Wednesday, 30th October 2024

ಸಮುದಾಯದ ಕುರಿತು ಅಪಾರ ಕಾಳಜಿ

ಸ್ಮರಣೆ
ಡಾ.ಎಸ್.ಪರಮೇಶ್
ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ನಡೆದಾಡುವ ದೇವರು ಪರಮಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರ ಮಹಾಶಿವಯೋಗಿಗಳು ತಮ್ಮ ದಿವ್ಯರೂಪವನ್ನು, ಲಿಂಗರೂಪ ವನ್ನಾಗಿಸಿ ಆರು ವರ್ಷಗಳು ಕಳೆಯುತ್ತಾ ಬಂದಿದೆ. ಅವರು ನಮ್ಮನ್ನು ತಮ್ಮ ಶಿವಶರಣ ಪಥದಲ್ಲಿ ಅನ್ನ- ಆಶ್ರಯ- ಅಕ್ಷರದ ತ್ರಿವಿಧ ದಾಸೋಹದ ಮೂಲಕ ನಮ್ಮನ್ನು ಸಾಗಿಸಿದ, ಭೋದಿಸಿದ ಜೊತೆಗೆ ಕರೆದೊಯ್ದ ಜೀವನಾಮೃತ ಕ್ಷಣಗಳು ನೆನಪಿನ ಪುಟದಲ್ಲಿ ಅಚ್ಛಳಿಯದೇ ಉಳಿದಿದೆ.

ಪರಮಪೂಜ್ಯರು ಈಗ್ಗೆ ದಶಕಗಳ ಹಿಂದೆ ಉದ್ಧಾನ ಶಿವಯೋಗಿಗಳಿಂದ ತ್ರಿವಿಧ ದಾಸೋಹ ಜ್ಯೋತಿಯನ್ನು ತಮ್ಮ ಕೈಗೆತ್ತಿಕೊಂಡ ಮೇಲೆ ಹಿಂತಿರುಗಲಿಲ್ಲ. ಅವರು ನೀಡಿದ ಪಥ ಈಗ ಕೇವಲ ಪಥವಾಗಿ ಉಳಿದಿಲ್ಲ ತ್ರಿವಿಧ ದಾಸೋಹ ಯಜ್ಞದ ಸೇತುವೆಯಾಗಿ, ಈಗ ವೈದ್ಯಕೀಯ ವಿಭಾಗಕ್ಕೂ ವಿಸ್ತರಿಸಿ ಇಡೀ ಮನುಕುಲವೇ ಅನುಸರಿಸುವ ಮಾರ್ಗವಾಗಿ ಶಾಶ್ವತವಾಗಿ ಉಳಿದು ಕೊಂಡು ಬಿಟ್ಟಿದೆ.

ಪೂಜ್ಯರ ನೆನಪಿನಂಗಳವನ್ನು ಹೊಕ್ಕರೆ ನನಗೆ ಮೊದಲು ಸಿಗುವುದೇ ಅವರ ದಾಸೋಹ ಪ್ರಜ್ಞೆ. ಪಾದ ಪೂಜೆ ಹೆಸರಿನಲ್ಲಿ ಹಳ್ಳಿ ಹಳ್ಳಿಗಳ ತಿರುಗಿ, ರೈತರನ್ನು ಹರಸಿ ಬಂದು ಮಳೆ ಬೆಳೆಯಾದ ಕಾಲಕ್ಕೆ ಎತ್ತಿನಗಾಡಿ ಗಳಲ್ಲಿ ತಂದು ಸಿದ್ಧಗಂಗಾ ಮಠದ ದಾಸೋ ಹದ ಕಣಜಗಳನ್ನು ತುಂಬುತ್ತಿದ್ದರು. ರೈತರು ಬಂದರೆ ಮನೆಗೆ ಮನೆ ಮಕ್ಕಳು ಬಂದಂತೆ ಸ್ವೀಕರಿಸುತ್ತಿದ್ದ ಶ್ರೀಗಳು ಅವರನ್ನು ಕುಳ್ಳಿರಿಸಿ ದಾಸೋಹ ಬಡಿಸಿ ಅವರೂರಿನ ಎಲ್ಲಾ ಸಂಕಟಗಳನ್ನು ಕೇಳುತ್ತಿದ್ದರು. ನಾನು ಈಗ ಒಬ್ಬ ವೈದ್ಯನಾಗಿ ರೋಗಿಗಳ ಮಾನಸಿಕ ಸ್ಥಿತಿಯನ್ನು ಅಭ್ಯಸಿಸು ವುದು ಒಂದು ಪಾಠ ವಾಗಿ ಓದಿದ್ದೇನೆ. ಆದರೆ ಪೂಜ್ಯರು ತಮ್ಮ ಪಾದವನ್ನರಸಿ ಬರುತ್ತಿದ್ದ ಲಕ್ಷಾಂತರ ಜನ ಭಕ್ತರ ಮುಖಭಾವವನ್ನೇ ಗಮನಿಸಿ ಅವರ ಕಷ್ಟಗಳಿಗೆ ಪರಿಹಾರ ಹೇಳುತ್ತಿದ್ದರು, ಜೊತೆಗೆ ಅವರ ಊರಿನ ಸಮಸ್ಯೆಗಳ ಬಗ್ಗೆಯೂ ಹೇಳುತ್ತಿದ್ದರು. ಒಬ್ಬ ವ್ಯಕ್ತಿ ಹಾಗೂ ಆತನ ಸುತ್ತಲಿನ ಸಮುದಾಯದ ಬಗ್ಗೆ ಅವರಿಗಿದ್ದ ಪ್ರಜ್ಞೆ ನಾನು ಓದಿದ ಯಾವ ಶಾಸ್ತ್ರದಲ್ಲಿಯೂ ತಿಳಿದುಕೊಳ್ಳಲಾಗಿಲ್ಲ.

ಕಾಯಕದ ವಿಚಾರದಲ್ಲಿ ಅವರದ್ದು ಕಠೋರ ತಪಸ್ವಿಯಾಗಿದ್ದರು ಎಂದರೆ, ಒಂದು ಕಾಯಕದಿಂದ ಮತ್ತೊಂದು ಕಾಯಕವನ್ನು ಮಾಡುವುದೇ ಕಾಯಕದ ನಿಜವಾದ ವಿಶ್ರಾಂತಿಯನ್ನುತ್ತಿದ್ದರು. ದಿನಚರಿಯಲ್ಲಿ ಅವರ ಕಾಯಕಕ್ಕೆ ಮೊದಲ ಆಧ್ಯತೆ. ಎಷ್ಟೇ ದೂರದಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದರೂ ಕೂಡ ವಿಶ್ರಮಿಸದೆ ತೆರಳುತ್ತಿದ್ದರು. ಪೂಜಾನಿಷ್ಠೆ, ಕಾಯಕ ನಿಷ್ಠೆ ಇಡೀ
ದಿನಚರಿಯ ಭಾಗವಾಗಿತ್ತು. ಅವರ ವಿಷಯದಲ್ಲಿ ನನಗೆ ಸದಾ ಕಾಡುವ ಮತ್ತೊಂದು ವಿಷಯವೆಂದರೆ ಅವರ ಆರೋಗ್ಯದ ಸ್ಥಿತಿ.
ಬರೋಬ್ಬರಿ ೧೧೧ ವರ್ಷಗಳ ಕಾಲ ಜೀವಿಸಿದ್ದ ಪೂಜ್ಯರ ಆರೋಗ್ಯ ಹೇಗಿತ್ತೆಂದರೆ ಅವರ ಹೃದಯ, ತ್ವಚೆ, ಕಣ್ಣು ಸೇರಿದಂತೆ ದೇಹದ ಎಲ್ಲಾ ಭಾಗಗಳು ಅವರ ನೂರನೇ ವಯಸ್ಸಿನಲ್ಲಿಯೂ ೧೦ ವರ್ಷದ ಬಾಲಕನಿಗಿರುವಂತೆ ಇರುತ್ತಿತ್ತು.

ಅವರಿಗೆ ಚಿಕಿತ್ಸೆ ನೀಡಿದ ಇಡೀ ವೈದ್ಯರು ಹೇಳಿದ್ದು ಇದೇ. ಚೆನ್ನೈನ ರೇಲಾ ಆಸ್ಪತ್ರೆಯ ಮುಖ್ಯಸ್ಥರಾದ ಮೊಹಮ್ಮದ್ ರೇಲಾರವರು ಕೂಡ ನನ್ನೊಂದಿಗೆ ನಾನು ಅತಿಚಿಕ್ಕ ಪ್ರಾಯದ ಮಗುವಿಗೆ ಚಿಕಿತ್ಸೆ ನೀಡಿದ್ದೇನೆ. ಅತಿ ಹಿರಿಯ ವಯಸ್ಸಿನ ವ್ಯಕ್ತಿಗೆ ನೀಡುತ್ತಿರುವ ನನ್ನ ಜೀವಮಾನದ ಮೊದಲ ಶಸ್ತ್ರಚಿಕಿತ್ಸೆ ಇದು. ಅವರ ಪಿತ್ತಕೋ ಹೊರತು ಪಡಿಸಿ ಉಳಿದ ದೇಹದ ಎಲ್ಲಾ ಭಾಗಗಳು ನಿಖರವಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ನನ್ನ ಜೀವಮಾನದಲ್ಲಿ ಮೊದಲು ನೋಡುತ್ತಿದ್ದೇನೆ. ಇದೇ ಕೊನೆಯೂ ಇರಬಹುದೇನೋ ಎಂದು ಹಂಚಿ ಕೊಂಡಿದ್ದರು.

ಪ್ರತಿನಿತ್ಯ ಬೆಳಗ್ಗೆ ಮೂರುಗಂಟೆಗೆ ಆರಂಭವಾಗುತ್ತಿದ್ದ ಅವರ ದಿನಚರಿ ಪೂಜೆ, ಪ್ರಸಾದ, ಅಧ್ಯಯನ, ಮಠದ ಕಾರ್ಯಗಳು, ಭಕ್ತರ ಸಂದರ್ಶನ, ತೋಟಗಳಲ್ಲಿ ರೈತ ನಾಗಿ, ಊರಿನಲ್ಲಿ ಹಿರಿಯನಾಗಿ, ಭಕ್ತರ ನಡುವೆ ಗುರುವಾಗಿ ಎಲ್ಲಾ ಪ್ರಾಪಂಚಿಕ ಕಾರ್ಯಗಳನ್ನು ಮುಗಿಸಿ ಶಿವಪೂಜೆಯೊಂದಿಗೆ ಅಂತ್ಯವಾಗುತ್ತಿತ್ತು. ನಿರಂತರ ಓಡಾಟವಿದ್ದರು, ಅಗಣಿತ ಕೆಲಸಗಳೇ ಇದ್ದರೂ ಶಿವ ಪೂಜೆ, ನಿಯಮಿತ ಆಹಾರ ಸೇವನೆಯನ್ನೇ ಜೀವನದ ಉದ್ದಕ್ಕೂ ಅನುಸರಿಸಿಕೊಂಡು ಬಂದ ಅವರ ಆರೋಗ್ಯ ಜೀವನ ವನ್ನು ಒಂದು ಆರೋಗ್ಯ ಶಾಸವಾಗಿ ಇಂದಿನ ಹಾಗೂ ಮುಂದಿನ ಜನಾಂಗ ಅಭ್ಯಸಿಸಬೇಕಿದೆ.

ಉಚಿತ ಚಿಕಿತ್ಸೆ
ಸಿದ್ಧಗಂಗಾ ಮೆಡಿಕಲ್ ಕಾಲೇಜು ಆರಂಭಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎನ್ನುವ ಅವರ ಅಕಾಂಕ್ಷೆಯನ್ನು ಪರಮಪೂಜ್ಯ ಸಿದ್ಧಲಿಂಗ ಶ್ರೀಗಳು ನಿಜವಾಗಿಸಿ ೪೦೦ ಹಾಸಿಗೆಯಳ್ಳ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯನ್ನೇ ತೆರೆದು ಉಚಿತ ಚಿಕಿತ್ಸೆಗಾಗಿ ಮೀಸಲಿರಿಸಿದ್ದಾರೆ. ವಾರ್ಷಿಕ ೧೫೦ ಯುವ ವೈದ್ಯರು ವೈದ್ಯಕಾಯಕಕ್ಕೆ ಅಣಿಮಾಡಿ ಕಳುಹಿಸಿಕೊಡಲಾಗುತ್ತಿದೆ.

ಮಕ್ಕಳ ವಿಚಾರದಲ್ಲಿ ಅವರು ತೋರುತ್ತಿದ್ದ ಕಾಳಜಿ, ಪ್ರೀತಿ, ವಾತ್ಸಲ್ಯ ತಾಯಿ ಮಗುವಿನಂತೆ, ಗೋವು- ಕರುವಿನಂತೆ ಸದಾ ಕಾಣುತ್ತಿತ್ತು. ನೂರಾರು ಮೈಲಿ ಗಳನ್ನು ದಾಟಿ ಬರುವ ಮಕ್ಕಳಿಗೆ ಇವರೊಬ್ಬರ ಅಪ್ಪ ಅವ್ವನ ಸಮ್ಮಿಳಿತಗೊಂಡ ವಾತ್ಸಲ್ಯ ಮೂರ್ತಿಯಾಗಿ ಕಾಣುತ್ತಿದ್ದರು. ಅವರಿಂದ ನಾಲ್ಕು ಅಕ್ಷರ ಕಲಿತ ಎಲ್ಲಾ ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ದಾಸೋಹ ಮೂರ್ತಿಗಳಾಗಿ
ಹೊರಹೊಮ್ಮಿವೆ. ದಾಸೋಹ-ಮಕ್ಕಳು-ಮಠ- ಶಿವಧ್ಯಾನ ಪೂಜ್ಯರ ಚತುರ್ವಿದದ ಪಥ.

ಸಿದ್ಧಗಂಗೆಯ ಪುಣ್ಯದ ನೆಲವನ್ನು ತಮ್ಮ ಧಾರ್ಮಿಕ ಕಾರ್ಯಗಳಿಂದ ದಾಸೋಹದ ಪುಣ್ಯ ನೆಲವಾಗಿಸಿದ ಅವರ ದಿವ್ಯ ಜ್ಯೋತಿ ಇಂದು ಅಜರಾಮರವಾಗಿ ತಲೆ-ತಲೆಮಾರಿಗೆ ದಾಟಿಸುವ ದಾರಿದೀವಿಗೆಯಾಗಿ ಪರಂಜ್ಯೋತಿಯಾಗಿ ನಿರಂತರ ಪ್ರಜ್ವಲಿಸುತ್ತಿದೆ.
ಪರಮಪೂಜ್ಯ ಶಿವಕುಮಾರ ಶ್ರೀಗಳ ದಾಸೋಹ ದ್ವೀಪವನ್ನಿಡಿದ ಪರಮಪೂಜ್ಯ ಸಿದ್ಧಲಿಂಗ ಮಹಾ ಸ್ವಾಮೀಜಿಯವರು ಸಾಗು ತ್ತಿದ್ದಾರೆ. ಅವರೊಂದಿಗೆ ಶಿವಸಿದ್ಧೇಶ್ವರ ಪೂಜ್ಯರು ಅವರ ಹಿಂದೆ ನಮ್ಮಂತಹ ಕೋಟ್ಯಂತರ ಭಕ್ತವೃಂದ ಸಾಗುತ್ತಿದೆ.

ಬೆಳಕನ್ನು ನೋಡಬಹುದು, ಅದರ ಬೆಳಕಿನಲ್ಲಿ ನಾವು ಬೆಳಗಬಹುದೇ ಹೊರತು ಜ್ಯೋತಿಯನ್ನು ಹೇಗೆ ಸ್ಪರ್ಶಿಸಲಾಗುವು ದಿಲ್ಲವೋ ಹಾಗೆ ಅವರಾಗಿ ಬದುಕಲಾಗದಿದ್ದರು ಅವರ ಬೆಳಕಿನಲ್ಲಿ ನಾವು ಬೆಳಗಬೇಕು, ನೂರಾರು ಜನರಿಗೆ ಸೂರಾಗಬೇಕು,
ದಾಸೋಹದ ಮೂಲಕ ನಿರಂತರವಾಗಿ ಅವರ ದಾರಿಯಲ್ಲಿ ಸಾಗಬೇಕು.