Friday, 13th December 2024

ಬರಿಗಣ್ಣಿಗೆ ಕಾಣುವುದಕ್ಕಿಂತ ವಿಭಿನ್ನವಾಗಿ ತೋರಿಸುವುದೇ ಛಾಯಾಗ್ರಹಣ

ವಿಶ್ವಛಾಯಾಗ್ರಹಣ ದಿನಾಚರಣೆ ವಿಶೇಷ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಆಗಸ್ಟ್ ೧೯ ವಿಶ್ವ ಛಾಯಾಗ್ರಹಣ ದಿನ. ಸಾವಿರ ಪದಗಳು ಹೇಳುವುದನ್ನು ಒಂದು ಭಾವಚಿತ್ರ ಹೇಳುತ್ತದೆ ಎಂಬ ಮಾತಿದೆ. ಛಾಯಾಗ್ರಹಣಕ್ಕೆ ತನ್ನದೇ ಆದ ಮಹತ್ವವೂ ಇದೆ. ಅದೆಷ್ಟೋ ಮಂದಿ ಛಾಯಾಗ್ರಹಣವನ್ನು ವೃತ್ತಿ ಮಾಡಿಕೊಂಡಿ ದ್ದರೆ, ಇನ್ನು ಹಲವರಿಗೆ ಪ್ರವೃತ್ತಿ. ಮತ್ತೆ ಕೆಲವರಿಗೆ ಹವ್ಯಾಸ. ಏನೋ ಹೊಸದನ್ನು ಕ್ಯಾಮೆರಾ ಕಣ್ಣಿನಲ್ಲಿ ಕಾಣಬೇಕು, ಅದನ್ನು ಇತರರಿಗೂ ತೋರಿಸಬೇಕು ಎಂಬ ಬಯಕೆ.

ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಹಾಗೂ ಛಾಯಾಗ್ರಹಣ ತರಬೇತುದಾರ ಬಾಬು ಜಿ.ಎಸ್. ಮಾತನಾ ಡಿದರು.

ಬರಿಗಣ್ಣಿಗೆ ಕಾಣುವುದಕ್ಕಿಂತ ವಿಭಿನ್ನವಾಗಿ ತೋರಿಸುವುದೇ ಉತ್ತಮ ಛಾಯಾಗ್ರಹಣ: ಲೋಕೇಶ್ ಮೊಸಳೆ ಮಾತನಾಡಿ, ವಿಶ್ವ ದೆಲ್ಲೆಡೆ ಛಾಯಾಗ್ರಹಣ ದಿನ ಆಚರಣೆ ಮಾಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಛಾಯಾಗ್ರಹಕರೇ. ನಮ್ಮ ಕಣ್ಣು ಕ್ಯಾಮೆರಾ ಮತ್ತು ನಮ್ಮ ಹೃದಯವೇ ಫೋಟೋಗಳು. ಕ್ಯಾಮೆರಾ ಗಳು ಮೊಬೈಲ್‌ನಲ್ಲಿ ಬಂದು ಪ್ರತಿಯೊಬ್ಬರೂ ಛಾಯಾ ಗ್ರಹಕರೇ ಆಗಿದ್ದಾರೆ. ಈ ಮೊದಲೆಲ್ಲಾ ಛಾಯಾಗ್ರಹಣವೆಂದರೆ ದಾಖಲೀಕರಣ ಎನ್ನಲಾಗುತ್ತಿತ್ತು. ಆದರೆ, ಇಂದು ಛಾಯಾಗ್ರಹಣ ಒಂದು ಕಲೆಯಾಗಿದೆ.

ಕ್ಯಾಮೆರಾ ಹೊಂದಿದವರು ಮಾತ್ರ ಛಾಯಾಗ್ರಾಹಕರಲ್ಲ. ಯಾರಿಗೆ ತೆರೆದ ಕಣ್ಣಿನಿಂದ ನೋಡುವ ಶಕ್ತಿ ಇದೆಯೋ ಅವರೆಲ್ಲಾ ಛಾಯಾಗ್ರಾಹಕರೇ. ನಮಗೆ ಕಣ್ಣಿಗೆ ಒಂದು ವಸ್ತು ಕಂಡರೆ, ಚಿತ್ರದಲ್ಲಿ ಅದನ್ನು ನಮಗೆ ಕಾಣುವುದಕ್ಕಿಂತ ವಿಭಿನವಾಗಿ ತೆಗೆದಾಗ ಮಾತ್ರ ಅದು ಉತ್ತಮ ಛಾಯಾಗ್ರಹಣವಾಗಲು ಸಾಧ್ಯ ಎಂಬುದಾಗಿ ನಂಬಿರುವವನು ನಾನು ಎಂದು ತಿಳಿಸಿದರು.

ವಿಶ್ವಛಾಯಾಗ್ರಹಣ ದಿನಾಚರಣೆ ವಿಶೇಷ ಛಾಯಾಗ್ರಹಣದ ಇತಿಹಾಸದ ಬಗ್ಗೆ ಬಾಬು ಜಿ.ಎಸ್. ಮಾತನಾಡಿ, ಛಾಯಾ ಗ್ರಹಣವೆಂದರೆ ಬೆಳಕಿನಲ್ಲಿ ಬರೆಯುವ ಕಲೆ. ಈ ಕಲೆ ಯನ್ನು ಯಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರನ್ನು ಛಾಯಾ ಗ್ರಾಹಕ ಎಂದು ಕರೆಯುತ್ತೇವೆ. ೧೮೩೯ರಲ್ಲಿ ವಿಶ್ವ ಛಾಯಾಗ್ರಹಣ ದಿನ ಆರಂಭಿಸಲಾ ಯಿತು. ೧೮೩೮ರಲ್ಲಿ ಫ್ರೆಂಚ್ ಅಕಾಡೆಮಿ ಆಫ್ ಸೈಂಸ್ ಈ ದಿನ ಆರಂಭಿಸಿತು. ೧೮೩೯ರಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಶುರುವಾಯಿತು.

ಅದಕ್ಕಿಂತ ಹಿಂದೆ ನೋಡುವುದಾದರೆ, ೧೮೨೬ರಲ್ಲಿ ಜೋಸೆಫ್ ಎಂಬಾತ ಒಂದು ಚಿತ್ರವನ್ನು ತೆಗೆದಿದ್ದರು. ಆಗ ಅದನ್ನು ಹೆಲಿಯೋಗ್ರಾಫ್ ಎಂದು ಕರೆಯುತ್ತಿದ್ದರು. ಫೋಟೋಗ್ರಾಫ್ ಎಂಬ ಹೆಸರು ಬಂದಿರಲಿಲ್ಲ. ಒಂದು ಚಿತ್ರ ತೆಗೆಯಲು ಅವರು ಎಂಟು ಗಂಟೆ ತೆಗೆದುಕೊಂಡಿದ್ದರು. ೧೮೧೬ರಲ್ಲಿ ಈ ವ್ಯಕ್ತಿ ಕೈಹಾಕಿದ ಸಾಹಸವನ್ನು ೧೮೩೮ಕ್ಕೆ ಫ್ರೆಂಚ್ ದೇಶ ಪ್ರಪಂಚಕ್ಕೆ ಉಡುಗೊರೆಯಾಗಿ ನೀಡಿತು ಎಂದರು.

೧೮೬೧ರಲ್ಲಿ ಮೊದಲ ಬಾರಿಗೆ ಕಲರ್ ಚಿತ್ರಣ ಬಂದಿದ್ದು. ಅದನ್ನು ಪ್ರಪಂಚಕ್ಕೆ ನೀಡಿದವರು ಮ್ಯಾಕ್ಸ್‌ವೆಲ್ಲರ್. ಕಪ್ಪು-ಬಿಳುಪಿನ ಚಿತ್ರಗಳಲ್ಲಿ ನಗುವ ಚಿತ್ರಗಳು ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ಭಾರತದಲ್ಲಿ ಪೈಂಟಿಂಗ್ ಗಳ ರಕ್ಷಣೆಗಾಗಿ ಛಾಯಾಗ್ರಹಣ ಬಂದಿತ್ತು. ನಂತರ ಬ್ರಿಟೀಷರು ನಮ್ಮ ದೇಶದ ಆಗುಹೋಗುಗಳನ್ನು ಸೆರೆ ಹಿಡಿಯಲು ಉಪಯೋಗಿಸಿದ್ದರು. ೧೮೪೦ರಿಂದ ೧೯೦೦ತನಕ ೭೦-ಟೊ ಸ್ಟೂಡಿಯೋ ಮುಂಬೈನಲ್ಲಿ ಮತ್ತು ೪೦ಸ್ಟೂಡಿಯೋ ಕೋಲ್ಕೊತಾದಲ್ಲಿತ್ತು ಎಂದು ದಾಖಲೆಗಳು ಹೇಳುತ್ತವೆ ಎಂದು
ಮಾಹಿತಿ ನೀಡಿದರು.

ಅವರು ಹೇಳಿದ್ದು…
ನ್ಯೂಡಿಟಿ ಫೋಟೊದಲ್ಲಿ ಕಾಣುವುದಿಲ್ಲ, ನೋಡುವವರ ಮನಸ್ಸಿನಲ್ಲಿ ಮೂಡುತ್ತದೆ. ನಮ್ಮ ನೋಟ ಮತ್ತು ಮನಸ್ಸಿಗೆ ಮಡಿವಂತಿಕೆ ಇರಬಾರದು. ಚಿತ್ರವನ್ನು ಹೃದಯದಿಂದ ನೋಡಿದಾಗ ಮಾತ್ರ ಒಂದು ಕಲೆಯಾಗಿ ಕಾಣುತ್ತದೆ. ಇಲ್ಲದಿದ್ದರೆ ನ್ಯೂಡ್ ಆಗಿ ಕಾಣುತ್ತದೆ.
ಮೈಸೂರಿನ ಎಲ್ಲಾ ಪತ್ರಕರ್ತರು ಸೇರಿ ನನ್ನ ಮೊದಲ ಫೋಟೊ ಪ್ರದರ್ಶನ ಏರ್ಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಛಾಯಾಗ್ರಹಣ ನನ್ನ ಪತ್ರಿಕೋದ್ಯಮವನ್ನು ನುಂಗಿದೆ ಮತ್ತು ನನ್ನ ಜೀವನವನ್ನೂ ನುಂಗಿದೆ. ಆದರೆ, ನಾನು ನನಗೆ ಬೇಕಾದ ಹಾಗೆ ಬದುಕಿದ್ದೇನೆ ಎಂಬ ಖುಷಿ ಇದೆ. ಜೇಬಿನಲ್ಲಿ ನನ್ನ ಖರ್ಚಿಗೆ ದುಡ್ಡಿಲ್ಲದಿದ್ದಾಗ ಮಾತ್ರ ಬೇಸರವಾಗಿದೆ. ಅದರ ಹೊರತು ಬೇರಾವ ನೋವೂ ಇಲ್ಲ.
ಮೈಸೂರಿನಲ್ಲಿ ನೆಲೆಸಿರುವ ನನಗೆ ಬಲಗೈ ಬೀಸಿದರೆ ರಂಗನತಿಟ್ಟು, ಎಡಗೈ ಬೀಸಿದರೆ ಬಂಡೀಪುರ, ಮುಂದೆ ಹೋದರೆ ಕಬಿನಿ, ಹಿಂದೆ ಬಂದರೆ ಮಡಿಕೇರಿ. ಇಂಥಹ ಸುಂದರವಾದ ಸ್ಥಳದಲ್ಲಿ ಇರುವುದು ನನಗೆ ಸಂತಸ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಕೆಲಸ ವನ್ಯಜೀವಿ ಛಾಯಾಗ್ರಹಣ. ನನ್ನ ಜೀವನದ ಬಹುತೇಕ ಸಮಯ ಕಾಡು, ಹಕ್ಕಿ, ಕೆರೆ ಹಿಂದೆ ಬಿದ್ದಿದ್ದೇನೆ. ಬೇರೆ ಏನಾದರೂ ಮಾಡಬೇಕೆಂದು ಎಂದೂ ಅನ್ನಿಸಿಲ್ಲ.

ಡಾ.ಎನ್.ಡಾರ್ಜಿ, ಅಹಮದ್ ಆಲಿ ಖಾನ್, ರಾಜಾ ಈಶ್ವರ ಚಂದ್ರ ಸಿಂಗ್, ಶಿವಶಂಕರ್ ನಾರಾಯಣ್, ಗಣಮಪಿ ರಾವ್ ಎಸ್. ಕಾಳೆ ಮುಂತಾದವರು ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿದವರು.

ವನ್ಯಜೀವಿಗಳ ಛಾಯಾಗ್ರಹಣ ಮಾಡುವಾಗ ಪ್ರಾಣಿಗಳ ಸೂಕ್ಷ್ಮತೆ ತಿಳಿಯದಿದ್ದರೆ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ನಮ್ಮ ಚಿತ್ರಗಳೂ ಸಮಾಜಕ್ಕೆ ಪೂರಕವಾಗಿರುವಂತೆ ಇದ್ದರೆ ಸಾಮಾಜ ಹಾಗೂ ಕಾಡು ಎರಡೂ ಚೆನ್ನಾಗಿರುತ್ತದೆ. ಆದರೆ,
ಇಂದಿನ ದಿನಮಾನದಲ್ಲಿ ವನ್ಯಜೀವಿ ಛಾಯಾಗ್ರಹಣವನ್ನು ದಂಧೆಯಾಗಿ ಮಾಡಿಕೊಂಡಿದ್ದಾರೆ. – ಲೋಕೇಶ್ ಮೊಸಳೆ

ವನ್ಯಜೀವಿ ಛಾಯಾಗ್ರಾಹಕ ಫೋಟೊದಲ್ಲಿರುವ ವ್ಯಕ್ತಿ ಬದಲಾದರೂ ಆ ಫೋಟೋ ಎಂದೂ ಬದಲಾಗುವುದಿಲ್ಲ ಎಂದು
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ಹಾಗೆಯೇ ಫೋಟೋಗ್ರಫಿ ಆ ಕ್ಷಣದ, ಆ ಕಾಲದ ಶಾಶ್ವತ ಇತಿಹಾಸ.
-ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ

ತನ್ನ ಒಳಗೆ ಯಾವುದೇ ನೋವಿದ್ದರೂ ಇಡೀ ಪ್ರಪಂಚಕ್ಕೆ ನಗು ತರಿಸಿ, ಅದನ್ನು ಸೆರೆ ಹಿಡಿಯುವವರು ಛಾಯಾಗ್ರಾಹಕರು. ಹೀಗಾಗಿ ನಾನೊಬ್ಬ ಛಾಯಾಗ್ರಾಹಕ ಎಂದು ಹೇಳಿಕೊಳ್ಳಲು ತುಂಬಾ ಸಂತೋಷವಾಗುತ್ತದೆ.
– ಬಾಬು.ಜಿ.ಎಸ್. ಛಾಯಾಗ್ರಾಹಕ

***

೧೮೫೩ರಲ್ಲಿ ವಿಲ್ಲಿ ಎಂಬ ಹುಡುಗನ ಮೊಟ್ಟಮೊದಲ ನಗುವ ಚಿತ್ರ ಬಂದಿದ್ದು. ೧೮೪೦ರಲ್ಲಿ ಭಾರತೀಯರಿಂದ ಛಾಯಾಗ್ರಹಣ ಪ್ರಾರಂಭ. ಭಾರತದ ಫೋಟೋಗ್ರಾಫರ್ ಎಂದು ಹೆಸರುವಾಸಿಯಾದವರು ರಾಜ್ ದೀನ ದಯಾಳ್.  ಜೈಪುರ್ ಮಹಾರಾಜ ಸವೈ ರಾವ್ ಸಿಂಗ್-೨ ಒಬ್ಬ ಛಾಯಾಗ್ರಾಹಕ. ಫೋಟೊಗ್ರಾಫರ್ ಪ್ರಿನ್ಸ್ ಎಂದೇ ಹೆಸರುವಾಸಿಯಾಗಿದ್ದರು.