Monday, 16th September 2024

ಸೀಟು ಹಂಚಿಕೆ ಎಡವಟ್ಟು; ಸಾಮಾನ್ಯರಿಗೆ ಇಕ್ಕಟ್ಟು

NEET

ನೀಟ್‌ನಲ್ಲಿ 2ನೇ ರ‍್ಯಾಂಕ್ ಪಡೆದರೂ ದೆಹಲಿ ವಿದ್ಯಾರ್ಥಿಗೆ ಸಿಗಲಿಲ್ಲ ಇಷ್ಟಪಟ್ಟ ಕಾಲೇಜು

ಸರಕಾರಿ ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗೊಲ್ಲ ಅವಕಾಶ

ಬೆಂಗಳೂರು: ಪ್ರತಿಯೊಬ್ಬರಿಗೂ ತಮ್ಮದೇ ಕನಸಿನ ಕಾಲೇಜು ಎನ್ನುವುದು ಇರುತ್ತದೆ. ಅದರಲ್ಲಿಯೂ ವೈದ್ಯಕೀಯ ಸ್ನಾತ್ತಕೋತ್ತರ (ಎಂಡಿ) ಮಾಡುವ
ವಿದ್ಯಾರ್ಥಿಗಳು ಆರಂಭದಿಂದಲೇ, ಇಂತಹದ್ದೇ ಕಾಲೇಜಿನಲ್ಲಿ ಇದೇ ವಿಭಾಗದಲ್ಲಿ ಎಂಡಿ ಮಾಡಬೇಕು ಎನ್ನುವ ಗುರಿ ಹೊಂದಿ, ಅದಕ್ಕೆ ಬೇಕಾದ ಪರಿಶ್ರಮವನ್ನು ಹಾಕಿರುತ್ತಾರೆ. ಆದರೆ ಮೀಸಲಾತಿ ಪ್ರಕಟಿಸುವ ಮ್ಯಾಟ್ರಿಕ್ಸ್‌ನಲ್ಲಿ ಆ ಕಾಲೇಜಿಗೆ ಸಾಮಾನ್ಯ ವರ್ಗದಲ್ಲಿ ಸರಕಾರಿ ಕೋಟಾದಲ್ಲಿ ಸೀಟು ಪಡೆಯಲು ಅವಕಾಶವೇ ಇಲ್ಲ ಎಂದರೆ ಹೇಗಾಗಬೇಡ!

ಹೌದು, ಸರಕಾರ ಪ್ರಕಟಿಸುವ ಮ್ಯಾಟ್ರಿಕ್ಸ್‌ನಲ್ಲಿ ಈ ರೀತಿಯ ಎಡವಟ್ಟಿನಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಭಾರೀ ಸಮಸ್ಯೆಯಾಗುತ್ತದೆ. ಕೆಲವು ಕಾಲೇಜಿನಲ್ಲಿ ಮೀಸಲಾತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಸೀಟು ಇರುವು ದಿಲ್ಲ. ಅಂಥವರು ಸಾಮಾನ್ಯ ವರ್ಗದ ಕೋಟದಲ್ಲಿ ಸೀಟು ಪಡೆಯಲು ಅವಕಾಶ ವಿರುತ್ತದೆ. ಆದರೆ ಜನರಲ್ ಕೆಟಗರಿ ವಿದ್ಯಾರ್ಥಿಗಳಿಗೆ ಈ ಅವಕಾಶ ಇಲ್ಲದೇ ಇರುವುದರಿಂದ, ಅವಕಾಶ ವಂಚಿತರಾಗುವ ಸಾಧ್ಯತೆ ಹೆಚ್ಚಿರು ತ್ತದೆ.

ಕರ್ನಾಟಕದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಂಚಿಕೆಯಾಗಿರುವ ಸೀಟುಗಳಲ್ಲಿ ಹಲವು ಕಾಲೇ ಜಿನ ಹಲವು ವಿಷಯಗಳಲ್ಲಿ, ಸಾಮಾನ್ಯ ವರ್ಗದವರಿಗೆ ಸೀಟು ಸಿಗುವುದಿಲ್ಲ. ಮೊದಲ ರ‍್ಯಾಂಕ್ ಪಡೆದಿದ್ದರೂ, ಎಲ್ಲ ಸೀಟುಗಳು ‘ರಿರ್ಸವ್’ ಆಗಿರುವುದರಿಂದ ಸಾಮಾನ್ಯ ವರ್ಗದವರಿಗೆ ಸೀಟು ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ನಾಲ್ಕಕ್ಕಿಂತ ಕಡಿಮೆ ಸೀಟುಗಳಿದ್ದರೆ, ಬಹುತೇಕ ಅವರು ಮೀಸಲಾತಿಗೆ ನಿಗದಿಯಾಗಿರುತ್ತದೆ. ಹೀಗಾಗಿ ಸಾಮಾನ್ಯ ವರ್ಗದವರಿಗೆ ಅವಕಾಶ ಸಿಗುವುದಿಲ್ಲ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳ ಬೇಕು. ಸಂವಿಧಾನಬದ್ಧವಾಗಿರುವ ಮೀಸಲು ನೀಡುವ ಜತೆಯಲ್ಲಿಯೇ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವುದಕ್ಕೆ ಕ್ರಮವಹಿಸಬೇಕು ಎನ್ನುವ ಮಾತುಗಳು ಕೇಳಿಬಂದಿದೆ.

ಸಾಮಾನ್ಯ ವರ್ಗಕ್ಕೆ ಹೆಚ್ಚುವರಿ ಸೀಟು ನೀಡಿ: ಇದಕ್ಕೆ ಸಂಬಂಧಿಸಿದಂತೆ ಕೆಲ ತಜ್ಞರು, ಸಾಮಾನ್ಯವಾಗಿ ರೊಟೇಷನ್ ಆಧಾರದಲ್ಲಿ ಈ ರೀತಿ ಸೀಟು ಹಂಚಿಕೆ ಮಾಡಲಾಗುತ್ತದೆ. ಇದರಿಂದ ಒಂದು ಕಾಲೇಜುನಲ್ಲಿ ಒಂದು ವರ್ಷ ಇಲ್ಲದ ಸೀಟು, ಇನ್ನೊಂದು ಕಾಲೇಜಿನಲ್ಲಿ ಸಿಗಬಹುದು. ಆದರೆ, ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಉತ್ತಮ ರ‍್ಯಾಂಕ್ ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಗೆ ನೀಡಿರುವ ಸೀಟುಗಳಲ್ಲಿ ಯಾವುದೇ ಬದಲಾವಣೆ ಮಾಡದೇ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಒಂದು ಸೀಟನ್ನು ಹೆಚ್ಚಿಸುವುದರಿಂದ ಹಲವರಿಗೆ ಸಹಾಯವಾಗುತ್ತದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಶುಲ್ಕ ಕಟ್ಟುವುದೇ ದೊಡ್ಡ ಸವಾಲು: ಎಂಡಿ ಪದವಿಗೆ ಸರಕಾರಿ ಕಾಲೇಜಿನಲ್ಲಿ ಅವಕಾಶವಿಲ್ಲದಿದ್ದರೇನು? ಖಾಸಗಿ ಕಾಲೇಜಿನ ಸರಕಾರಿ ಕೋಟದಲ್ಲಿ ಸೇರಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಸರಕಾರಿ ಕಾಲೇಜಿನಲ್ಲಿ ಸೀಟು ಪಡೆದರೆ, ಇರುವ ಮೊತ್ತಕ್ಕೂ ಖಾಸಗಿ ಕಾಲೇಜಿನಲ್ಲಿ ಸರಕಾರಿ ಕೋಟದಲ್ಲಿರುವ ಮೊತ್ತಕ್ಕೂ ಅಜಗಜಾಂತರವಿದೆ. ಉದಾಹರಣೆಗೆ ಅರೆವಳಿಕೆ ಶಾಸಕ್ಕೆ ಸರಕಾರಿ ಕಾಲೇಜಿನಲ್ಲಿರುವ ಶುಲ್ಕ 1,13,900, ಅದೇ ಖಾಸಗಿ ಕಾಲೇಜಿನಲ್ಲಿರುವ ಸರಕಾರಿ ಕೋಟಾದ ಸೀಟಿಗೆ 7,13,780 ರು. ಪಾವತಿಸಬೇಕು.

ಒಂದು ವೇಳೆ ಸರಕಾರಿ ಕೋಟದಲ್ಲಿ ಸಿಗದಿದ್ದರೆ ಖಾಸಗಿ ಕಾಲೇಜಿನಲ್ಲಿ ಖಾಸಗಿ ಕೋಟಾದಲ್ಲಿ ಸೀಟು ಪಡೆಯಲು 11,50,205 ರು. ಪಾವತಿಸಬೇಕು. ಇದು ಕೇವಲ ವಾರ್ಷಿಕ ಪ್ರವೇಶ ಶುಲ್ಕವಾಗಿದ್ದು, ಇದರೊಂದಿಗೆ ವಿವಿಧ ಶುಲ್ಕವನ್ನು ಸೇರಿಸಿದರೆ, ಸರಕಾರಿ ಕಾಲೇಜಿನಲ್ಲಿ ಓದಲು 7.50 ಲಕ್ಷ ಖರ್ಚಾದರೆ, ಖಾಸಗಿ ಕಾಲೇಜಿನ ಸರಕಾರಿ ಕೋಟದಲ್ಲಿ ಓದುವುದಕ್ಕೆ 11 ಲಕ್ಷಕ್ಕಿಂತ ಹೆಚ್ಚು ಖರ್ಚು ಬರಲಿದೆ ಎನ್ನುವ ಮಾತುಗಳನ್ನು ವಿದ್ಯಾರ್ಥಿಗಳು ಹೇಳಿದ್ದಾರೆ. ಇಷ್ಟು ಖರ್ಚು ಮಾಡುವುದು ಮಧ್ಯಮ ವರ್ಗದ ಅನೇಕ ಕುಟುಂಬಗಳಿಗೆ ಕಷ್ಟವಾಗಲಿದೆ ಎನ್ನುವುದು ವಿದ್ಯಾರ್ಥಿಗಳ ಮಾತಾಗಿದೆ.

ದೆಹಲಿಯಲ್ಲಿ ರ‍್ಯಾಂಕ್ ಇದ್ದರೂ ಸಿಗಲಿಲ್ಲ ಸೀಟು
ರಾಜ್ಯದ ಗಗನ್ ಕುಬೇರ್ ವಿಷಯದಲ್ಲಿ ಆತ ಮೊದಲ ರ‍್ಯಾಂಕ್ ಪಡೆದೇ ಇಲ್ಲ. ಹೀಗಾಗಿ ಆತನ ತಪ್ಪಿದೆ ಎನ್ನುವ ಮಾತನ್ನು ಅನೇಕರು ಹೇಳಿದ್ದರು. ಆದರೆ ಇದೇ ವರ್ಷ ದೆಹಲಿಯಲ್ಲಿ ದೇಶದಲ್ಲಿಯೇ 2ನೇ ರ‍್ಯಾಂಕ್ ಅನ್ನು ಅರ್ಜುನ್ ಕುಮಾರ್ ಅರ್ಗವಾಲ್ ಎನ್ನುವ ವಿದ್ಯಾರ್ಥಿ ಪಡೆದುಕೊಂಡಿದ್ದ. ಆತ ದೆಹಲಿಯ ಮೌಲಾನ ಆಜಾದ್ ಮೆಡಿಕಲ್ ಕಾಲೇಜು ಅಥವಾ ಕಿಂಗ್ ಎಡ್ವರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಚರ್ಮಶಾಸ್ತ್ರವನ್ನು ಅಧ್ಯಯನ ಮಾಡಬೇಕು ಎನ್ನುವ ಆಸೆ ಹೊಂದಿದ್ದ. ಆದರೆ
ಮೀಸಲಾತಿಯಲ್ಲಿ ಸಾಮಾನ್ಯ ವರ್ಗಕ್ಕೆ ಸೀಟು ಇಲ್ಲದೇ ಇದಿದ್ದರಿಂದ ಆತ ಈ ಕಾಲೇಜುಗಳಲ್ಲಿ ಓದಲು ಸಾಧ್ಯವಾಗಿಲ್ಲ. ಈ ಬಗ್ಗೆ ಆತನ ಟ್ವೀಟರ್‌ನಲ್ಲಿ ಬರೆದು ಕೊಂಡಿದ್ದು, ಈ ರೀತಿಯ ಮೀಸಲಾತಿ ಕ್ರಮಕ್ಕೆ ಭಾರಿ ಖಂಡನೆ ವ್ಯಕ್ತವಾಗಿದೆ.

ಟಾಪ್ ರ‍್ಯಾಂಕ್ ಪಡೆದವರಿಗೂ ಬೇಕಿರುವ ಕಾಲೇಜು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿಲ್ಲವೇ?

ಕಲ್ಯಾಣ ಕರ್ನಾಟಕಕ್ಕೆ 77 ಸೀಟು
ಕಲ್ಯಾಣ ಕರ್ನಾಟಕಕ್ಕೆ ಇರುವ ವಿಶೇಷ ಸ್ಥಾನದ ಅನ್ವಯ, ಸಾಮಾನ್ಯ ಕೆಟಗರಿಯ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿ ಗಳಿಗೆ ಎಂದು 77 ಸೀಟು ಮೀಸಲಿದೆ. ಇನ್ನು ಶೇ.30ರಷ್ಟು ಸೀಟುಗಳನ್ನು ಸೇವಾ ನಿರತ ವೈದ್ಯರಿಗೆ ನೀಡಲಾಗಿರುತ್ತದೆ. ಈ ಎಲ್ಲ ಮೀಸಲಾತಿಯನ್ನು ತಗೆದು, ಸಾಮಾನ್ಯ ವರ್ಗಕ್ಕೆ ಎಂದು ಸಿಗುವುದು 413 ಸೀಟುಗಳು ಮಾತ್ರ.

***

ಪ್ರಸಕ್ತ ಸಾಲಿನ ಪಿ.ಜಿ. ನೀಟ್‌ನಲ್ಲಿ ನಾನು ಮೊದಲ ರ‍್ಯಾಂಕ್ ಪಡೆದಿಲ್ಲ. ವಿಡಿಯೊದಲ್ಲಿ ಒಂದು ವೇಳೆ ನಾನು ಮೊದಲ ರ‍್ಯಾಂಕ್ ಪಡೆದಿದ್ದರೂ ಸಹ ಗದಗಿನ ವೈದ್ಯ ಕೀಯ ಕಾಲೇಜಿನಲ್ಲಿ ಅರೆವಳಿಕೆ ಶಾಸ್ತ್ರದಲ್ಲಿ ಸೀಟು ಸಿಗುತ್ತಿರಲಿಲ್ಲ. ಏಕೆಂದರೆ ಆ ಕಾಲೇಜಿನ ಎಲ್ಲ ಸೀಟುಗಳು ಮೀಸಲಾಗಿವೆ. ಆ ಅರ್ಥದಲ್ಲಿ ನಾನು ವಿಡಿಯೊ ಮಾಡಿದ್ದೆ. ಈ ರೀತಿಯ ಮೀಸಲು ಪದ್ಧತಿಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಮಾತನಾಡಿದ್ದೆ. ಆದರೆ ಅದು ಚರ್ಚೆ ಯಾಗದೆ, ವಿಷಯಾಂತರವಾಗುತ್ತಿರುವುದಕ್ಕೆ ಬೇಸರವಾಗಿದೆ.
– ಡಾ.ಗಗನ್ ಕುಬೇರ್