Thursday, 26th December 2024

Vishweshwar Bhat Column: ರಸ್ತೆಗಳಲ್ಲಿ ಪಾರ್ಕಿಂಗ್‌ ಇಲ್ಲ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇಂದಿನ ದಿನಗಳಲ್ಲಿ ಯಾವುದೇ ದೇಶಕ್ಕೆ ಹೋದರೂ, ವಾಹನಗಳನ್ನು‌ ಮನೆ ಮುಂದೆ ಅಥವಾ ರಸ್ತೆಗಳಲ್ಲಿ ನಿಲ್ಲಿಸುವುದು (ಪಾರ್ಕ್ ಮಾಡುವುದು) ಸಾಮಾನ್ಯ. ಅಮೆರಿಕ, ಬ್ರಿಟನ್, – ಮುಂತಾದ ದೇಶಗಳಲ್ಲೂ ಜನ ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕ್ ಮಾಡುತ್ತಾರೆ. ಆದರೆ ಜಪಾನಿನ ರಾಜಧಾನಿ ಟೋಕಿಯೋದಂಥ ಜನನಿಬಿಢ ನಗರದಲ್ಲೂ ರಸ್ತೆ ಮೇಲೆ ವಾಹನಗಳನ್ನು ಪಾರ್ಕ್ ಮಾಡಿದ ದೃಶ್ಯಗಳು ಕಾಣುವುದಿಲ್ಲ.

ಇದಕ್ಕೆ ಕಾರಣ ಜಪಾನಿನಲ್ಲಿನ ಕಟ್ಟುನಿಟ್ಟಾದ ಪಾರ್ಕಿಂಗ್ ನಿಯಮಗಳು, ಕಠಿಣ ಸಾರ್ವಜನಿಕ ನಡೆ ಮತ್ತು ಜನ ಸಂಸ್ಕೃತಿ. ಇದು ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ವಾಹನಗಳನ್ನು ಬೀದಿಗಳಲ್ಲಿ ನಿಲ್ಲಿಸಲು ಕಾರಣ ವಾಗುತ್ತದೆ. ಟೋಕಿಯೋದಲ್ಲಿ ಪಾರ್ಕಿಂಗ್ ಸ್ಪೇಸ್ ಸರ್ಟಿಫಿಕೇಶನ್ (ಶಕೋಶೋಮಿ) ಅನ್ನು ಹೊಂದಿರುವುದು ಕಡ್ಡಾಯ. ನೀವು ಪಾರ್ಕಿಂಗ್ ಸ್ಥಳವನ್ನು ಹೊಂದಿರುವಿರಿ ಎಂಬುದಕ್ಕೆ ಪುರಾವೆಯನ್ನು ಒದಗಿಸದ ಹೊರತು ನೀವು ಕಾರನ್ನು ಖರೀದಿಸಲು ಸಾಧ್ಯವಿಲ್ಲ. ಒಂದು ವೇಳೆ ಪಾರ್ಕಿಂಗ್‌ಗೆ ಜಾಗ ಸಿಗದಿದ್ದರೆ, ಅಲ್ಲಿ ತನಕ ಕಾರನ್ನು ಖರೀದಿಸಲು ಕಾಯುವುದು ಅನಿವಾರ್ಯ. ಈ ‘ಪಾರ್ಕಿಂಗ್ ಸ್ಪೇಸ್ ಸರ್ಟಿಫಿಕೇಟ್’ ಹೊಂದಿದ್ದರೆ ನೀವು ರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದಂತೆ.

ಅನುಮತಿಯಿಲ್ಲದೆ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದು ಬಹುತೇಕ ಪ್ರದೇಶಗಳಲ್ಲಿ ಕಾನೂನುಬಾಹಿರ. ಪೊಲೀಸರು ಬೀದಿಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ ಮತ್ತು ಕಾನೂನುಬಾಹಿರವಾಗಿ ನಿಲುಗಡೆ ಮಾಡಲಾದ ಕಾರುಗಳಿಗೆ ದಂಡ ವಿಧಿಸಲಾಗುತ್ತದೆ. ಟೋಕಿಯೋ ಜನಸಂಖ್ಯಾ ದಟ್ಟಣೆಯನ್ನೂ ಸೀಮಿತ ಸ್ಥಳವನ್ನೂ ಹೊಂದಿದ ನಗರವಾಗಿರುವುದರಿಂದ ಈ ಕ್ರಮ ಅನಿವಾರ್ಯ. ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡಿದರೆ, ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪಾರ್ಕಿಂಗ್ ಸ್ಥಳಗಳು ಬಾಡಿಗೆಗೆ ಅಥವಾ ಸ್ವಂತಕ್ಕೆ ದುಬಾರಿಯಾಗಿವೆ, ಇದರಿಂದ ಎಲ್ಲರೂ ಕಾರು ಖರೀದಿಸಲೂ ಸಾಧ್ಯವಿಲ್ಲ.

