Thursday, 26th December 2024

Vishweshwar Bhat Column: ಜಪಾನಿಯರ ಅತಿಯಾದ ಕೆಲಸದ ಪ್ರವೃತ್ತಿ

ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನಿ ಭಾಷೆಯಲ್ಲಿ ‘ಕರೋಷಿ’ ಎಂಬ ಒಂದು ಪದವಿದೆ. ಅದರ ಅರ್ಥ- ಅತಿಯಾದ ಕೆಲಸದಿಂದ ಸಾವು (Death from overwork). ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಪದಕ್ಕೆ ‘ಸಾಯುವ ತನಕ ದುಡಿ’ (Work til you die) ಎಂಬ ಅರ್ಥ ಬಂದಿದೆ. 1970ಕ್ಕಿಂತ ಮುನ್ನ ಈ ಪದ ಬಳಕೆಯಲ್ಲಿ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪದ ಎಲ್ಲರಿಗೂ ಪರಿಚಿತ. ಕಾರಣ ಅತಿಯಾದ ಕೆಲಸ ಮತ್ತು ಒತ್ತಡದಿಂದ ಸಾಯುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು. ಜಪಾನಿಯರು ಮೂಲತಃ ಕಾಯಕಪ್ರೇಮಿಗಳು. ಯಾವುದೇ ಕೆಲಸ ಮಾಡಲಿ ಅದರಲ್ಲಿ ಮಗ್ನರಾಗು ವವರು.

‘ಕಾಯಕವೇ ಕೈಲಾಸ’ ಎಂಬುದನ್ನು ಅವರು ಹೇಳಿಕೆಯಲ್ಲಿ ಮಾತ್ರ ಅಲ್ಲ, ಆಚರಣೆಯಲ್ಲೂ ತರುವವರು. ಇಂದಿಗೂ ಅನೇಕ ಕಂಪನಿಗಳಲ್ಲಿ ಉದ್ಯೋಗಿಗಳು ರಾತ್ರಿ ಮನೆಗೆ ತೆರಳದೇ, ಆಫೀಸಿನಲ್ಲಿಯೇ ಮಲಗುತ್ತಾರೆ. ಬೆಳಗ್ಗೆ ಎದ್ದು ಪ್ರಾತಃವಿಧಿಗಳನ್ನು ಮುಗಿಸಿ ಪುನಃ ಕೆಲಸಕ್ಕೆ ಕುಳಿತುಕೊಳ್ಳುತ್ತಾರೆ. ಅದರಲ್ಲೂ ಅವಿವಾಹಿತರು ತಿಂಗಳಲ್ಲಿ ನಾಲ್ಕೈದು ಸಲ ಮನೆಗೆ ಹೋಗುತ್ತಾರೆ. ಹೆಚ್ಚಿನ ಸಮಯವನ್ನು ಆಫೀಸಿನಲ್ಲಿಯೇ ಕಳೆಯುತ್ತಾರೆ.

ಜಪಾನಿನ ಕೆಲಸಗಾರರು ತಮ್ಮ ಕಂಪನಿಗಳೆಡೆಗೆ ತೋರುವ ಸಮರ್ಪಣಾಭಾವ ಮತ್ತು ನಿಷ್ಠೆಗೆ ಖ್ಯಾತಿ ಹೊಂದಿರು ವುದು ವಿಶೇಷ. ತಾವು ಕೆಲಸ ಮಾಡುವ ಸಂಸ್ಥೆಗೆ ನಿಷ್ಠರಾಗಿರುವುದು, ಒಪ್ಪಿಕೊಂಡ ಕೆಲಸ ಅಥವಾ ಉದ್ಯೋಗಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವುದು, ತಮ್ಮ ಮೇಲಿನವರನ್ನು ಪ್ರಶ್ನಿಸದಿರುವುದು, ಅತಿಯಾದ ಸಹನೆ ಮತ್ತು ಕಾಯಕದಲ್ಲಿ ಮೈಮರೆಯುವುದು ಜಪಾನಿಯರ ಕಾಯಕ ಸಿದ್ಧಾಂತದಲ್ಲಿ ಅಂತರ್ಗತವಾಗಿದೆ.

