Thursday, 26th December 2024

Vishweshwar Bhat Column: ಏಕನಾಥ-ಲೋಕನಾಥ-ಜಗನ್ನಾಥ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಬಿಜೆಪಿಯ ಹಿರಿಯ ನಾಯಕ ಜಗನ್ನಾಥ ರಾವ್ ಜೋಶಿ ಒಮ್ಮೆ ರೋಮ್‌ಗೆ ಹೋಗಿದ್ದರು. ಅಲ್ಲಿನ ಸಂಪಾದಕ ರೊಬ್ಬರು ಜೋಶಿಯವರನ್ನು ಭೇಟಿ ಮಾಡಿ, ಸಂದರ್ಶನ ಮಾಡಲು ಮುಂದಾದರು. ಜೋಶಿಯವರು ಜನಸಂಘದ ಪ್ರತಿನಿಧಿ ಎಂಬುದು ಸಂಪಾದಕರ ಆಸಕ್ತಿಗೆ ಕಾರಣವಾಗಿತ್ತು.

ಆರಂಭದ ಆ ಸಂಪಾದಕರು, ‘You belong to‌ Hindu militant organisation? ?’ ಎಂದು ಕೇಳಿದರು. ಆಗ ಜೋಶಿ ಯವರು, ‘”I wish, I belong to such an organisation’ ಎಂದು ಉತ್ತರಿಸಿದರು. ಅಷ್ಟಕ್ಕೇ ಸುಮ್ಮನಾಗದ ಜೋಶಿ ಯವರು, ‘ನಿಮಗೆ ನಾನು ಪ್ರತಿನಿಽಸುವ ಆರೆಸ್ಸೆಸ್ ಉಗ್ರಗಾಮಿ ಸಂಘಟನೆ ಎಂದು ಅನಿಸುವುದಾ?’ ಎಂದು ಕೇಳಿದರು. ಅದಕ್ಕೆ ಸಂಪಾದಕ ಮಹಾಶಯ ನಿರುತ್ತರರಾದರು. ‘ಆರೆಸ್ಸೆಸ್ ಅಂದ್ರೆ ಹಿಂದೂ ಉಗ್ರಗಾಮಿ ಸಂಘಟನೆ ಎಂದು ಹೇಳುವುದನ್ನು ಕೇಳಿದ್ದೇನೆ’ ಎಂದು ಹೇಳಿ ಸಂಪಾದಕರು ಜಾರಿಕೊಂಡರು. ಈ ಪ್ರಸಂಗವನ್ನು ಜೋಶಿ ಯವರು ಹಲವು ಭಾಷಣಗಳಲ್ಲಿ ಪ್ರಸ್ತಾಪಿಸಿದ್ದುಂಟು. ಅದಕ್ಕೆ ಪ್ರತಿಯಾಗಿ ಜೋಶಿಯವರು, ‘ನಾವು ನಮ್ಮ ವಿಚಾರ ವನ್ನು ಮಂಡಿಸಲು ವಿಫಲರಾಗಿದ್ದೇವೆ. ನಾವು ಉಗ್ರಗಾಮಿ (Militant)ಗಳಾಗಬೇಕಿತ್ತು.

ಆದರೆ ನಪುಂಸಕರಾಗಿದ್ದೇವೆ. ಆದರೆ ನಮ್ಮನ್ನು ಬೇರೆಯವರು ಉಗ್ರಗಾಮಿಗಳು ಎಂದು ಭಾವಿಸಿದ್ದಾರೆ. ಅವರು ಯೋಚಿಸುವುದಕ್ಕೂ, ನಾವು ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ಅವರು ಯೋಚಿಸುವಂತೆ ನಾವು ಇರಬೇಕಾಗಿದೆ’ ಎಂದು ಹೇಳಿ ಒಂದು ಕಥೆಯನ್ನು ಹೇಳುತ್ತಿದ್ದರು. ಒಮ್ಮೆ ಏಕನಾಥರ ಶಾಂತಿಯನ್ನು ಭಂಗಗೊಳಿಸಿಯೇ ತೀರುತ್ತೇನೆ ಎಂದು ಒಬ್ಬ ಅವಿವೇಕಿ ಪಣತೊಟ್ಟ. ಏಕನಾಥರು ನದಿಯಲ್ಲಿ ಸ್ನಾನ ಮಾಡಿ ಹೊರಬರುವಾಗ ಅವರಿಗೆ ಉಗಿದ. ತಾನು ಅಶುದ್ಧನಾದೆ ಎಂದು ಏಕನಾಥರು ನದಿಗೆ ಹೋಗಿ ಸ್ನಾನ ಮಾಡಿ ಬಂದರು. ಅವರು ತುಸು ದೂರ ಬಂದಿರ ಬಹುದು, ಆತ ಮತೊಮ್ಮೆ ಅವರ ಮೇಲೆ ಎಂಜಲು ಉಗಿದ.

ಏಕನಾಥರು ಪುನಃ ನದಿಗೆ ಸ್ನಾನ ಮಾಡಲು ಹೋದರು. ಸ್ನಾನ ಮಾಡಿ ಬರುತ್ತಿರುವಂತೆ ಆ ಅವಿವೇಕಿ ಮತ್ತೊಮ್ಮೆ ಎಂಜಲು ಸಿಂಪಡಿಸಿದ. ಏಕನಾಥರು ಮತ್ತೊಮ್ಮೆ ನದಿಗೆ ಹೋದರು. ಇದು ಆ ದಿನ ಸಾಯಂಕಾಲದವರೆಗೆ
ನಡೆಯಿತು. ಏಕನಾಥರು ಒಂದು ಸಲವೂ ಬೇಸರಿಸಿಕೊಳ್ಳಲಿಲ್ಲ. ಕೊನೆಗೆ ಉಗುಳುವವನೇ ಸೋತುಹೋದ. ಏಕನಾಥರ ಸನಿಹ ಬಂದು, ‘ಸ್ವಾಮಿ ಮಹಾರಾಜ್, ನಾನು ಸೋತು ಸುಣ್ಣವಾಗಿ ಹೋದೆ. ನನ್ನ ತಪ್ಪನ್ನು
ಮನ್ನಿಸಿ’ಎಂದು ಬೇಡಿಕೊಂಡ. ‘ನಿನ್ನನ್ನು ನಾನ್ಯಾಕೆ ಕ್ಷಮಿಸಲಿ? ನೀನು ನನಗೆ ಉಪಕಾರ ಮಾಡಿದ್ದೀಯ. ನಿನ್ನಿಂದಾಗಿ ನನಗೆ ಇಂದು ನೂರೆಂಟು ಸಲ ಗಂಗಾಸ್ನಾನ ಮಾಡುವ ಅವಕಾಶ ಲಭಿಸಿ ಪುಣ್ಯ ಸಿಕ್ಕಿತು.

ನಿನಗೆ ನಾನು ಉಪಕೃತನಾಗಿರಬೇಕು’ ಎಂದು ಹೇಳಿದರು. ಈ ಪ್ರಸಂಗವನ್ನು ಹೇಳಿದ ಬಳಿಕ ಜೋಶಿಯವರು ಸಭಿಕರನ್ನು ಉದ್ದೇಶಿಸಿ ಹೇಳುತ್ತಿದ್ದರು- ‘ನಮ್ಮಲ್ಲಿ ಅನೇಕರು ಏಕನಾಥರಾಗಿದ್ದೇವೆ. ನಮ್ಮನ್ನು ನೂರಾರು ಸಲ ಅವಮಾನಿಸಿದರೂ, ಮೈಕೊಡವಿಕೊಂಡು ಸುಮ್ಮನಾಗುತ್ತೇವೆ. ಅದೇ ನಮ್ಮ ಭಾಗ್ಯ ಎಂದು ಭಾವಿಸುತ್ತೇವೆ. ಏಕನಾಥರು ಸಂತರು, ಬಿಡಿ. ಅವರು ಜಗಳ ಕಾಯುವವರಲ್ಲ. ಆದರೆ ಒಬ್ಬ ಏಕನಾಥರ ಸುತ್ತ ಸಾವಿರಾರು ಲೋಕ ನಾಥ (ಜನ)ರಿದ್ದರಲ್ಲ, ಅವರೇನು ಮಾಡುತ್ತಿದ್ದರು? ಅವರಿಗೆ ಆ ದುಷ್ಟನ ಕೃತ್ಯ ನೋಡಿ ಏನೂ ಅನಿಸಲೇ ಇಲ್ಲವಾ? ಆ ಸಾವಿರಾರು ಲೋಕನಾಥರು ಈ ದೃಶ್ಯವನ್ನು ಬೆಳಗಿನಿಂದ ಸಾಯಂಕಾಲದ ತನಕ ನೋಡುತ್ತಲೇ ಕಳೆದರಲ್ಲ,

ಇದಕ್ಕೆ ಏನು ಹೇಳೋಣ? ಏಕನಾಥ ಏಳುತ್ತಾನೆ, ಮುಳುಗುತ್ತಾನೆ. ಆದರೆ ಲೋಕನಾಥರಿಗೆ ಏನಾಗಿದೆ? ಒಬ್ಬ ಏಕನಾಥ ಶಾಂತಿಯಿಂದಿರಲಿ. ಆದರೆ ನನಗೆ ಲೋಕನಾಥರ ಶಾಂತಿ ಅರ್ಥವಾಗುವುದಿಲ್ಲ. ಒಬ್ಬ ದುಷ್ಟ, ಸಂತನನ್ನು
ಅವಮಾನಿಸುತ್ತಾನೆ. ಆದರೆ ಅದನ್ನು ಇಡೀ ಸಮಾಜ ಮೂಕಪ್ರೇಕ್ಷಕನಂತೆ, ಸುಮ್ಮನೆ ನೋಡುತ್ತದೆ. ಇದು ಶಾಂತಿ ಅಲ್ಲ, ನಪುಂಸಕತ್ವ. ಏಕನಾಥರ ಬಗ್ಗೆ ಲೋಕನಾಥರು ಸುಮ್ಮನಿರಬಹುದು, ಆದರೆ ನಾನು ಜಗನ್ನಾಥ
ಸುಮ್ಮನಿರುವುದಿಲ್ಲ’.

ಇದನ್ನೂ ಓದಿ: @vishweshwarbhat