Wednesday, 30th October 2024

ವಿಶ್ವಕರ್ಮ ಸಮಾಜದ ಒಳಿತಿಗೆ ಶ್ರಮಿಸುವೆ

ಸಂದರ್ಶನ: ಬಾಲಕೃಷ್ಣ ಎನ್‌

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ನೇಮಕವಾಗಿರುವ ಬಾಬು ಪತ್ತಾರ್ ಅವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ನಿರಂತರ ದುಡಿದವರು. ವಿಶ್ವಕರ್ಮ ಸಮಾಜದ ಏಳಿಗೆಗೆ ಶ್ರಮಿಸು ತ್ತಿರುವ ನಾಯಕ. ವಕೀಲರಾಗಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೊಂದಿಗೆ ವಿಶ್ವವಾಣಿ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಿಜೆಪಿ ಸರಕಾರಕ್ಕೆ ಏನು ಹೇಳಲು ಬಯಸುತ್ತೀರಾ?
ದೇಶದಲ್ಲಿ ರಾಜಕೀಯವಾಗಿ ಹೆಚ್ಚು ಪ್ರಾಬಲ್ಯ ಪಕ್ಷ ಬಿಜೆಪಿ. ಸಾಮಾನ್ಯರನ್ನೂ ಅಸಮಾನ್ಯರನ್ನಾಗಿಸುವ ಈ ಪಕ್ಷ ಜನಸ್ನೇಹಿ. ನನ್ನಂತ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ರನ್ನಾಗಿ ನೇಮಕ ಮಾಡಿರುವುದು ಸಮುದಾಯಕ್ಕೆ ಸಂದ ಗೌರವ. ನಮ್ಮ ಸಮುದಾಯದ ಕಾರ್ಯಕರ್ತನಿಗೆ ಒಂದು
ಜವಾಬ್ದಾರಿಯುತ ಸ್ಥಾನ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ನಿಗಮಕ್ಕೆ ನೀಡುತ್ತಿರುವ ಅನುದಾನ ಕಡಿಮೆ ಇದ್ದು, ಸರಕಾರಕ್ಕೇನಾದರೂ ಮನವಿ ಮಾಡುತ್ತೀರಾ?
ನಾನು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನಿಗಮಕ್ಕೆ ಸರಕಾರ ನೀಡಿರುವುದು ಅನುದಾನ ಹಾಗೂ ಖರ್ಚು-ವೆಚ್ಚಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ. ಅನುದಾನ ಸದ್ಬಳಕೆಗೆ
ನಮ್ಮ ಸಮುದಾಯಕ್ಕೆ ಜಾಗೃತಿ ಮೂಡಿಸುವುದು ನನ್ನ ಧ್ಯೇಯ. ಏಕೆಂದರೆ ರಾಜ್ಯದಲ್ಲಿ ವಿಶ್ವಕರ್ಮ ಸಮಾಜದವರು ತೀರಾ ಕಡುಬಡವರು. ಆರ್ಥಿಕವಾಗಿ ಸಬಲರನ್ನಾಗಿಸಲು ಶ್ರಮಿಸಲಾಗುತ್ತದೆ. ಅನುದಾನ ಸಾಲದಿದ್ದರೆ ಸರಕಾರಕ್ಕೆ ಮನವಿ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ.

ನಿಗಮದಿಂದ ನೀಡಲಾಗಿರುವ 86 ಕೋಟಿ ರು. ಸಾಲಮನ್ನಾ ಮಾಡಲು ಸರಕಾರವನ್ನು ಒತ್ತಾಯಿಸುತ್ತೀರಾ?
ನಮ್ಮ ಸಮುದಾಯದವರು ಜಗತ್ತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕರೋನಾದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವಿಶ್ವಕರ್ಮ ಸಮುದಾಯದವರು ಕಷ್ಟದ ಜೀವನ ನಡೆಸುತ್ತಿದ್ದಾರೆ. ನಿಗಮದಿಂದ ಎಷ್ಟು ಫಲಾನುಭವಿಗಳು
ಸಾಲ ಪಡೆದಿದ್ದಾರೆ ಎಂಬುದು ಮಾಹಿತಿ ಪಡೆದು ಅಧಿಕಾರಿಗಳ ಜತೆ ಮಾತನಾಡಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳ ಲಾಗುತ್ತದೆ. ಯಾವುದೇ ಫಲಾನುಭವಿ ಸಂಕಷ್ಟಕ್ಕೆ ಒಳಗಾದರೆ ಅವರಿಗೆ ಮಾರ್ಗದರ್ಶನ ನೀಡುವ ಕೆಲಸವೂ ಮಾಡಲಾಗುತ್ತದೆ.

