Wednesday, 30th October 2024

ತಳಮಟ್ಟದ ಜನರ ಆರ್ಥಿಕ ಸಬಲತೆಗೆ ಶ್ರಮಿಸುವೆ

ಕಳೆದ ಮೂರು ತಿಂಗಳ ಹಿಂದಷ್ಟೇ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದರು. ಆದ್ರೆ ಇದಕ್ಕೆ ಒಪ್ಪದ ಶಾಸಕ ಐಹೊಳೆ, ಈ ನಿಗಮ ನನಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದು ಅಧಿಕಾರ ಸ್ವೀಕಾರ ಮಾಡದೆ ದೂರವೇ ಉಳಿದು ಮುನಿಸು ತೋರಿದ್ದರು. ಪಟ್ಟುಹಿಡಿದು ಅಂಬೇಡ್ಕರ್ ಅಭಿವೃದ್ಧಿ ನಿಗಮ ಖಾತೆಯನ್ನೇ ಗಿಟ್ಟಿಸಿಕೊಂಡ ಶಾಸಕ ದುರ್ಯೋಧನ ಐಹೊಳೆ ಅವರೊಂದಿಗೆ ವಿಶ್ವವಾಣಿಯ ವಿಶೇಷ ಸಂದರ್ಶನ ಇಲ್ಲಿದೆ.

ವಿಶ್ವವಾಣಿ ಸಂದರ್ಶನ: ಬಾಲಕೃಷ್ಣ ಎನ್.

ನೂತನವಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ನೇಮಕವಾಗಿದ್ದು, ಜನತೆಗೆ ನೀವು ನೀಡುವ ಸಂದೇಶವೇನು?
ಇಡೀ ರಾಜ್ಯದ ಜನತೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗು ತ್ತದೆ. ಸರಕಾರ ಈಗಾಗಲೇ ಘೋಷಿಸಿರುವ ಮಹತ್ವದ ಯೋಜನೆಗಳನ್ನು ಪರಿಶೀಲಿಸಿದ ಜನಸ್ನೇಹಿ ಆಡಳಿತ ನೀಡಲಾಗು ತ್ತದೆ. ಗಂಗಾ ಕಲ್ಯಾಣ ಯೋಜನೆ, ನಿರುದ್ಯೋಗಿಗಳಿಗೆ ವಾಹನ ಖರೀದಿಗೆ ಸಬ್ಸಿಡಿ. ಹೆಚ್ಚು ಅನುದಾನ ಈ ನಿಗಮಕ್ಕೆ ಬರುವುದರಿಂದ ಜನಪರ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ನೆರವು, ಸ್ವಾವಲಂಬನೆಗಾಗಿ ಉದ್ಯೋಗ ಕಂಡುಕೊಳ್ಳುವವರಿಗೆ ಇಲಾಖೆ ರೂಪಿಸಿರುವ ಮಾನದಂಡ ಆಧರಿಸಿ ಸವಲತ್ತು ವಿತರಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅಂಬೇಡ್ಕರ್ ನಿಗಮದಿಂದ ನೆರವು ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೊಸಬರಿಗೆ ಸವಲತ್ತು ನೀಡುವಂತೆ ಸೂಚಿಸಿದ್ದು, ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ನಿಗಮದ ಅಧಿಕಾರಿಗಳು ಪಟ್ಟಿ ಪರಾಮರ್ಶೆ ನಡೆಸಿಯೆ ಸರಕಾರಿ ಸಾಲ ಸೌಲಭ್ಯ ವಿತರಿಸಲಾಗುತ್ತದೆ.

ಯಾವೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಅಥವಾ ಯೋಜನೆಗಳನ್ನು ರೂಪಿಸಲು ಮುಂದಾಗಿದ್ದೀರಾ?
ನಿಗಮದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ಆಯಾ ಸಮುದಾಯಗಳಿಗೆ ನೀಡಬೇಕಾ ಸೌಲಭ್ಯಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ. ಸಮುದಾಯಗಳ ಅಭಿವೃದ್ಧಿಗೆ ಮುಂದೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ
ಚಿಂತನೆ ನಡೆಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಶೀಘ್ರವೇ ಸಹಾಯಧನ ಸಿಗುವಂತೆ ಕಾರ್ಯಯಂತ್ರ ಚುರುಕುಗೊಳಿಸ ಲಾಗುತ್ತದೆ.

ಪಟ್ಟು ಹಿಡಿದು ಬೇಕಾದ ಖಾತೆಯನ್ನೆ ಪಡೆವುದರ ಆಶಯವೇನು?
ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿರುವ ಜನ ಇದ್ದಾರೆ. ಹಿಂದೆ ನೀಡಲಾಗಿದ್ದ ಖಾದಿ ಗ್ರಾಮೋದ್ಯೋಗ ನಿಗಮ ಬೇಡವೆ ಬೇಡ, ಕೊಡುವುದಾದರೆ ಕರ್ನಾಟಕ ಭೂಸೇನಾ ನಿಗಮ ಮಂಡಳಿ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ನೀಡಿ ಎಂದು ಯಡಿಯೂರಪ್ಪ ಬಳಿ ವಿನಂತಿ ಮಾಡಿದ್ದೆ. ಖಾದಿ ಗ್ರಾಮೋದ್ಯೋಗ ನಿಗಮದಲ್ಲಿ ಯಾವುದೇ ಅನುದಾನ ಬರುವುದಿಲ್ಲ, ಅದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಅನುದಾನ ಬರುವ ನಿಗಮ ಮಂಡಳಿಯೇ ಬೇಕು ಎಂದು ಬೇಡಿಕೆ ಇಟ್ಟಿದೆ.

ಈ ನಿಗಮಕ್ಕೆ ನಿಮ್ಮನ್ನು ಆಯ್ಕೆ ಮಾಡಿದ ಸರಕಾರಕ್ಕೆ ಏನು ಹೇಳಲು ಬಯಸುತ್ತೀರಾ?
ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನಮ್ಮ ಮೇಲೆ ವಿಶ್ವಾಸವಿಟ್ಟು ಮಂತ್ರಿ ಸ್ಥಾನ ಕೊಡಬೇಕಿತ್ತು. ಹೊರಗಿನಿಂದ ಬಂದ 17 ಮಂದಿಯ ಸರಕಾರ ಆಗಿದೆ. ಸದ್ಯಕ್ಕೆ ಕ್ಷೇತ್ರದ ಅನುದಾನ ನೀಡಿದರೆ ಸಾಕು ಮಂತ್ರಿ ಬೇಕಾಗಿಲ್ಲ. ಕ್ಷೇತ್ರದ ಜನರ ಯೋಗಕ್ಷೇಮ
ಕಾಪಾಡುವುದು ಮುಖ್ಯ.

ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬ ಆಗುತ್ತಿದೆ ಎಂಬ ದೂರಿದೆ. ಇದಕ್ಕೆ ಯಾವ ಕ್ರಮ ಕೈಗೊಳ್ಳುತ್ತೀರಾ?
ಈ ಯೋಜನೆ ಸಣ್ಣ ಹಿಡುವಳಿ ಹೊಂದಿರುವ ಬಡವರ ಪಾಲಿಗೆ ವರದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಮಳೆ ಆಧರಿತ ಜಮೀನು
ಹೊಂದಿರುವವರಿಗೆ ಪಂಪ್‌ಸೆಟ್ ನೀಡಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಯತ್ನ ನಡೆದಿದೆ. ಜಮೀನಿಗೆ ನೀರುಣಿಸುವ ಪುಣ್ಯದ ಕೆಲಸವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರಕಾರ ಸಂಕಲ್ಪ ಮಾಡಿದೆ. ಹಿಂದೆ ಸೌಲಭ್ಯ ಪಡೆದಿದ್ದವರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಸಿಗದ ಕಾರಣ ಉಪಯೋಗ ಆಗಿರಲಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಬಾಕಿ ಇರುವ ಪಂಪ್‌ಸೆಟ್‌ಗಳಿಗೆ ಮುಂದಿನ ಜನವರಿ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ದಿಟ್ಟ ನಿರ್ಧಾರ ಕೈಗೊಂಡಿದೆ.