Thursday, 19th September 2024

HD Kumaraswamy: ಸ್ವಪಕ್ಷೀಯರಿಂದಲೇ ಪಿತೂರಿ; ಸತ್ಯ ಒಪ್ಪಿಕೊಂಡ ಸಿಎಂ: ಎಚ್.ಡಿ.ಕೆ ಲೇವಡಿ

HD Kumaraswamy

ಶಿವಮೊಗ್ಗ: ನನ್ನನ್ನು ರಾಜಕೀಯವಾಗಿ ಮುಗಿಸಲು ಸ್ವಪಕ್ಷೀಯರೇ ಪಿತೂರಿ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲಿಗೆ ಪ್ರತಿಪಕ್ಷಗಳು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾವುದೇ ತಂತ್ರ ಮಾಡುತ್ತಿಲ್ಲ ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ ಆಯಿತು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.

ಶಿವಮೊಗ್ಗ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಸಿಎಂ ಅವರು ಹೇಳಿಕೆ ನೀಡಿ, ಪ್ರತಿಪಕ್ಷಗಳು ನನ್ನ ವಿರುದ್ಧ ಪಿತೂರಿ ಮಾಡುತ್ತಿವೆ, ನಾನು ಹಿಂದುಳಿದ ವರ್ಗದವನು ಎಂದು ಅವರಿಗೆ ಹೊಟ್ಟೆ ಉರಿ ಎಂದು ಹೇಳಿದ್ದರು. ಅದಾದ ಮೇಲೆ ಬೆಳಗಾವಿಯಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಕಾರ್ಯಕ್ರಮದಲ್ಲಿ, ಸಂಗೊಳ್ಳಿ ರಾಯಣ್ಣ ಅವರನ್ನು ಹಿತಶತ್ರುಗಳೇ ಬ್ರಿಟಿಷರಿಗೆ ಹಿಡಿದುಕೊಟ್ಟರು. ನನ್ನನ್ನು ರಾಜಕೀಯವಾಗಿ ಮುಗಿಸಲು ಸ್ವಪಕ್ಷೀಯರೇ ಹುನ್ನಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಈಗಲಾದರೂ ಮುಖ್ಯಮಂತ್ರಿಯವರಿಗೆ ತಮ್ಮ ವಿರುದ್ಧ ಸಂಚು ಮಾಡುತ್ತಿರುವವರು ಯಾರು ಎನ್ನುವುದು ಅರ್ಥವಾಗಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮಾಡಿಕೊಂಡ ತಪ್ಪುಗಳು, ಅವರಲ್ಲಿ ನಡೆಯುತ್ತಿರುವ ಸಂಚು ಒಳಸಂಚುಗಳ ಪರಿಣಾಮ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬಂದಿದೆ ಎಂದು ಸಚಿವರು ದೂರಿದರು.

ಈ ಸುದ್ದಿಯನ್ನೂ ಓದಿ | Reliance Jio: ರಿಲಯನ್ಸ್ ಜಿಯೊ ವಾರ್ಷಿಕೋತ್ಸವ ಆಫರ್; ಆಯ್ದ ರೀಚಾರ್ಜ್‌ ಮೇಲೆ 700 ರೂ. ಮೌಲ್ಯದ ಬೆನಿಫಿಟ್‌

ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ನಿರಂತರವಾಗಿ ತೊಡಗಿದ್ದು, ಗುತ್ತಿಗೆದಾರರನ್ನು ಸುಲಿಗೆ ಮಾಡುತ್ತಿದೆ, ಸಿದ್ದರಾಮಯ್ಯ ಅವರ ಇಂದಿನ ಸ್ಥಿತಿಗೆ ಅವರ ಸ್ವಯಂಕೃತ ಅಪರಾಧವೇ ಕಾರಣ ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಸುಲಿಗೆ ಮಾಡಲು ಶುರು ಮಾಡಿದೆ. ಅದು ಈಗಲೂ ಮುಂದುವರೆದಿದೆ ಎಂದರು.

40% ಮೀರಿದ ಕಮಿಷನ್ ಸುಲಿಗೆ

ನಾನು ವಿರೋಧ ಪಕ್ಷದಲ್ಲಿದ್ದು ಸುಖಾ ಸುಮ್ಮನೆ ಈ ಸರ್ಕಾರವನ್ನು ದೂಷಣೆ ಮಾಡಲಾರೆ. ಕಳೆದ ವಾರ ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯೊಬ್ಬರು, ಅದರಲ್ಲಿಯೂ ಈ ರಾಜ್ಯದ ಸಿಎಂಗೆ ಬಹಳ ಹತ್ತಿರದಲ್ಲಿರುವ ವ್ಯಕ್ತಿ, ಅವರು ಮತ್ತು ಅವರ ಸ್ನೇಹಿತರು ಸೇರಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅವರು ಹೇಳಿರುವುದು ಇಷ್ಟೇ, ಈಗಿನ ನಮ್ಮ ಸರ್ಕಾರ 40% ಮೀರಿಸಿ ಮುಂದೆ ಹೋಗಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಇದನ್ನು ಹೇಳಿದ್ದು ನಾನಲ್ಲ, ಕಾಂಗ್ರೆಸ್ ಪದಾಧಿಕಾರಿ ಮತ್ತು ಗುತ್ತಿಗೆದಾರರು ಸೇರಿ ಹೇಳಿದ್ದು. ಅವರೇ ಸ್ವಯಂ ಸಮಸ್ಯೆಗೆ ತುತ್ತಾಗಿ ಈ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ. ಇಲ್ಲಿಗೆ ಬಂದು ನಿಂತಿದೆ ಈ ಸರ್ಕಾರ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದಲ್ಲಿ ಸುಳ್ಳು ಪ್ರಚಾರಗಳನ್ನು ಮಾಡುತ್ತಾ ಹೋಯಿತು. ಸುಳ್ಳು ಮಾಹಿತಿಯುಳ್ಳ ದೊಡ್ಡ ದೊಡ್ಡ ಜಾಹೀರಾತುಗಳನ್ನು ಕೊಡಲಾಯಿತು. ಇದನ್ನು ನಂಬಿದ ಜನರೂ ಕಾಂಗ್ರೆಸ್‌ಗೂ ಒಂದು ಅವಕಾಶ ಕೊಡೋಣ ಎಂದು ಕೊಟ್ಟರು. ಏನಾದರೂ ಬದಲಾವಣೆ ಬರಬಹುದು ಎಂದು ಜನರು ವೋಟು ಕೊಟ್ಟರು. ಆದರೆ, ಆಮೇಲೆ ಏನಾಯಿತು ಎಂಬುದನ್ನು ವೋಟು ಕೊಟ್ಟ ಜನರೇ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಕುಂಠಿತವಾಗಿದೆ. ನಾನು ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ಕಂಡೇ ಇರಲಿಲ್ಲ. ಜನರ ಕೆಲಸಗಳು ಆಗುತ್ತಿಲ್ಲ, ಸಾಮಾನ್ಯವಾಗಿ ಆಡಳಿತ ಪಕ್ಷ ಅಧಿಕಾರದ ಕೊನೆ ದಿನಗಳಿಗೆ ಬಂದಾಗ ಬಹಳಷ್ಟು ಕೆಟ್ಟ ಹೆಸರು ಪಡೆಯುವ ಅವಕಾಶ ಇರುತ್ತದೆ. ಆದರೆ, ಈ ಸರ್ಕಾರ ಆರಂಭದಲ್ಲಿಯೇ ತುಂಬಾ ಕೆಟ್ಟ ಹೆಸರನ್ನು ತೆಗೆದುಕೊಂಡಿದೆ. ಎಲ್ಲಾ ರಂಗಗಳಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ನಮ್ಮ ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದನ್ನು ಯಾರೂ ಊಹೆ ಮಾಡಿರಲ್ಲವೇನೋ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಈ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಅದರ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ರಾಜ್ಯದ ಅಭಿವೃದ್ಧಿಯನ್ನು ಕೂಡ ಕಡೆಗಣಿಸಬಾರದು ಅಲ್ಲವೇ? ಕೃಷಿ, ನೀರಾವರಿ, ರಸ್ತೆ, ಮೂಲಸೌಕರ್ಯ ಸೇರಿ ಯಾವುದೇ ಕ್ಷೇತ್ರದಲ್ಲಿಯೂ ಕೆಲಸ ಆಗುತ್ತಿಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಅಲ್ಲಿ ಜನರ ರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಕಿಡಿಕಾರಿದರು.

ಇಷ್ಟೆಲ್ಲಾ ಸವಾಲುಗಳು ರಾಜ್ಯದಲ್ಲಿ ಇದ್ದರೂ ಯಾವೊಬ್ಬ ಸಚಿವರು ತಮ್ಮ ಇಲಾಖೆಗಳ ಬಗ್ಗೆ ಅವಲೋಕನ ಮಾಡಿ ಜನರ ಸಮಸ್ಯೆಗಳನ್ನು ಪರಿಹಾರ ಮಾಡುತ್ತಿಲ್ಲ. ಬದಲಿಗೆ ವರ್ಗಾವಣೆ ದಂಧೆ, ಕಮೀಷನ್ ವಸೂಲಿ, ಗುತ್ತಿಗೆದಾರ ಸುಲಿಗೆ, ಇನ್ನಿತರೆ ಹಗರಣಗಳು ಮಾತ್ರ ಮುನ್ನೆಲೆಗೆ ಬಂದು ಚರ್ಚೆ ಆಗುತ್ತಿವೆ. ಅಭಿವೃದ್ಧಿಗೆ ಬಗ್ಗೆ ಚರ್ಚೆಯೇ ಆಗುತ್ತಿಲ್ಲ, ಈ ಸರ್ಕಾರದಿಂದ ಒಂದು ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಸ್ವತಃ ಕಂದಾಯ ಸಚಿವರೇ ತಮ್ಮ ಕ್ಷೇತ್ರದ ರಸ್ತೆ ಗುಂಡಿಗಳ ಬಗ್ಗೆ ಅಸಹಾಯಕತೆ ತೋಡಿಕೊಂಡಿದ್ದರು ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಕಂದಾಯ ಸಚಿವರೇ ಅಧಿಕಾರಿಗಳಿಗೆ ಕೈಜೋಡಿಸಿ ಮನವಿ ಮಾಡಿದರೂ ರಸ್ತೆಗುಂಡಿ ಮುಚ್ಚಲಾರದ ದಯನೀಯ ಸ್ಥಿತಿಯಲ್ಲಿ ಈ ಸರ್ಕಾರವಿದೆ. ಹೀಗಾಗಿ ಈ ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯಾ? ಎಂದು ಅವರು ಟೀಕಿಸಿದರು.

ಅಭಿವೃದ್ಧಿಯನ್ನು ಮರೆತು ಇವರು ಗ್ಯಾರಂಟಿ ಗ್ಯಾರಂಟಿ ಎಂದರು. ಅಭಿವೃದ್ದಿ ಮರೆತರು. ಸದ್ಯದಲ್ಲಿಯೇ ಇವರಂತೆಯೇ ಗ್ಯಾರಂಟಿಗಳನ್ನು ಕೊಟ್ಟ ಹಿಮಾಚಲ ಪ್ರದೇಶದ ದುಸ್ಥಿತಿ ರಾಜ್ಯಕ್ಕೂ ಬರಲಿದೆ. ಅಲ್ಲಿ ಶಾಸಕರ ಸಂಬಳ ಕಡಿತ ಮಾಡಲಾಗಿದೆ. ಸರ್ಕಾರಿ ನೌಕರರ ಸಂಬಳಕ್ಕೆ ದುಡ್ಡಿಲ್ಲ. ಪಿಂಚಣಿ ಕೊಡಲು ಆಗುತ್ತಿಲ್ಲ. ಒಂದು ಕಾಲದಲ್ಲಿ ವಿಶ್ವಬ್ಯಾಂಕ್ ಮೆಚ್ಚುಗೆಗೆ ಪಾತ್ರವಾಗಿದ್ದ ಹಿಮಾಚಲ ಇವತ್ತು ಆರ್ಥಿಕವಾಗಿ ದಿವಾಳಿ ಸ್ಥಿತಿಗೆ ಬಂದಿದೆ. ಅಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಇದೆ. ಕರ್ನಾಟಕಕ್ಕೂ ಈ ಗತಿ ದೂರವಿಲ್ಲ ಎಂದು ಸಚಿವರು ಹೇಳಿದರು.

ದೇವದಾರಿಗೆ ಅನುಮತಿ ಕೊಟ್ಟಿದ್ದು ಸಿದ್ದರಾಮಯ್ಯ

ಬಳ್ಳಾರಿ ಬಳಿಯ ದೇವದಾರಿ ಗಣಿಗಾರಿಕೆ ಯೋಜನೆಗೆ ಒಪ್ಪಿಗೆ ನೀಡಿದ್ದು ಹಿಂದಿನ ಸಿದ್ದರಾಮಯ್ಯ ಸರ್ಕಾರ. ಆ ಯೋಜನೆ ಕಾರ್ಯಗತ ಮಾಡುವ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಹಣಕಾಸು ಖಾತರಿ ಕೊಡುವ ಕಡತ ಹಣಕಾಸು ಇಲಾಖೆಗೆ ಕಳಿಸುವುದಕ್ಕೆ ಮಾತ್ರ ನಾನು ಒಪ್ಪಿಗೆ ಕೊಟ್ಟಿದ್ದೇನೆ. ಇಲ್ಲಿ ನೋಡಿದರೆ ಕಾಂಗ್ರೆಸ್ ಸರ್ಕಾರ, ಕುಮಾರಸ್ವಾಮಿ ಗಣಿಗೇ ಅನುಮತಿ ಕೊಟ್ಟಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ಈ ಸುದ್ದಿಯನ್ನೂ ಓದಿ | Ganesh Chaturthi 2024: ಗೌರಿ-ಗಣೇಶ ಹಬ್ಬದ ಗ್ರ್ಯಾಂಡ್‌ ಮೇಕಪ್‌‌‌ಗೆ ಇಲ್ಲಿದೆ 5 ಸಿಂಪಲ್‌ ರೂಲ್ಸ್!

ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯನಾಯಕ್, ಮಾಜಿ ಶಾಸಕ ಪ್ರಸನ್ನ ಕುಮಾರ್, ಶಾರದಾ ಅಪ್ಪಾಜಿಗೌಡ, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *