ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ, ಬೆಂಗಳೂರು
ಎರಡು ಇಲಾಖೆ ಒಂದಾಗಿ ಕೆಲಸ ಮಾಡುವಂತೆ ಸಿಎಂಗೆ ಸಲಹೆ
ರಾಜ್ಯದ ಪರಿಸರ ಸಂರಕ್ಷಣೆ, ಕಾಡುಪ್ರಾಣಿಗಳ ರಕ್ಷಣೆಗೆಂದು ರಾಜ್ಯ ಸರಕಾರ ಕೋಟಿ ಕೋಟಿ ಹಣ ವ್ಯಯಿಸಿದರೂ, ವ್ಯವಸ್ಥೆ ಯಲ್ಲಿನ ದೋಷದಿಂದ ಬೇಟೆಗಾರರಿಂದ ಕಾಡುಪ್ರಾಣಿಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ.
ಹೌದು, ರಾಜ್ಯದಲ್ಲಿ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿ ಸೇರಿದಂತೆ ಹಲವು ಸಂಘಟನೆಗಳು ವನ್ಯಜೀವಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರೂ ಪೊಲೀಸ್ ಹಾಗೂ ಅರಣ್ಯ ಇಲಾಖೆ ನಡುವಿನ ಸಮನ್ವಯತೆಯ ಕೊರತೆಯಿಂದ, ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರನ್ನು ಪರಿಸರವಾದಿಗಳು ಹೇಳುತ್ತಿದ್ದಾರೆ.
ಬೇಟೆಯಲ್ಲಿ ಭಾಗಿಯಾಗುವ ಬೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ. ಸೆರೆ ಹಿಡಿದ ಬೇಟೆಗಾರರನ್ನು ನ್ಯಾಯಾಲಯದ ವಶಕ್ಕೆ ನೀಡುವ ಅಧಿಕಾರ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಇದೆ ಹೊರತು, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ. ವಿಚಾರಣೆ ವಿಷಯದಲ್ಲಿ ಅರಣ್ಯ ಇಲಾಖೆಗೆ ಸಹಕರಿಸಬೇಕಿದ್ದ ಪೊಲೀಸ್ ಇಲಾಖೆ ಈ ಬಗ್ಗೆೆ ಸೂಕ್ತ ಸರಕಾರ ನೀಡದಿರುವುದರಿಂದ, ಅನೇಕ ಬೇಟೆಗಾರರು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡುವಿನ ಸಮನ್ವಯತೆ ಸಮಸ್ಯೆಯಿಂದ ಕಾಡು ನಾಶದೊಂದಿಗೆ, ಕಾಡು ಪ್ರಾಣಿ ಗಳಿಗೂ ಭಾರಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಎರಡು ಇಲಾಖೆ ಜತೆಜತೆಯಾಗಿ ಕಾರ್ಯ ನಿರ್ವಹಿಸಿಬೇಕಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಸಿಎಂಗೆ ಮನವಿ ಪತ್ರ
ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಡುವಿನ ಸಮನ್ವಯತೆ ಕೊರತೆಯನ್ನು ನೀಗಿಸಲು ಡಿಜಿ ಪ್ರವೀಣ್ ಸೂದ್ ಅವರು ಲಿಖಿತ ಆದೇಶ ಹೊರಡಿಸಿದ್ದು, ಇದರಲ್ಲಿ ಬೇಟೆಗಾರರ ವಿರುದ್ಧ ಸೂಕ್ತ ಐಪಿಎಸ್ ಕಾಯಿದೆ ಬಳಸಿಕೊಂಡು ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೂ ಇದು ಜಾರಿಯಾಗುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡುವೆ ಸಮನ್ವಯತೆ ಸಾಧಿಸುವ ರೀತಿಯಲ್ಲಿ ಕ್ರಮವಹಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಜೋಸೆಫ್ ಹೂವರ್ ಪತ್ರ ಬರೆದಿದ್ದಾರೆ.
400ಕ್ಕೂ ಹೆಚ್ಚು ಚಿರತೆ ಬಲಿ
ಇಲಾಖೆ ನಡುವಿನ ಈ ಗೊಂದಲದಿಂದ ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ಕೋರ್ಟ್ ಮುಂದೆ ಹಾಜರು ಪಡಿಸಿದರೂ, ಪ್ರಕರಣ ದಾಖಲು ಮಾಡುವಲ್ಲಿ ಎಡವುದರಿಂದ ಬೇಟೆಗಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ತಪ್ಪಿಸಿಕೊಂಡ ಬೇಟೆಗಾರರು ಪುನಃ ಬೇಟೆಗೆ ಹೋಗಿ, ಹಲವು ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಚೆನ್ನಮ್ಮನ ಅಚ್ಚುಕಟ್ಟೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಚಿರತೆ ಉಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದೊಂದು ವರ್ಷದಲ್ಲಿ 400ಕ್ಕೂ ಹೆಚ್ಚು ಚಿರತೆಗಳು ಬೇಟೆಗಾರರ ಬೇಟೆ ಬಲಿಯಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಸರಕಾರ ಕೂಡಲೇ ಗಮನಹರಿಸಬೇಕು ಎನ್ನುವುದು ಪರಿಸರವಾದಿಗಳ ಆಗ್ರಹವಾಗಿದೆ.
ಕೋಟ್
ಅರಣ್ಯ ಇಲಾಖೆಯವರಿಗೆ ಬೇಟೆಗಾರರನ್ನು ಹಿಡಿದರೂ ಶಿಕ್ಷೆ ನೀಡುವ ಅಥವಾ ಜೈಲಿಗೆ ಹಾಕುವ ಅಧಿಕಾರವಿಲ್ಲ. ಪೊಲೀಸ್
ಇಲಾಖೆಯವರು ಇದು ಅರಣ್ಯಾಧಿಕಾರಿಗಳ ಕೆಲಸವೆಂದು ಸುಮ್ಮನಾಗುತ್ತಾರೆ. ಆದ್ದರಿಂದ ಬೇಟೆಗಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕು.
– ಜೋಸೆಫ್ ಹೂವರ್ ಸದಸ್ಯರು. ರಾಜ್ಯ ವನ್ಯಜೀವಿ ಮಂಡಳಿ