Tuesday, 3rd December 2024

Nagamangala News: ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಮಾದರಿಯಾದ ಪೋಷಕರು

Nagamangala News

ನಾಗಮಂಗಲ: ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಸಮಾಜಕ್ಕೆ ಮಾದರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ (Nagamangala News) ನಡೆದಿದೆ.

ತಾಲೂಕಿನ ಬೆಳ್ಳೂರಿನ ನಿವಾಸಿಯಾದ ರಾಜಣ್ಣ ಎಂಬುವರ ಮಗ ನಟರಾಜ್(30) ಅ.22ರ ಮಂಗಳವಾರ ರಾತ್ರಿ ಬೆಳ್ಳೂರು ಸಮೀಪ ಮಾರುತಿಪುರದ ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದರು. ಮೃತ ನಟರಾಜ್ ತನ್ನ ಬಾಮೈದ ಮಾಧವ ಎಂಬುವರ ಜತೆಗೆ ಬೈಕ್‌ನಲ್ಲಿ ರಾತ್ರಿ 10.45ರ ಸುಮಾರಿನಲ್ಲಿ ಬರುತ್ತಿದ್ದ ವೇಳೆ ಎದುರಿಗೆ ಬಂದ ಅಪರಿಚಿತ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ನೆಲಕ್ಕುರುಳಿದ ನಟರಾಜ್ ತಲೆಗೆ ಗಂಭೀರವಾಗಿ ಗಾಯವಾಗಿ, ಬಾಮೈದ ಮಾಧವನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.

ನಟರಾಜ್‌ನನ್ನು ಆಟೋದಲ್ಲಿ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗಾಯಾಳುವನ್ನು ಪರೀಕ್ಷಿಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತ ಪಡಿಸಿದ್ದರು. ಅಪಘಾತ ನಡೆದ ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯ ಸಂಬಂಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆ ವೈದ್ಯರು, ಗಾಯಾಳು ನಟರಾಜ್‌ನ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಕುಟುಂಬಸ್ಥರಿಗೆ ಮನವರಿಕೆ ಮಾಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕಣ್ಣುಗಳು ಮತ್ತು ಕಿಡ್ನಿಯನ್ನು ಅಗತ್ಯವಿದ್ದರಿಗೆ ಅಳವಡಿಸಿದ್ದಾರೆ. ಇನ್ನು ಹೃದಯ ಸೇರಿ ಇತರ ಅಂಗಾಂಗಗಳನ್ನು ಬೆಂಗಳೂರಿನ ಪ್ರತಿಷ್ಟಿತ ಆಸ್ಟರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Gruha Arogya Scheme: ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿಯಿಂದ ಅ.24ರಂದು ಚಾಲನೆ

ಈ ಬಗ್ಗೆ ಮೃತ ನಟರಾಜ್ ತಂದೆ ರಾಜಣ್ಣ ಪ್ರತಿಕ್ರಿಯಿಸಿ, ನಮ್ಮ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ದೇವರು ಅವನಿಗೆ ಇಷ್ಟೇ ಆಯಸ್ಸು ಕೊಟ್ಟಿದ್ದ ಎನಿಸುತ್ತದೆ. ಆದರೆ ಅವನ ದೇಹದ ಅಂಗಾಂಗಗಳು ಸುಮಾರು 8 ಜನರ ಜೀವನ ಉಳಿಸುತ್ತವೆ ಎಂದು ವೈದ್ಯರು ನೀಡಿದ ಸಲಹೆಯ ಮೇರೆಗೆ ಮಗನ ಅಂಗಾಂಗಗಳನ್ನು ದಾನ ಮಾಡಿದ್ದೇವೆ. ಮಗನ ಸಾವು ನೋವು ತಂದಿದೆ. ಸಾವಿನ ನಡುವೆಯೂ ನಮ್ಮ ಮಗ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.