ವಿಜಯಪುರ: ರೈತರ ಜಮೀನುಗಳು ವಕ್ಫ್ ಬೋರ್ಡ್ (Waqf Board) ಪಾಲಾಗುತ್ತಿರುವ ಬೆಳವಣಿಗೆ ನಂತರ, ಗಾಬರಿ ಮೂಡಿಸುವಂತ ಇನ್ನೊಂದು ಬೆಳವಣಿಗೆ ವಿಜಯಪುರ ಜಿಲ್ಲೆಯಲ್ಲಿ (Vijayapur news) ಘಟಿಸಿದೆ. ಲಕ್ಷಾಂತರ ಭಕ್ತರನ್ನು ಹೊಂದಿರುವ ಸಿಂದಗಿ ವಿರಕ್ತಮಠದ ಜಾಗವೂ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಕ್ಲೇಮ್ ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವಕ್ಫ್ (Waqf Property) ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈವರೆಗೂ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಕಾಣಿಸಿಕೊಂಡಿತ್ತು. ಇದೀಗ ವಿರಕ್ತಮಠದ ಆಸ್ತಿಗೂ ವಕ್ಫ್ ಬೋರ್ಡ್ ಎಂಟ್ರಿ ಕೊಟ್ಟಿದೆ. 13ನೇ ಶತಮಾನದಲ್ಲಿ ಸ್ಥಾಪನೆ ಆಗಿರುವ ಈ ಮಠ ಮುಸ್ಲಿಮರ ವಕ್ಫ್ ಆಸ್ತಿ ಆಗಲು ಹೇಗೆ ಸಾಧ್ಯ ಎಂದು ಭಕ್ತರು ಪ್ರಶ್ನೆ ಮಾಡಿದ್ದಾರೆ.
ವಕ್ಫ್ ವಿವಾದ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಕ್ಫ್ ಬೋರ್ಡ್ ಕಡೆಯಿಂದ ರೈತರಿಗೆ ನೊಟೀಸ್ ಜಾರಿಯಾದ ಬೆನ್ನಲ್ಲೇ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪರಿಶೀಲನಾ ಸಮಿತಿ ರಚಿಸಿದ್ದಾರೆ. ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡ ಮಠಕ್ಕೆ ಭೇಟಿ ನೀಡಿದ್ದು, ಪಹಣಿ ಪತ್ರ, ಹಳೆಯ ಉತಾರೆಗಳನ್ನು ಪರಿಶೀಲಿಸಿದರು. ವಿರಕ್ತಮಠದ ಬಸವಪ್ರಭು ಶ್ರೀಗಳು ಬಿಜೆಪಿ ನಾಯಕರಿಗೆ ಅಗತ್ಯ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ವಿರಕ್ತಮಠದ ಸರ್ವೆ ನಂ. 1020ರ ಆಸ್ತಿಯು ಇದೀಗ ಕಬರಸ್ಥಾನ ವಕ್ಫ್ ಬೋರ್ಡ ಎಂದು ನೋಂದಣಿ ಆಗಿದೆ. ಸಿದ್ದಲಿಂಗಯ್ಯ ಸ್ವಾಮೀಜಿ ವಿರಕ್ತಮದ ಪೀಠಾಧಿಪತಿಗಳಾಗಿದ್ದರು. 2018 – 2019 ರಲ್ಲಿ ಮೊದಲು ವಕ್ಫ್ ಬೋರ್ಡ್ ಎಂದು ಸೇರ್ಪಡೆಯಾಗಿದೆ. ಅದಕ್ಕೂ ಮುನ್ನ ಪಹಣಿಯ ಕಾಲಂ ನಂಬರ್ 11ರಲ್ಲಿ ಖಾಲಿ ಇತ್ತು. ಇದೇ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳು, ಮಠದ ಆಸ್ತಿಗಳು ವಕ್ಫ್ ಬೋರ್ಡ್ ಪಾಲಾಗುತ್ತಿವೆ. ಒಟ್ಟು 1.28 ಎಕರೆ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನೋಂದಣಿಯಾಗಿದೆ.
ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ ವಕ್ಫ್ ಕಾಯಿದೆಯಿಂದ ರೈತರಿಗೆ ತೊಂದರೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜನರ ಅಹವಾಲು ಆಲಿಸಲು, ಜನರ ಪರವಾಗಿ ಧ್ವನಿ ಎತ್ತಲು ರಾಜ್ಯ ಬಿಜೆಪಿಯು ಶಾಸಕ ಗೋವಿಂಗ್ ಕಾರಜೋಳ ನೇತೃತ್ವದಲ್ಲಿ ‘ಬಿಜೆಪಿ ಪರಿಶೀಲನಾ ತಂಡ’ ರಚನೆ ಮಾಡಿದೆ. ಈ ತಂಡ ಇದೀಗ ವಿಜಯಪುರಕ್ಕೆ ಭೇಟಿ ನೀಡಿದೆ. ತಂಡ ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ಅನ್ಯಾಯ ಹಾಗೂ ವಕ್ಫ್ ಬೋರ್ಡ್‌ನಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ಕುಟುಂಬಗಳನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿದ್ದಾರೆ. ಖುದ್ದು ಜಮೀನು ಪರಿಶೀಲಿಸಿ ವರದಿ ತಯಾರಿಸಲಿದ್ದಾರೆ.
ಬಿಜೆಪಿ ಪರಿಶೀಲನಾ ತಂಡದಲ್ಲಿ ಶಾಸಕ ಗೋವಿಂದ ಕಾರಜೋಳ, ಸಂಸದ ರಮೇಶ್ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಹರೀಶ್ ಪೂಂಜಾ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ಅರುಣ್ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಇದ್ದಾರೆ.