ಚನ್ನಪಟ್ಟಣ : ತಾಲೂಕಿನ ಮತ್ತಿಕೆರೆ ಗ್ರಾಮ ಪಂಚಾಯಿತಿಯಲ್ಲಿ ನಾಮಪತ್ರ ಅರ್ಜಿ ಫಾರಂಗಳಿಗೆ ತಲಾ 20 ರೂ. ವಸೂಲಿ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ರಿಟರ್ನಿಂಗ್ ಅಧಿಕಾರಿ ಪುಟ್ಟಸ್ವಾಮಿ ಅವರಿಗೆ ತಹಸೀಲ್ದಾರ್ ನಾಗೇಶ್ ನೋಟೀಸ್ ಜಾರಿ ಗೊಳಿಸಿದ್ದಾರೆ.
ಜವಬ್ದಾರಿಯುತ ಸರ್ಕಾರಿ ನೌಕರರಾಗಿ ನೌಕರರಲ್ಲದ ರೀತಿಯಲ್ಲಿ ಹಣ ವಸೂಲಿ ಮಾಡಿರುತ್ತೀರಿ. ನಿಮ್ಮ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅಡಿ ಕ್ರಮ ಕೈಗೊಳ್ಳಬಾರದೇಕೆ ಎಂದು ರಿಟರ್ನಿಂಗ್ ಅಧಿಕಾರಿಯನ್ನು ನೊಟೀಸಿನಲ್ಲಿ ತಹಸೀಲ್ದಾರ್ ಎಚ್ಚರಿಸಿ ದ್ದಾರೆ.
ಚುನಾವಣಾ ನಾಮಪತ್ರ ಮತ್ತು ಅರ್ಜಿ ಫಾರಂಗಳಿಗೆ ತಲಾ 20. ರೂ. ವಸೂಲಿ ಮಾಡಿ, ರಶೀದಿ ನೀಡದ ಬಗ್ಗೆ ರಿಟರ್ನಿಂಗ್ ಅಧಿಕಾರಿ ವಿರುದ್ಧ ರಾಜ್ಯ ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಅವರಿಗೆ ಸ್ಥಳೀಯರೊಬ್ಬರು ದೂರು ನೀಡಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ತಹಸೀಲ್ದಾರ್ ನಾಗೇಶ್ ಅವರು 24 ತಾಸಿನೊಳಗೆ ಉತ್ತರ ನೀಡಬೇಕೆಂಬ ಗಡುವಿನೊಂದಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ.