Tuesday, 3rd December 2024

Pavithra Gowda: ಪವಿತ್ರಾ ಗೌಡಗೆ ಇಂದೂ ಸಿಕ್ಕಿಲ್ಲ ಜಾಮೀನು; ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

Pavithra Gowda

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ (Renuka swamy murder case) ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಅವರ ಜಾಮೀನಿನ ಅರ್ಜಿ ಮತ್ತೆ ಮುಂದೂಡಿಕೆಯಾಗಿದೆ. ಪವಿತ್ರಾ ಗೌಡ ಸಹಿತ ಬಂಧಿತರಾಗಿ ಜೈಲಿನಲ್ಲಿರುವ ನಾಲ್ವರು ಆರೋಪಿಗಳ ಜಾಮೀನು ಅರ್ಜಿ (Bail plea) ವಿಚಾರಣೆಯನ್ನು ಹೈಕೋರ್ಟ್​​ನ (Karnataka High court) ಏಕಸದಸ್ಯ ಪೀಠದ ಮುಂದೆ ಗುರುವಾರ (ನ. 7) ನಡೆಸಲಾಯಿತು. ಮುಂದಿನ ವಿಚಾರಣೆಯನ್ನು ನ. 21ಕ್ಕೆ ಮುಂದೂಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದ ಇತರ ನಾಲ್ಕು ಆರೋಪಿಗಳಿಗೂ ಈಗಾಗಲೇ ನಿಯಮಿತ ಜಾಮೀನು ಸಿಕ್ಕಿದೆ. ಹೀಗಾಗಿ ಜಾಮೀನು ಪವಿತ್ರಾ ಗೌಡ, ಅನುಕುಮಾರ್​​ ಸೇರಿ ನಾಲ್ವರು ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದರು. ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇವರ ಜಾಮೀನು ಅರ್ಜಿ ವಜಾಗೊಂಡಿತ್ತು. ಮತ್ತೆ ಹೈಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪವಿತ್ರಾ ಗೌಡ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಅ. 30ರಂದು ಜಾಮೀನು ಮಂಜೂರಾಗಿತ್ತು. ಸುಮಾರು 5 ತಿಂಗಳಿಂದಲೂ ಜೈಲಿನಲ್ಲಿದ್ದ ಅವರಿಗೆ ಕರ್ನಾಟಕ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ದರ್ಶನ್ ಅವರ ಆರೋಗ್ಯದದ ಸಮಸ್ಯೆಯನ್ನು ಪರಿಗಣಿಸಿ 6 ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿತ್ತು. ಮಧ್ಯಂತರ ಜಾಮೀನಿಗೆ ಸಾಕಷ್ಟು ಪ್ರಮಾಣದ ಷರತ್ತುಗಳನ್ನು ನ್ಯಾಯಾಲಯ ವಿಧಿಸಿತ್ತು.

ಕಾರಣವೇನು?

ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಅವರ ಬೆನ್ನು ನೋವು ಸೇರಿದಂತೆ ಅನಾರೋಗ್ಯದ ಸಮಸ್ಯೆಯನ್ನೇ ಪ್ರಮುಖವಾಗಿ ಕೋರ್ಟ್‌ ಮುಂದೆ ಹೇಳಲಾಗಿತ್ತು. ಹೀಗಾಗಿ ಸಮಸ್ಯೆಯನ್ನು ಪ್ರಮುಖ ಕಾರಣವಾಗಿ ಪರಿಗಣಿಸಿ ಜಾಮೀನು ನೀಡುವಂತೆ ಮನವಿ ಮಾಡಲಾಗಿತ್ತು. ಬೆನ್ನುನೋವಿನ ಸಮಸ್ಯೆ ಇದ್ದು, ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಚಿಕಿತ್ಸೆ ತಡವಾದರೆ ಅವರು ಸ್ಟ್ರೋಕ್‌ಗೆ ಈಡಾಗುವ ಆತಂಕ ಇದೆ ಎಂದು ವೈದ್ಯರು ನೀಡಿದ್ದ ವರದಿಯನ್ನು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು, ​ಆರೋಗ್ಯ ಸಮಸ್ಯೆಯ ಪರಿಶೀಲನೆ ನಡೆಸಲು ವೈದ್ಯಕೀಯ ಮಂಡಳಿ ಸ್ಥಾಪನೆ ಮಾಡಬೇಕೆಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದರು. ಈಗ ಸಲ್ಲಿಸಲಾಗಿರುವ ವೈದ್ಯ ವರದಿಯಲ್ಲಿ ದರ್ಶನ್​ಗೆ ಆಗಬೇಕಿರುವ ಶಸ್ತ್ರಚಿಕಿತ್ಸೆ, ಗುಣವಾಗಲು ತೆಗೆದುಕೊಳ್ಳುವ ಸಮಯ ನಿಖರವಾಗಿಲ್ಲ ಎಂಬುದಾಗಿ ಕೋರ್ಟ್‌ಗೆ ಮನವರಿಕೆ ಮಾಡಿದ್ದರು.

ನ್ಯಾಯಮೂರ್ತಿ ಹೇಳಿದ್ದೇನು?

ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವೇಶ್ವರ ಭಟ್ ಅವರು, ʼವೈದ್ಯಕೀಯ ನೆರವು ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರು. ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿತ್ತು.

ಈ ಸುದ್ದಿಯನ್ನೂ ಓದಿ: Actor Darshan: ದರ್ಶನ್‌ ಬೆಂಗಳೂರಲ್ಲೇ ಚಿಕಿತ್ಸೆ ಪಡೆಯಬೇಕು, ಮೈಸೂರಿಗೆ ಹೋಗುವಂತಿಲ್ಲ ಎಂದ ಕೋರ್ಟ್