Friday, 20th December 2024

Vishweshwar Bhat Column: ಜಪಾನ್‌ ಎಂಬ ಭಿನ್ನ ಪ್ರಪಂಚ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ‌ ಭಟ್

ಪ್ರತಿ ದೇಶವೂ ಒಂದಿಂದು ಕಾರಣಗಳಿಗೆ ಗಮನ ಸೆಳೆಯುತ್ತದೆ. ಆ ದೇಶಗಳು ತಮ್ಮ ವೈಶಿಷ್ಟ್ಯಗಳಿಂದ ಪ್ರಸಿದ್ಧಿಯನ್ನು ಪಡೆಯುವುದು ಸಹಜ. ಬಹುಶಃ ಜಪಾನ್ ಅತ್ಯಂತ ವಿಲಕ್ಷಣ ದೇಶಗಳಲ್ಲಿ ಒಂದಾಗಿದೆ.

ಇದನ್ನು ವಿಶ್ವದೆಡೆ ‘ಸೂರ್ಯ ಉದಯಿಸುವ ನಾಡು’ (ಲ್ಯಾಂಡ್ ಆಫ್ ದಿ ರೈಸಿಂಗ್ ಸನ್) ಎಂದು ಕರೆಯುತ್ತಾರೆ. ಹಾಗೆಯೇ ಇದನ್ನು ‘ಹಾಡುವ‌ ಶೌಚಾಲಯಗಳ ನಾಡು’ (Land of singing toilets), ‘ನೀಲಿ ಟ್ರಾಫಿಕ್‌ಲೈಟ್‌ನ ದೇಶ’ ಅಥವಾ ‘ವೆಂಡಿಂಗ್ ಮಷೀನುಗಳ ದೇಶ’ ಎಂದೂ ಕರೆಯುವುದುಂಟು. ಜಪಾನ್ ಒಂದು ಅನನ್ಯ ದೇಶ ಎಂಬು ದರಲ್ಲಿ ಎರಡು ಮಾತಿಲ್ಲ.

ಕಾರಣ ಅದು ಪ್ರಪಂಚದ ಇತರ ದೇಶಗಳಿಗಿಂತ ಭಿನ್ನವಾಗಿದೆ. ಜಪಾನಿನ ರೈತರು ಚೌಕಾಕಾರದ ಕಲ್ಲಂಗಡಿಗಳನ್ನು ಬೆಳೆಯುತ್ತಾರೆ, ನಿಜವಾದ ಆಹಾರಕ್ಕಿಂತ ನಕಲಿ (Fake) ಆಹಾರಗಳೇ ಬಾಯಲ್ಲಿ ನೀರೂರಿಸುತ್ತವೆ, ಜಪಾನಿನಲ್ಲಿ ನಿಜವಾದ ಆಹಾರಗಳಿಗಿಂತ ಅಂಥ ನಕಲಿ ಆಹಾರಗಳೇ ಹೆಚ್ಚು ದುಬಾರಿ, ಸಣ್ಣ ಉಪಕಾರಕ್ಕೂ ನಡು ಬಗ್ಗಿಸಿ ಕೃತಜ್ಞತೆಯನ್ನು ಸೂಚಿಸುತ್ತಾರೆ, ಜನರು ಕಟ್ಟಡದ ಒಳಗೆ ಹೋಗುವ ಮೊದಲು ತಮ್ಮ ಛತ್ರಿಯನ್ನು ಪ್ರತ್ಯೇಕ ಪಾರ್ಕಿಂಗ್ ರಾಕ್‌ನಲ್ಲಿ ನಿಲ್ಲಿಸಿ ಲಾಕ್ ಮಾಡುತ್ತಾರೆ, ಸಿದ್ಧ ಆಹಾರವನ್ನು ಕ್ಯಾನ್‌ನಲ್ಲಿ ನೀಡುವ ದೇಶವ್ಯಾಪಿ
ರೆಸ್ಟೋರೆಂಟ್‌ಗಳ ಸರಪಣಿಯಿದೆ, ಯಾರೂ ಧನ್ಯವಾದಗಳನ್ನು ಕೃತಕವಾಗಿ ಹೇಳುವುದಿಲ್ಲ, ಗಲೀಜಾಗಿರುವ ಟಾಯ್ಲೆಟ್‌ಗಳನ್ನು ನೋಡಲು ಸಾಧ್ಯವಿಲ್ಲ, ರೈಲು ಹತ್ತು ನಿಮಿಷ ತಡವಾಗಿ ಆಗಮಿಸಿದರೆ ಮರುದಿನ ಮುಖಪುಟ
ಸುದ್ದಿಯಾಗುತ್ತದೆ ಮತ್ತು ರೈಲ್ವೆ ಕಂಪನಿ ಕ್ಷಮೆಯಾಚಿಸುತ್ತದೆ, ಇಲಿಗಳಿಗಾಗಿಯೇ ಒಂದು ದ್ವೀಪವನ್ನು ಮೀಸಲಿಡ ಲಾಗಿದೆ, ನೀವು ಹಾಡುವ ಹಾಡು ನಿಮಗೊಂದೇ ಕೇಳಬೇಕು ಅಂದರೆ ಸೈಲಂಟ್ ಕರೋಕೆ ಉಪಕರಣವನ್ನು ಬಳಸಿ ಹಾಡಬಹುದು, ಪುರಿಕುರ ಎಂದು ಕರೆಯುವ ಫೋಟೋ ಬೂತ್ನಲ್ಲಿ ನಮಗೆ ಬೇಕಾದ ಫೋಟೋಗಳನ್ನು ಎಡಿಟ್ ಮಾಡಿಕೊಳ್ಳಬಹುದು ಮತ್ತು ನಮ್ಮ ಫೋಟೋವನ್ನು ಕಮೋಡಿಗೆ ಅಂಟಿಸಿಕೊಳ್ಳಬಹುದು,

ವೆಂಡಿಂಗ್ ಮಷೀನುಗಳಿಂದ ನೀರು, ಪೆಪ್ಸಿ, ಸಾಫ್ಟ್ ಡ್ರಿಂಕ್ಸ್ ಮಾತ್ರವಲ್ಲ, ಮೀನು, ಏಡಿಗಳಿಂದ ಹಿಡಿದು ನಿಕ್ಕರುಗಳನ್ನೂ ಪಡೆಯಬಹುದು,‌ ಆಹಾರಗಳನ್ನು ಸೇವಿಸುವಾಗ ಮುಖ, ಮೀಸೆಗೆ ಅಂಟಿಕೊಳ್ಳುವ ಆಹಾರ
ಪದಾರ್ಥಗಳು ಕಾಣದಂತೆ ಫೇಸ್ ನ್ಯಾಪ್ಕಿನ್ ಬಳಸುತ್ತಾರೆ, ಜಪಾನಿನಲ್ಲಿ ತಯಾರಿಸಿದ ಸಾಮಾನುಗಳ ಮೇಲೆ ಬೇಕಾಬಿಟ್ಟಿ ‘ಮೇಡ್ ಇನ್ ಜಪಾನ್’ ಎಂದು ಬರೆಯುವಂತಿಲ್ಲ, ಅದಕ್ಕೂ ಅನುಮತಿ ಬೇಕು. ಏಕೆಂದರೆ ‘ಮೇಡ್
ಇನ್ ಜಪಾನ್’ ಎಂಬುದೇ ಒಂದು ಬ್ರಾಂಡ್, ನಿದ್ದೆ ಬಂದರೆ ಆಫೀಸಿನಲ್ಲಿಯೇ ಗಂಟೆಗಟ್ಟಲೆ ಮಲಗಬಹುದು ಮತ್ತು ಹೀಗೆ ಮಲಗುವವರನ್ನು ಅತ್ಯಂತ ವಿಧೇಯ ಮತ್ತು ಕಷ್ಟಪಟ್ಟು ಕೆಲಸ ಮಾಡುವ ಸಿಬ್ಬಂದಿ ಎಂದು ಪರಿಗಣಿಸ ಲಾಗುತ್ತದೆ, ಜಪಾನಿನಲ್ಲಿ ಐವತ್ತು ಮಹಡಿಗಳಿರುವ ಗಗನಚುಂಬಿ ಕಟ್ಟಡಗಳಿದ್ದರೂ ನಾಲ್ಕನೇ ಮಹಡಿ ಮಾತ್ರ ಇರುವುದಿಲ್ಲ, ಕಾರಣ ನಾಲ್ಕನೇ ಸಂಖ್ಯೆ ಅಪಶಕುನ ಎಂದು ಪರಿಗಣಿಸಿರುವುದು, ಇದೇ ಕಾರಣಕ್ಕೆ ನಾಲ್ವರು
