Tuesday, 3rd December 2024

Karnataka Rain: ಶಿವಮೊಗ್ಗ, ಕಾಫಿನಾಡಿನಲ್ಲಿ ಮಳೆಯಾರ್ಭಟ; ಮನೆಗಳಿಗೆ ನುಗ್ಗಿದ ನೀರು, ನಾಳೆಯೂ ಭಾರಿ ಮಳೆ ನಿರೀಕ್ಷೆ

ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧೆಡೆ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು(Karnataka Rain), ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಯಿಂದ ಶಿವಮೊಗ್ಗದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯ ದತ್ತಪೀಠದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಶಿವಮೊಗ್ಗ ನಗರದ ಹೊಸಮನೆ- ವಿನೋಬನಗರ ಮಧ್ಯದ ಸಣ್ಣ ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಕಾಶಿಪುರ ತಮಿಳು ಕ್ಯಾಂಪ್, ಗೋಪಾಲ ಗೌಡ ಬಡಾವಣೆ, ಆರ್‌ಎಂಎಲ್‌ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಎದುರಿಸುವಂತಾಗಿದೆ.

ತರೀಕೆರೆ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಹೊಲ-ಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು, ಸಣ್ಣಬೋಕಿಕೆರೆ, ಗೊಲ್ಲರಹಳ್ಳಿ ಹೊಲಗಳು ಜಲಾವೃತಗೊಂಡಿದೆ. ಕೋರನಹಳ್ಳಿ, ಚಟ್ಟನಹಳ್ಳಿ, ಶಿವಪುರ ಭಾಗದಲ್ಲಿ ಹಳ್ಳಿ ಹರಿದು ಭಾರೀ ಅನಾಹುತವಾಗಿದೆ. ಗೊಲ್ಲರಹಳ್ಳಿಯಲ್ಲಿ ಹೂವಿನ ತೋಟಗಳಲ್ಲಿ ಮಳೆ ‌ನೀರು ನಿಂತಿದೆ.

ಇನ್ನು ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ದತ್ತಪೀಠದ ರಸ್ತೆಯಲ್ಲಿ 3 ಅಡಿ ಎತ್ತರದಲ್ಲಿ ನೀರು ಹರಿದಿದೆ. ಮುಗಿಲೆತ್ತರದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹೊಳೆಯಂತೆ ನೀರು ಹರಿಯುತ್ತಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ಹೈರಾಣಾಗಿದ್ದು, ಮುಳ್ಳಯ್ಯನಗಿರಿ, ದತ್ತಪೀಠ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಮಲೆನಾಡಿನಲ್ಲಿ ನಾಳೆಯು ಮುಂದುವರಿಯಲಿದೆ ಮಲೆಯ ಅಬ್ಬರ

ಅಕ್ಟೋಬರ್ 27 ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಅಕ್ಟೋಬರ್ 21 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ, ನಂತರ ಮಳೆ ತೀವ್ರತೆ ಮತ್ತು ಮಳೆ ವಿತರಣೆ ಕಡಿಮೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡು ಜಿಲ್ಲೆಗಳಿಗೆ ಅಕ್ಟೋಬರ್ 22 ರವರೆಗೆ ಚದುರಿದ ಮಲೆಯಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 23 ರಿಂದ ಮಳೆ ತೀವ್ರತೆ ಮತ್ತು ಮಳೆ ವಿತರಣೆ ಕಡಿಮೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 26 ರಿಂದ ಉತ್ತರ ಒಳನಾಡು ಜಿಲ್ಲೆಗಳ ಉತ್ತರ ಭಾಗಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಕ್ಟೋಬರ್ 24 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ, ನಂತರ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ.