Thursday, 14th November 2024

V Somanna: ಆಮೆಗತಿಯಲ್ಲಿ ಬೆಂಗಳೂರು-ತುಮಕೂರು ಹೆದ್ದಾರಿ ಕಾಮಗಾರಿ; ಅಧಿಕಾರಿಗಳಿಗೆ ಸಚಿವ ಸೋಮಣ್ಣ ತರಾಟೆ

V Somanna

ನೆಲಮಂಗಲ: ಮಂದಗತಿಯಲ್ಲಿ ಸಾಗುತ್ತಿರುವ ಬೆಂಗಳೂರು- ತುಮಕೂರು ಹೆದ್ದಾರಿ 6 ಪಥದ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಸೋಮಣ್ಣ (V Somanna) ಸೂಚಿಸಿದರು.

ನೆಲಮಂಗಲ ಟೋಲ್ ಬಳಿಯಿಂದ ತುಮಕೂರು ಮಾರ್ಗವಾಗಿ ಟಿ.ಬೇಗೂರು, ಕುಲವನಹಳ್ಳಿ, ಹನುಮಂತಪುರ, ಬಿಲ್ಲನಕೋಟೆ, ನೆಲಮಂಗಲ, ದಾಬಸ್‌ಪೇಟೆ ಭಾಗಗಳಲ್ಲಿ ಮಂಗಳವಾರ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಅವರು ನಿಧಾನಗತಿಯ ಕಾಮಗಾರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

2016ರಲ್ಲಿ ಆರಂಭವಾದ ಕಾಮಗಾರಿ ಕಳೆದ 8 ವರ್ಷಗಳಿಂದ ಕುಂಟುತ್ತಾ ಸಾಗಿದೆ. ನೆಲಮಂಗಲ ಟೋಲ್‌ನಿಂದ ತುಮಕೂರುವರೆಗೆ 45 ಕಿ.ಮೀ. ಕಾಮಗಾರಿ ನಡೆಯುತ್ತಿದೆ. ಒಟ್ಟು 2048 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ಭರಿಸಿದೆ. ಆದರೂ 6 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಇಂದಿನಿಂದಲೇ ಚಾಲನೆ ದೊರೆತಿದೆ‌. ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೆಲವೆಡೆ ಕಾಮಗಾರಿ ವಿಳಂಬವಾಗಿದ್ದು, ನಿವಾರಣೆ ಆಗಿದೆ ಪ್ರಸ್ತುತ 4 ಕಡೆ ಮಾತ್ರ ಭೂ ಸ್ವಾಧೀನ ಸಮಸ್ಯೆಯಿದ್ದು ಶೀಘ್ರದಲ್ಲೇ ಬಗೆಹರಿಯಲಿದೆ ಎಂದರು.

ಏನನ್ನು ಕೇಳಿದರೂ ನೋಡ್ತೇವೆ ಮಾಡ್ತೇವೆ ಅನ್ನುತ್ತೀರಿ, ಹಾಗಾದರೆ ಇಷ್ಟುದಿನ ತಾವು ಮಾಡಿರುವುದೇನು? ಇನ್ನು ಮುಂದೆ ಸಬೂಬುಗಳನ್ನು ಸಹಿಸುವುದಿಲ್ಲ. ನಿಮ್ಮ ಇಂತಹ ಕೆಲಸಗಳಿಂದ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಜನ ಪ್ರಾಣ ಕಳೆದುಕೊಳ್ಳುತಿದ್ದಾರೆಂದರು.

ಕೇಂದ್ರ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿಯವರ ಗಮನಕ್ಕೆ ಈ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ  ತಂದ ತಕ್ಷಣ ತಾವೇ ಖುದ್ದಾಗಿ ಪರಿಶೀಲಿಸಿ, ಮಾಹಿತಿ ನೀಡಿದರೆ ಕಾಮಗಾರಿ  ಚುರುಕುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದುದರಿಂದ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಗುತ್ತಿದೆ ಎಂದರು.

ಈ ಸುದ್ದಿಯನ್ನೂ ಓದಿ | Basavaraja Bommai: ಸರ್ಕಾರಿ ದುಡ್ಡಿನಲ್ಲಿ ರಾಜಕೀಯ ಭ್ರಷ್ಟಾಚಾರ: ಬಸವರಾಜ ಬೊಮ್ಮಾಯಿ ಆರೋಪ

ಜಿಲ್ಲಾಧಿಕಾರಿ ಶಿವಶಂಕರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ. ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್ ನಾಯಕ್. ಎನ್‌ಡಿಎ ಮಾಜಿ ಅಧ್ಯಕ್ಷ ಮಲ್ಲಯ್ಯ.ಸುರೇಶ. ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.