ಜಪಾನ್ ದೇಶದ ಆರ್ಥಿಕ ಪ್ರಗತಿಗೆ, ತಾಂತ್ರಿಕ ಪವಾಡಕ್ಕೆ ‘ಕರೋಷಿ’ ಮಹತ್ವದ ಪಾತ್ರವಹಿಸಿರುವುದು ಸುಳ್ಳಲ್ಲ. ತಮಗೆ ಒಪ್ಪಿಸಿದ ಕೆಲಸವನ್ನು ಮಾಡಿ ಮುಗಿಸುವ ತನಕ ಅವರು ವಿರಮಿಸುವುದಿಲ್ಲ. 1980ರ ಆರಂಭದಲ್ಲಿ
ಕರೋಷಿ ಪ್ರಕರಣಗಳು ಅಲ್ಲಲ್ಲಿ ವರದಿಯಾದಾಗ, ಅದರ ತೀವ್ರತೆ ಗಮನಕ್ಕೆ ಬಂದಿತು. ಆ ಸಂದರ್ಭದಲ್ಲಿ ಅನೇಕ ಕಂಪನಿಗಳು ಆಫೀಸಿನಲ್ಲಿ ತಮ್ಮ ಉದ್ಯೋಗಿಗಳಿಗೆ ರಾತ್ರಿ ಮಲಗುವ ವ್ಯವಸ್ಥೆಯನ್ನು ಒದಗಿಸಲಾರಂಭಿಸಿದವು.
ಉದ್ಯೋಗ ಜಾಹೀರಾತಿನಲ್ಲಿ ‘ರಾತ್ರಿ ವೇಳೆಯಲ್ಲೂ ಕೆಲಸ ಮಾಡುವವರಿಗೆ ಆದ್ಯತೆ’ ಎಂಬ ವಾಕ್ಯಗಳು ಕಾಣಿಸಿಕೊಳ್ಳ ಲಾರಂಭಿಸಿದವು. ಆದರೆ ಕರೋಷಿ ಒಂದು ಸಮಸ್ಯೆಯಾಗಿ, ದೇಶದೆಡೆ ಪ್ರತಿಭಟನೆ ಹಂತ ತಲುಪಿದ್ದು, 2013 ರಲ್ಲಿ ಅಲ್ಲಿನ ಎನ್‌ಎಚ್‌ಕೆ ಪಬ್ಲಿಕ್ ಬ್ರಾಡ್‌ಕಾಸ್ಟರ್ ವರದಿಗಾರನೊಬ್ಬ ಕಾರ್ಯಮಗ್ನನಾಗಿದ್ದಾಗಲೇ ಹೃದಯಾಘಾತ ದಿಂದ ಸಾವನ್ನಪ್ಪಿದಾಗ.

ಆತ ತಿಂಗಳಲ್ಲಿ ನಿರ್ದಿಷ್ಟ ಅವಧಿಗಿಂತ, 159 ತಾಸು ಹೆಚ್ಚು ಕೆಲಸ ಮಾಡಿ ತೀವ್ರ ಒತ್ತಡಕ್ಕೆ ಒಳಗಾಗಿದ್ದ. ನಂತರ ಆತನ ಹಾಗೆ ಅತಿ ಕೆಲಸ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಅದಾಗಿ
ಒಂದು ವರ್ಷದೊಳಗೆ, ಮೂವರು ಅತಿಯಾದ ಕೆಲಸದ ಒತ್ತಡದಿಂದ ಬಹುಮಹಡಿ ಕಟ್ಟಡದಿಂದ ಜಿಗಿದು ಸಾವನ್ನಪಿದರು. ಆಗ ‘ಕರೋಷಿ’ಯ ಕರಾಳಮುಖದ ಅನಾವರಣವಾಯಿತು.

ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳು ವಾರದ ಎಲ್ಲ ದಿನ, ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುತ್ತಿ
ರುವುದು ಗಮನಕ್ಕೆ ಬಂದಿತು. ಇದರಿಂದ ಎಚ್ಚೆತ್ತುಕೊಂಡ ಸರಕಾರ, ಗರಿಷ್ಠ ಕಾಯಕ ಅವಧಿಯನ್ನು ನಿಗದಿ ಪಡಿಸಲು ಮುಂದಾಯಿತು. ಅಷ್ಟೇ ಅಲ್ಲ, ಉದ್ಯೋಗಿಗಳಿಗೆ ರಜೆ ತೆಗೆದುಕೊಳ್ಳುವ ಸಂಪ್ರದಾಯವನ್ನು ಆರಂಭಿಸು ವಂತೆ ಹುರಿದುಂಬಿಸಲಾರಂಭಿಸಿತು. ಹೊಸ ಕಾನೂನಿನ ಪ್ರಕಾರ, ಜಪಾನಿನಲ್ಲಿ ಒಂದು ತಿಂಗಳಿಗೆ 100 ಗಂಟೆ ಓವರ್ ಟೈಮ್ ಕೆಲಸ ಮಾಡಬಹುದು. ದಿನದಲ್ಲಿ ಯಾವ ಕಾರಣಕ್ಕೂ 4 ಗಂಟೆಗಿಂತ ಹೆಚ್ಚು ಅವಧಿ ಕೆಲಸ ಮಾಡುವಂತಿಲ್ಲ.

ಜಪಾನಿನಂದೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ಕೆಲಸ ಮಾಡುವ ಪ್ರವೃತ್ತಿ ಸಾಮಾನ್ಯವಾಗಿ ಎಲ್ಲ ದೇಶ ಗಳಲ್ಲೂ ಹೆಚ್ಚಾಗುತ್ತಿದೆ. ಆದರೆ ಜಪಾನಿನಲ್ಲಿ ಇದು ಅತಿ ಎನಿಸುವ ಹಂತ ತಲುಪಿದೆ. ಕೆಲವು ಕಂಪನಿಗಳು ತಾವು ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆಂದೂ, You can make it tomorrow ಮತ್ತು Please
do it when you have enough time ಎಂದೂ ಹೇಳುತ್ತಿವೆ.

ಇದನ್ನೂ ಓದಿ: @vishweshwarbhat