ಒಂದಕ್ಕಿಂತ ಹೆಚ್ಚು ಕಾರು ಖರೀದಿಸುವವರು ಪಾರ್ಕಿಂಗ್ ಜಾಗಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಎಡೆ ಬಹು
ಅಂತಸ್ತಿನ ಪಾರ್ಕಿಂಗ್ ಸ್ಥಳಗಳು ಅಥವಾ ಯಾಂತ್ರಿಕ ಪಾರ್ಕಿಂಗ್ ವ್ಯವಸ್ಥೆಗಳು ಸಾಮಾನ್ಯ. ಆದರೆ ಅವುಗಳಿಗೆ ಹಣ ನೀಡಬೇಕು. ಜಪಾನಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ವಿಶ್ವದ ಅತ್ಯುತ್ತಮವಾಗಿದೆ. ರೈಲು, ಬಸ್ಸುಗಳ ಸಂಪರ್ಕ ವ್ಯವಸ್ಥೆಯೂ ಅತ್ಯುತ್ತಮವಾಗಿದೆ. ಸ್ವಂತ ವಾಹನಗಳನ್ನು ಇಟ್ಟುಕೊಳ್ಳದೇ, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವಷ್ಟು ಅವು ವೇಗ, ವಿಶ್ವಾಸಾರ್ಹವಾಗಿದ್ದು ಉತ್ತಮ connectivity ಯನ್ನು ಹೊಂದಿದೆ.

ಇದರಿಂದ ಸಾರ್ವಜನಿಕ ಸಾರಿಗೆಯನ್ನೇ ಜನ ವ್ಯಾಪಕವಾಗಿ ಬಳಸುತ್ತಾರೆ. ಇದು ವೈಯಕ್ತಿಕ ವಾಹನಗಳ ಅಗತ್ಯ ವನ್ನು ಗಣನೀಯವಾಗಿ ಕಮ್ಮಿ ಮಾಡಿದೆ. ಜಪಾನಿಯರು ಸ್ವಭಾವತಃ ಶಿಸ್ತುಪ್ರಿಯರು ಮತ್ತು ಕಾನೂನುಪಾಲಕರು. ಅದು ಅವರ ನಡೆ-ಸಂಸ್ಕೃತಿಯಲ್ಲಿಯೇ ರಕ್ತಗತವಾಗಿ ಬೆಳೆದುಬಂದಿದೆ. ಯಾವುದೇ ನಿಯಮವನ್ನು ರೂಪಿಸಿದರೂ ಯಾರೂ ಉಲ್ಲಂಘಿಸುವುದಿಲ್ಲ, ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ದಂಡ ಕಟ್ಟುವುದು ವೈಯಕ್ತಿಕ ಹಿನ್ನಡೆ ಅಥವಾ ಅಪರಾಧ ಎಂಬ ಭಾವನೆ ಅವರಲ್ಲಿದೆ. ಪಾರ್ಕಿಂಗ್ ನಿಯಮಗಳನ್ನು ಉಲ್ಲಂಸಿದರೆ ವಿಪರೀತ ದಂಡ ವಿಧಿಸ ಲಾಗುತ್ತದೆ.

ದಂಡದ ಮೊತ್ತ 10 ಸಾವಿರ ಯೆನ್‌ನಿಂದ 20 ಸಾವಿರ ಯೆನ್‌ವರೆಗೆ ಇರಬಹುದು. ಅಕ್ರಮ ಪಾರ್ಕಿಂಗ್ ಮಾಡಿದ
ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳಬಹುದು. ಪೊಲೀಸರು ಕ್ರಮ ಜರುಗಿಸುವುದನ್ನು ಅವರು ಬಯಸು ವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಸಾರ್ವಜನಿಕ ನಡವಳಿಕೆ ಬಗ್ಗೆ ಜಾಗರೂಕರಾಗಿರುತ್ತಾರೆ. ಮಹಿಳೆ
ಯರಿಗೆ ಮತ್ತು ವಿಕಲಚೇತನರಿಗೆ ವಿಶೇಷವಾಗಿ ಮೀಸಲಾಗಿರುವ ಪಾರ್ಕಿಂಗ್ ಸ್ಥಳಗಳಿವೆ. ಜಪಾನಿನಲ್ಲಿ, ಪಾರ್ಕಿಂಗ್ ಸ್ಥಳವನ್ನು ಹುಡುಕಲು ಪಾರ್ಕಿಂಗ್ ಆಪ್‌ಗಳು ಮತ್ತು ನವೀಕರಿಸಿದ ಮ್ಯಾಪ್‌ಗಳು ಲಭ್ಯವಿವೆ. ಈ ಆಪ್‌ಗಳು ಶುಲ್ಕ, ಸ್ಥಳ ಮತ್ತು ಲಭ್ಯತೆಯ ಬಗ್ಗೆ ಮಾಹಿತಿ ಒದಗಿಸುತ್ತವೆ.

ಜಾಗದ ಅಭಾವದ ಕಾರಣ, ಪಾರ್ಕಿಂಗ್ ಟವರ್‌ಗಳು ಮತ್ತು ಆಟೋ ಮೇಟೆಡ್ ಪಾರ್ಕಿಂಗ್ ವ್ಯವಸ್ಥೆಗಳೂ ಜನಪ್ರಿಯ. ಯಂತ್ರಗಳು ಕಾರನ್ನು ಲಿಫ್ಟ್‌ ಅಥವಾ ರೋಲರ್ ಮೂಲಕ ಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ, ಜನರು ತಮ್ಮ ಮನೆಯ ಹತ್ತಿರವೇ ಕಾರನ್ನು ನಿಲ್ಲಿಸಬಹುದು.

ಇದನ್ನೂ ಓದಿ: @vishweshwarbhat