ಸಮುದಾಯ ತೀರಾ ಹಿಂದುಳಿದಿದ್ದರಿಂದ ಆರ್ಥಿಕ ಸಬಲತೆಗೆ ನಿಮ್ಮ ಕಾರ್ಯವೈಖರಿ ಹೇಗೆ?
ಆದರೆ ಆಧುನಿಕತೆ ಭರಾಟೆಗೆ ಸಿಲುಕಿ ವಿಶ್ವಕರ್ಮ ಸಮಾಜದ ಕುಲ ಕಸುಬುಗಳು ವಿನಾಶದಂಚಿಗೆ ಬಂದು ತಲುಪಿವೆ. ಇಷ್ಟಾದರೂ ಮುಂದಿನ ಪೀಳಿಗೆಗೆ ವಿಶ್ವಕರ್ಮನ ಶ್ರೇಷ್ಠತೆಯನ್ನು ಬಿಟ್ಟು ಹೋಗುವ ನಿಟ್ಟಿನಲ್ಲಿ ನಮ್ಮ ಪಂಚ ವೃತ್ತಿಯನ್ನು ಉಳಿಸಿ ಬೆಳೆಸಿ ಕೊಂಡು ಹೋಗುತ್ತ ಹೋರಾಟದ ಬದುಕು ನಡೆಸುತ್ತಿದ್ದೇವೆ. ವಿಶ್ವಕರ್ಮ ಸಮುದಾಯ ಪ್ರತಿಯೊಬ್ಬ ಬಡವರಿಗೂ ನಿಗಮದಿಂದ
ಸಿಗುವ ಸೌಲಭ್ಯಗಳನ್ನು ಆಯಾ ಕಾಲಘಟ್ಟಕ್ಕೆ ಮಾಡಲಾಗುತ್ತದೆ. ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಲಾಗುತ್ತದೆ.

ವಿಶ್ವಕರ್ಮ ಸಮಾಜ ರಾಜಕೀಯ, ಸಾಮಾಜಿಕ ಅವಕಾಶಗಳು ಕಡಿಮೆ ಇದೆಯಲ್ಲಾ?
ವಿಶ್ವಕರ್ಮ ಸಮಾಜದ ಜನರಿಗೆ ಕಲೆ ಎಂಬುದು ದೈವಿದತ್ತ ಕೊಡುಗೆ ಎಂದರೂ ತಪ್ಪಾಗಲಾರದು. ರಚನಾತ್ಮಕ ಕಲೆಗಳನ್ನು ಮೈಗೂಡಿಸಿಕೊಂಡಿರುವ ನಾವುಗಳು ಇಂದಿಗೂ ಅದನ್ನೆ ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ ಮೇಲ್ವರ್ಗದ ತುಳಿತಕ್ಕೆ ಸಮಾಜ ಇಂದಿಗೂ ಒಳಗಾಗಿದ್ದು, ಸಮಾಜದ ವ್ಯಕ್ತಿಗಳಿಗೆ ಸೂಕ್ತ ಸ್ಥಾನಮಾನವನ್ನು ಯಾವ ಸರಕಾರಗಳು ನಮಗೆ ನೀಡಿರಲಿಲ್ಲ.  ಆದರೆ ಬಿಜೆಪಿ ಸರಕಾರ ನಮ್ಮ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದು, ಸೂಕ್ತ ಸ್ಥಾನ-ಮಾನ ನೀಡುತ್ತಿದೆ. ಇನ್ನೂ ಹೆಚ್ಚಾಗಿ ರಾಜಕೀಯ-ಸಾಮಾಜಿಕ ಅವಕಾಶ ನೀಡುವ ಭರವಸೆ ಇದೆ.

ವಿಶ್ವಕರ್ಮ ಸಮಾಜದ ಪಂಚ ವೃತ್ತಿ ವಿನಾಶದಂಚಿಗೆ ತಲುಪಿದೆಯಲ್ಲಾ?
ನಮ್ಮ ಸಮುದಾಯದವರು ತಪ್ಪು ಮಾಡದಿದ್ದರೂ ವೃತ್ತಿಯ ಆಧಾರದ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಲಾಗುತ್ತಿದೆ. ಪೊಲೀಸರ ಕಾಟದಿಂದ ಭಯದ ವಾತಾವರಣದಲ್ಲಿ ನಮ್ಮ ಸಮುದಾಯದವರು ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಚಿನ್ನಾಭರಣ ಕಳ್ಳತನ ಮಾಡಿರುವ ಪ್ರಕರಣದಲ್ಲಿ ತನಿಖೆ ಮಾಡದೆ ನಮ್ಮವರ ಮೇಲೆ ಮೊಕದ್ದಮೆ ಹಾಕಲಾಗುತ್ತಿದೆ. ಇದನ್ನು ತಪ್ಪಿಸಲು ಒಂದು ಕಾಯಿದೆ ರೂಪಿಸಲು ಸರಕಾರದ ಜತೆ ಮಾತುಕತೆ ನಡೆಸಲಾಗುತ್ತದೆ. ಸಚಿವ ಸಂಪುಟದ ಮುಂದೆ ಈ ವಿಷಯ
ತರಲಾಗುತ್ತದೆ.