Friday, 18th October 2024

ಹಿರಿಯ ಪತ್ರಕರ್ತ, ಬರಹಗಾರ ವಿಶ್ವೇಶ್ವರ ಭಟ್’ರಿಗೆ ಶುಭ ಹಾರೈಸಿದ ಪಂಚಮಸಾಲಿ ಶ್ರೀ

ಓದು ಬದುಕಿನ ಕಸುವನ್ನು ಹಿಗ್ಗಿಸುತ್ತದೆ. ಹಾಗಾಗಿ ನಮಗೆ ಪುಸ್ತಕಗಳು ಯಾವಾ ಗಲೂ ಪ್ರಿಯ. ದೇಶ ಸುತ್ತು ಕೋಶ ಓದು ಎಂದಿದ್ದ ಕಾರಂತಜ್ಜನ ಮಾತು ಯಾವಾಗಲೂ ನಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಸದಾ ನಮ್ಮನ್ನು ಜಾಗೃತ ರನ್ನಾಗಿ ಇಟ್ಟಿವೆ.
ಸುತ್ತುವುದು ಮತ್ತು ಓದುವುದು ನಮ್ಮ ನೆಚ್ಚಿನ ಹವ್ಯಾಸಗಳು. ಸದಾ ನಾನು ಕಾಲಿಗೆ ಚಕ್ರಕಟ್ಟಿಕೊಂಡಿರುತ್ತೇನೆ. ಕಾಡು, ಮೇಡು, ಗವಿ ಗುಹೆ,ಆಲಯ, ಹಿಮಾಲಯ ಹೀಗೆ ಲೋಕ ಸಂಚಾರಿ. ಈ ನಡುವೆಯೂ ಸಮಯ ಮಾಡಿ ಕೊಂಡು ಓದುತ್ತೇನೆ. ಈ ಓದಿನ ಹಸಿವನ್ನು ಹೆಚ್ಚಿಸಿದವರಲ್ಲಿ ಖ್ಯಾತ ಪತ್ರಕರ್ತರು ಮತ್ತು ಲೇಖಕರು ಆಗಿರುವ ಶ್ರೀಯುತ ವಿಶ್ವೇಶ್ವರ ಭಟ್‍ ಕೂಡ ಒಬ್ಬರು.
ಅನೇಕರ ಬರಹಗಳಂತೆ, ಇವರ ಕೃತಿಗಳು ಕೂಡ ನಮ್ಮಲ್ಲಿ ಅರಿವಿನ ವಿಸ್ತಾರವನ್ನು ಹೆಚ್ಚಿಸಿವೆ. ಆತ್ಮಾನಂದ ಉಂಟು ಮಾಡಿವೆ.
ನಾವು ಓದು ಶುರು ಮಾಡುವ ಹೊತ್ತಿನಲ್ಲಿ ಅನೇಕ ಲೇಖಕರ ಕೃತಿಗಳೊಂದಿಗೆ ವಿಶ್ವೇಶ್ವರ ಭಟ್ಟರ ಕೃತಿಗಳು ಇರುತ್ತಿದ್ದವು. ನಮಗೆ ಅವರ ಬರಹ ಅಷ್ಟೊಂದು ಪ್ರಭಾವಿಸಿದ್ದವು. ಅವರ ಪ್ರತಿ ಅಂಕಣಗಗಳು, ಪ್ರತಿಕ್ಷಣ ನಮ್ಮೊಳಗೆ ಜೀವನೋತ್ಸಾಹ ಜತೆಗೆ ಸ್ಫೂರ್ತಿ ತುಂಬುತ್ತಿದ್ದವು.
ಸದಾ ಸುದ್ದಿಯ ಹಿಂದೆಯೇ ಬೀಳುವ ಪತ್ರಕರ್ತರೊಬ್ಬರು ಹೇಗೆ ನಾನಾ ಬಗೆಯ ಪುಸ್ತಕಗಳನ್ನು ಬರೆಯುವುದಕ್ಕೆ ಸಾಧ್ಯ? ಎಂಬ ಕುತೂಹಲವನ್ನೂ ಮೂಡಿಸು ತ್ತಿದ್ದವರು ಅವರು. ನಾನಾ ಪತ್ರಿಕೆಗಳಿಗೆ ಬರೆದ ಅವರ ಅಂಕಣ ಬರಹಗಳನ್ನು ಓದಿರುವೆ. ಸದ್ಯ ಅವರ ಸಂಪಾದಕತ್ವದಲ್ಲಿ ಬರುತ್ತಿರುವ ವಿಶ್ವವಾಣಿಯನ್ನೂ ಗಮನಿಸುತ್ತಿರುವೆ. ಪರಿಶ್ರಮ, ಅಗಾಧ ಸಾಧನೆ ಮೂಲಕ ಗುರುತಿಸಿ ಕೊಂಡಿರುವ ಇವರು, ನೆನ್ನೆ ನಮ್ಮ ಭೇಟಿಗೆ ಆಗಮಿಸಿದ್ದರು. ನಿಜಕ್ಕೂ ಅದೊಂದು ಅನಿರೀಕ್ಷಿತ ಭೇಟಿ ಆಗಿತ್ತು. ಮೂರ್ನಾಲ್ಕು ತಾಸುಗಳ ಸುದೀರ್ಘ ಭೇಟಿ. ಅವರು ಹೇಳಿ ಕೇಳಿ ಪತ್ರಕರ್ತರು ಪ್ರಶ್ನೆ ಕೇಳದೇ ಇರ್ತಾರಾ?
ನಮ್ಮ ಹಿಮಾಲಯದ ಭೇಟಿ, ಯೋಗ ಸಾಧನೆ, ಮಠ ಪೀಠಗಳ ಸಾಧ್ಯತೆ, ಸಮುದಾಯದ ನಡೆ-ನುಡಿ, ಸದ್ಯದ ಬೆಳವಣಿಗೆ, ಶ್ರೀಪೀಠದ ಸಾಮರ್ಥ್ಯ ಹೀಗೆ ಹತ್ತು ಹಲವು ವಿಚಾರಗಳನ್ನು ಚರ್ಚಿಸಿದೆ. ಅವರೊಂದಿಗಿನ ಮಾತುಕತೆ ಅರ್ಥಪೂರ್ಣವಿತ್ತು. ಸಮುದಾಯದ ಬೆಳವಣಿಗೆಗೆ ಅವರು ನೀಡಿದ ಸಲಹೆಗಳು ಸಕಾರಾತ್ಮಕವಾದವು. ನಾಡಿನ ಹೆಸರಾಂತ ಸಂಪಾದಕರು  ಸಾಧಕ ಮತ್ತು ಸಾಧನೆಗಳ ಬಗ್ಗೆ ಕೊಂಡಾಡಿದ್ದು ಹಿತವೆನಿಸಿತು.
ನಮ್ಮ ಬೆಂಗಳೂರಿನ ಶ್ವಾಸ ಯೋಗ ಸಂಸ್ಥೆಗೆ ಭೇಟಿ ನೀಡಿ, ನಮ್ಮೊಂದಿಗೆ ಒಂದಷ್ಟು ಸಮಯ ಕಳೆದ ವಿಶ್ವೇಶ್ವರ ಭಟ್ ರಿಗೆ ಅವರಿಗೆ ಶುಭವಾಗಲಿ ಎಂದು ಪಂಚಮಸಾಲಿ ಜಗದ್ಗುರು ಪೀಠ, ಹರಿಹರ ಶ್ರೀ ಶ್ರೀ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಹಾರೈಸಿದರು.