Tuesday, 3rd December 2024

Congress Candidate Annapoorna Interview: ಗ್ಯಾರಂಟಿ ಯೋಜನೆಗಳೇ ನಮಗೆ ಶ್ರೀರಕ್ಷೆ

ಅನಂತ ಪದ್ಮನಾಭ ರಾವ್, ಹೊಸಪೇಟೆ

ಬಿಸಿಲೂರು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಚುನಾವಣಾ ಅಖಾಡದಲ್ಲಿ ಸ್ಪರ್ಧಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕ್ಷೇತ್ರಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ವಿಶ್ವವಾಣಿ ಪತ್ರಿಕೆಗೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಸಂಡೂರು ಕ್ಷೇತ್ರಕ್ಕೆ ಟಿಕೆಟ್ ದೊರೆತಿರುವುದಕ್ಕೆ ಏನು ಹೇಳಲು ಬಯಸುತ್ತೀರಿ?
ನನಗೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಾಗೂ ಸಮಾನತೆ ಆಧಾರದಡಿ ಟಿಕೆಟ್ ಲಭಿಸಿದೆ. ಮಹಿಳೆಗೆ ಟಿಕೆಟ್ ನೀಡಿರುವುದು ನನಗೆ ಮಾತ್ರ ಗೌರವ ದೊರೆತಿಲ್ಲ ಬದಲಿಗೆ ಇಡೀ ಕ್ಷೇತ್ರದ ಮಹಿಳೆಯರಿಗೆ ನೀಡಿದ ಗೌರವವಾಗಿದೆ ಎಂದು ಹೇಳಲು ಬಯಸುವೆ.

ತುಕಾರಾಂ ಅವರು ನಾಲ್ಕು ಬಾರಿ ಶಾಸಕರಾಗಿದ್ದು ಈಗ ಸಂಸದರಾಗಿದ್ದಾರೆ, ಇದು ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ?
ಸಂಸದ ತುಕಾರಾಂ ಅವರು 2008ರಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ನಮ್ಮಗೆ ಶ್ರೀರಕ್ಷೆಯಾಗಲಿದೆ. ಸಚಿವ ಸಂತೋಷ್ ಲಾಡ್ ಹಾಗೂ ಸಂಸದರಾದ ತುಕಾರಾಂ ಅವರು ಹಲವಾರು ಅಭಿವೃದ್ಧಿ ಕಾರ್ಯಗಳು ಈಗಾಗಲೇ ಕೈಗೊಂಡಿದ್ದಾರೆ. ಅವರ ಕಾರ್ಯ, ಅಭಿವೃದ್ಧಿಗಳು ಗೆಲುವಿಗೆ ಸಹಕಾರಿಯಾಗಲಿದೆ. ಅಲ್ಲದೇ ನಾನು ಸಹ ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವೆ, ಅದರಿಂದಲೂ ಜನರು ಪರಿಚಯವಿದ್ದಾರೆ. ಈ ಎಲ್ಲದರಿಂದ ಗೆಲ್ಲುವ ವಿಶ್ವಾಸವಿದೆ.

ಟಿಕೆಟ್ ಲಭಿಸಿದ ಹಿನ್ನೆಲೆ ಕೆಲವರಲ್ಲಿ ಅಸಮಾಧಾನದ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ನಡೆದಿದೆ ಇದಕ್ಕೆ ಏನ್ನು ಹೇಳುತ್ತಿರಿ?
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಕುಟುಂಬದಲ್ಲಿ ಸಹಜವಾಗಿ ಕೆಲವು ಸಣ್ಣಪುಟ್ಟ ಗೊಂದಲ,
ಅಸಮಾಧಾನ ಸಹಜ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಮರು ಚುನಾವಣೆಯಲ್ಲಿ ಎದುರಾಳಿ
ಬಿಜೆಪಿಯನ್ನು ಸಮರ್ಥವಾಗಿ ಎದುರಿಸುತ್ತೇವೆ.

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಏನಾದರೂ ಯೋಜನೆ ಇದೆಯಾ?
ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದೆ. ಆಗುತ್ತಿವೆ. ಅವೆಲ್ಲವನ್ನು ಮುಂದು ವರಿಸಿಕೊಂಡು ಹೋಗುವೆ. ಸಂಸದ ತುಕಾರಾಂ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಗೊಳಿಸುವುದರ ಜೊತೆಗೆ ಕ್ಷೇತ್ರದ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರ ಕಲ್ಯಾಣಕ್ಕೂ ಅಗತ್ಯ ಯೋಜನೆಗಳನ್ನು ರೂಪಿಸುವ ಯೋಜನೆ ಇದೆ.

ಕ್ಷೇತ್ರದ ಮತದಾರರಿಗೆ ಏನು ಹೇಳಲು ಬಯಸುವಿರಿ?
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿರುವೆ. ಕ್ಷೇತ್ರದ ಹಾಗೂ ತಾಲೂಕಿನ ಜನರ ಸಮಗ್ರ ಕಲ್ಯಾಣಕ್ಕೆ
ಹೆಚ್ಚಿನ ಒತ್ತು ನೀಡುವೆ. ಜನರ ಸಮಸ್ಯೆ, ಕಷ್ಟಗಳಿಗೆ ಸದಾ ಸ್ಪಂದಿಸುವೆ. ಜನರ ಮಧ್ಯೆ ಇದ್ದೂ ಕೆಲಸ ಮಾಡಿರುವೆ,
ಮುಂದೆಯೂ ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸುವೆ. ಮತದಾರರು ಈ ಮರು ಚುನಾವಣೆಯಲ್ಲಿಯೂ ಹೆಚ್ಚಿನ ಮತ ನೀಡಿ ಗೆಲ್ಲಿಸುವ ವಿಶ್ವಾಸವಿದೆ.

ಬಿಜೆಪಿ ಘಟಾನುಘಟಿ ನಾಯಕರನ್ನು ಹೇಗೆ ಎದುರಿಸುವಿರಿ?
2008ರಿಂದಲೂ ಬಳ್ಳಾರಿ ಜಿಲ್ಲೆಯಲ್ಲಿ ತುಕರಾಂ ಅವರು ಸಾಕಷ್ಟು ಹೋರಾಟ ನಡೆಸಿದ್ದಾರೆ. ಬಿಜೆಪಿ ನಾಯಕರನ್ನು ಈ ಹಿಂದನಿಂದಲೂ ಸಮರ್ಥವಾಗಿ ಎದುರಿಸಿದ್ದೇವೆ. ರಾಮುಲು, ಜನಾರ್ದನ ರೆಡ್ಡಿ ಸೇರಿದಂತೆ ಏರೇ ಬಂದರೂ ಸಮರ್ಥವಾಗಿ ಎಲ್ಲರೂ ಒಗ್ಗೂಡಿ ಎದುರಿಸುತ್ತೇವೆ. ಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಸಚಿವರು, ಶಾಸಕರು ಸೇರಿದಂತೆ ಇತರರು ಬರಲಿ ದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೈಗೊಂಡ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಲಿದೆ. ಪ್ರತಿಯೊಂದು ವರ್ಗದ ಜನರಿಗೂ ಈ ಎಲ್ಲಾ ಯೋಜನೆಗಳು ತಲುಪಿವೆ. ಈ ಎಲ್ಲಾ ವಿಚಾರಗಳು ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ.