನ ಧಾರಾಕಾರ ಮಳೆಯಿಂದ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂದು ಕೂಡ ಕೋಲಾರ, ಚಾಮರಾಜನಗರ, ಉಡುಪಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
#Nowcast: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಯ ಪ್ರತ್ಯೇಕ ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.ಐಎಂಡಿ ಬೆಂಗಳೂರು.
— Karnataka State Natural Disaster Monitoring Centre (@KarnatakaSNDMC) December 3, 2024
Issued by : KSDMA
Validity Time : 03 Dec, 19:00 to 03 Dec, 22:00
Alert generated -CAP-SACHET. pic.twitter.com/bcvdl9kePN
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಡಿಸೆಂಬರ್ 4ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 5 ಮತ್ತು 6ರಂದು ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಕಂಟ್ರೋಲ್ ರೂಂ ತೆರೆದಿದೆ. ಸಹಾಯಕ್ಕಾಗಿ ಕಂಟ್ರೋಲ್ ರೂಂ ನಂಬರ್ 08262 238950ಗೆ ಕರೆ ಮಾಡುವಂತೆ ಸೂಚನೆ ನೀಡಲಾಗಿದೆ.