ಬೆಂಗಳೂರು: ಮಂಗನ ಕಾಯಿಲೆ (Monkey Fever) ಅಥವಾ ಕ್ಯಾಸನೂರು ಕಾಡಿನ ಕಾಯಿಲೆ ಲಸಿಕೆ (KFD Vaccine) 2026ಕ್ಕೆ ಲಭ್ಯವಾಗಲಿದೆ. ಲಸಿಕೆ ತಯಾರಿಕೆ ಪ್ರಗತಿಯಲ್ಲಿದ್ದು, ಈ ನಿಟ್ಟಿನಲ್ಲಿ ಐಸಿಎಂಆರ್ ಜೊತೆ ಕೂಡ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ
ಅಲ್ಲಿಯವರೆಗೂ ಮಂಗನ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ಸಾವುಗಳಾಗದಂತೆ ಎಚ್ಚರಿಕೆ ವಹಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಶಿರಸಿಯ ಶಾಸಕ ಭೀಮಣ್ಣ ನಾಯ್ಕ್, ಹಾಗೂ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡಿದ್ದರು. ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಸಚಿವರು ಮಲೆನಾಡು ಭಾಗದ ಶಾಸಕರ ಅಭಿಪ್ರಾಯ ಆಲಿಸಿದರು. ಪ್ರತಿ ವರ್ಷ ಜನವರಿ ತಿಂಗಳಿನಿಂದ ಆರಂಭವಾಗಿ ಬೇಸಿಗೆ ಕಾಲದಲ್ಲಿ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತದೆ. ಈ ಬಾರಿ ಆರಂಭದಲ್ಲೇ ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಗಮನ ಹರಿಸಿ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಮುಂಜಾಗರೂಕತೆಯಾಗಿ ಮಂಗನ ಕಾಯಿಲೆ ಇರುವ ಪ್ರದೇಶಗಳಲ್ಲಿ ಯಾರಿಗೆ ಜ್ವರ ಬಂದರೂ ಕಡ್ಡಾಯವಾಗಿ ಟೆಸ್ಟಿಂಗ್ ಮಾಡಿ ಚಿಕಿತ್ಸೆ ಅರಂಭಿಸಬೇಕು. ಇದರಿಂದ ಆರಂಭದಲ್ಲಿಯೇ ಕೆಎಫ್.ಡಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದರು.
DEPA ತೈಲ ಅಗತ್ಯ ದಾಸ್ತಾನು ಇರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಒಂದು ಲಕ್ಷ DEPA ತೈಲ ದಾಸ್ತಾನಿದೆ. ಇನ್ನೂ ಒಂದುವರೆ ಲಕ್ಷ ಬಾಟಲ್ ಸರಬರಾಜಿಗೆ ಔಷಧಿ ಸರಬರಾಜು ನಿಗಮಕ್ಕೆ ತಿಳಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಔಷಧಿಗಳ ದಾಸ್ತಾನು ಇರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ಒದಗಿಸಿದರು. ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಆರಂಭದಿಂದಲೇ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೆ.ಎಫ್.ಡಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು, ತಲವಾಟ, ಹಿರೇಮನೆ ಸೇರಿದಂತೆ, ಶರಾವತಿ ಕಣಿವೆಯ ಅಂಚಿನ ಗ್ರಾಮಗಳಾದ ಭೇಟಿ ನೀಡಿದ ಸಚಿವರು, ಗ್ರಾಮಸ್ಥರ ಅಹವಾಲುಗಳನ್ನ ಸ್ವೀಕರಿಸಿದರು. ಮಂಗನ ಕಾಯಿಲೆ ಕುರಿತಂತೆ ಗ್ರಾಮಸ್ಥರು ಈಗಿನಿಂದಲೇ ಹೆಚ್ಚಿನ ಜಾಗೃತಿ ವಹಿಸುವಂತೆ ಕರೆ ನೀಡಿದ ಸಚಿವರು, ಸರ್ಕಾರದಿಂದ ಅಗತ್ಯ ಆರೋಗ್ಯ ಸೇವೆ ಒದಗಿಸಲಾಗುವುದು. ಮಂಗನ ಕಾಯಿಲೆಯಿಂದ ಯಾವುದೇ ಒಂದು ಸಾವುಗಳಾಗಬಾರದು. ಮಂಗನ ಕಾಯಿಲೆ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಮುಂಜಾಗೃತಿ ವಹಿಸಿದರೆ ಸಾವುಗಳನ್ನ ತಡೆಯಬಹುದು. ಗ್ರಾಮಗಳಲ್ಲಿ ಜನರಿಗೆ ಮಂಗನ ಕಾಯಿಲೆ ಹರಡುವ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಗಳನ್ನ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಸಿದ್ದಾಪುರ ಹಾಗೂ ಸಾಗರ ತಾಲೂಕಿನ ಮಂಗನ ಕಾಯಿಲೆ ಕಳೆದ ವರ್ಷ ಹೆಚ್ಚು ಕಾಣಿಸಿಕೊಂಡಿತ್ತು. ಈ ಬಾರಿ ಮುಂಚಿತವಾಗಿಯೇ ಜಾಗೃತಿ ವಹಿಸಲಾಗುತ್ತಿದೆ ಎಂದರು.
ಕೆಎಫ್.ಡಿ ಪೀಡಿತ ಪ್ರದೇಶಗಳಿಗಾಗಿಯೇ ಪ್ರತ್ಯೇಕ ಸಂಚಾರಿ ಮೊಬೈಲ್ ಕ್ಲಿನಿಕ್ ನೀಡುವುದಾಗಿ ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗ್ರಾಮಸ್ಥರಿಗೆ ಭರವಸೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ವಿನ ಸೌಲಭ್ಯ ಒದಗಿಸಿಕೊಡುವುದರ ಜೊತೆಗೆ, ವೈದ್ಯರಿಗೆ ಸ್ಥಳೀಯ ಮಟ್ಟದಲ್ಲಿ ಉಳಿದುಕೊಳ್ಳಲು ಮೂಲಸೌಕರ್ಯಗಳನ್ನ ಕಲ್ಪಿಸಲಾಗುವುದು ಎಂದರು.
ಇದನ್ನೂ ಓದಿ: ಮಂಗನ ಕಾಯಿಲೆ ಶೋಧದ ಹಾದಿಯಲ್ಲಿ