ಒಟ್ಟುಗೂಡಿ ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗುವುದಿಲ್ಲ, ಕುದುರೆ ಮಾಂಸ, ಬೆಳ್ಳುಳ್ಳಿ, ನುಗ್ಗೆಕಾಯಿ, ಇದ್ದಿಲು, ಪಾಪಾಸುಕಳ್ಳಿ, ಜೀರಿಗೆ, ಕೊತ್ತಂಬರಿ, ಶುಂಠಿ ಮುಂತಾದ ಚಿತ್ರ ವಿಚಿತ್ರವಾದ ಸ್ವಾದ ಅಥವಾ ಫ್ಲೇವರ್ ಇರುವ ಐಸ್ ಕ್ರೀಮ್‌ಗಳು ಸಿಗುತ್ತವೆ, ಹೋಟೆಲಿನಲ್ಲಿ ರೊಬೋಟುಗಳೇ ವೇಟರುಗಳಂತೆ ಕೆಲಸ ಮಾಡುತ್ತವೆ, ಕಾಫಿಯನ್ನು ನೀವಿರುವ ಟೇಬಲ್‌ಗೆ ತಂದಿಡುತ್ತವೆ ಮತ್ತು ನಿಮ್ಮ ಲಗೇಜುಗಳನ್ನು ರೂಮಿಗೆ ತಲುಪಿಸುತ್ತವೆ, ಒಬ್ಬರೇ ಕುಳಿತು ಆಹಾರ ಸೇವಿಸಲು, ಕಾಫಿ ಕುಡಿಯಲು ಬೋರಾದರೆ ದೊಡ್ಡ ಟೆಡ್ಡಿ ಬೇರ್ ಜತೆ ಕುಳಿತು ಆಹಾರ ಸೇವಿಸಬಹುದು, ಸುರಿದು ಊಟ ಮಾಡುವುದು ಉತ್ತಮ ವರ್ತನೆಯಲ್ಲ ಎಂದು ನೀವು ಭಾವಿಸಿದರೆ ತಪ್ಪು, ಜಪಾನಿನಲ್ಲಿ ಅಡುಗೆಭಟ್ಟನಿಗೆ ಗೌರವ ಸೂಚಿಸಬೇಕು ಅಂತೆನಿಸಿದರೆ ನೂಡಲ್ ಸೇವಿಸುವಾಗ ಸುರ್ರ್ ಎಂದು ಸದ್ದು ಮಾಡಬೇಕು… ಇಂಥ ಯಾವುದೇ ಅಂಶಗಳನ್ನೂ ಬೇರೆ ದೇಶಗಳಲ್ಲಿ ನೋಡಲು ಸಾಧ್ಯವೇ ಇಲ್ಲ.

ಇವೆಲ್ಲ ಅಪ್ಪಟ ‘ಮೇಡ್ ಇನ್ ಜಪಾನ್’. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಪಾನ್ ಉಳಿದೆಲ್ಲ ದೇಶಗಳಿಗಿಂತ ಸಂಪೂರ್ಣ ಭಿನ್ನ ಮತ್ತು ಈ ವಿಷಯದಲ್ಲಿ ಜಪಾನೇ ಒಂದು ಪ್ರಪಂಚ.

ಇದನ್ನೂ ಓದಿ: @vishweshwarbhat