ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ನಮ್ಮ ದೇಶದಲ್ಲಿರಬಹುದು, ಹೊರದೇಶದಲ್ಲಿರಬಹುದು, ನಾವು ಅನ್ಯರೊಂದಿಗೆ ಊಟ-ಉಪಾಹಾರಕ್ಕೆ ಕುಳಿತುಕೊಂಡಾಗ ಟೇಬಲ್
ಮ್ಯಾನರ್ಸ್ ಬಹಳ ಮುಖ್ಯ. ಆಹಾರ ಸೇವಿಸುವಾಗ ಸಪ್ಪಳ ಮಾಡಬಾರದು, ದ್ರವ ಪದಾರ್ಥಗಳನ್ನು ಸೇವಿಸುವಾಗ ‘ಸೊರ್.. ಸೊರ್..’ ಎಂಬ ಸದ್ದು ಬಾರದಂತೆ ನಿಗಾವಹಿಸಬೇಕು. ಆಹಾರ ಸೇವಿಸುವಾಗ ಅದು ತುಟಿ, ಮುಖಗಳಿಗೆ ಅಂಟದಂತೆ ನೋಡಿಕೊಳ್ಳಬೇಕು.. ಇತ್ಯಾದಿ.
ಜಪಾನಿನಲ್ಲಿದ್ದಾಗ ಸ್ಥಳೀಯರು ಆಹಾರ ಸೇವಿಸುವ ರೀತಿ-ವಿಧಾನವನ್ನು ನಾನು ಕುತೂಹಲದಿಂದ ಗಮನಿಸುತ್ತಿದ್ದೆ. ಆದರೆ ಸೂಪ್ ಕುಡಿಯುವಾಗ ಮತ್ತು ನೂಡಲ್ಸ್ ಸೇವಿಸುವಾಗ ಅವರು ವಿಚಿತ್ರವಾಗಿ ‘ಸೊರ್..ಸೊರ್’ ಎಂದು ಸಪ್ಪಳ ಮಾಡುತ್ತಿದ್ದರು. ಈ ರೀತಿ ಒಂದಿಬ್ಬರು ಮಾಡಿದರೆ ಅದು ಅವರ ವೈಯಕ್ತಿಕ ನಡೆವಳಿಕೆ ಎಂದು ಭಾವಿಸಬಹುದಿತ್ತು. ಆದರೆ ನೂಡಲ್ಸ ಮತ್ತು ಸೂಪ್ ಸೇವಿಸುವವರೆಲ್ಲ ಹಾಗೆ ಸಪ್ಪಳ ಮಾಡುತ್ತಿದ್ದರು.
ಇದೇನು ಪಾನಿಯರಿಗೆ ಆಹಾರವನ್ನು ಶಿಸ್ತಿನಿಂದ ಸೇವಿಸಲು ಬರುವುದಿಲ್ಲವಾ ಎಂಬ ಜಿಜ್ಞಾಸೆ ನನ್ನ ಮನಸ್ಸಿನಲ್ಲಿ ಹಾದುಹೋಗಿದ್ದುಂಟು. ಇದನ್ನು ಒಂದು ರೆಸ್ಟೋರೆಂಟ್‌ನಲ್ಲಿ ಮಾತ್ರ ಗಮನಿಸಿದ್ದಲ್ಲ. ಹತ್ತಾರು ಕಡೆ ಗಮನಿಸಿದಾಗ ಸೂಪ್ ಮತ್ತು ನೂಡಲ್ಸ್ ಸೇವಿಸುವಾಗ ಆ ರೀತಿ ಸದ್ದು ಮಾಡುವುದು ತೀರಾ ಸಾಮಾನ್ಯ ಎನಿಸಿತು. ನಂತರ ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ ಅವೆರಡನ್ನೂ ಸೇವಿಸುವಾಗ ಕಡ್ಡಾಯವಾಗಿ ಸಪ್ಪಳ ಮಾಡಲೇಬೇಕಂತೆ, ಹೂಂ. ಇಲ್ಲದಿದ್ದರೆ ಅದನ್ನು ಸಿದ್ಧಪಡಿಸಿದ ಅಡುಗೆಭಟ್ಟನಿಗೆ ಅವಮಾನ ಮಾಡಿದಂತೆ. ಸಪ್ಪಳ ಮಾಡಿ ಸೇವಿಸಿದರೆ ಅದನ್ನು ತಯಾರಿಸಿದವರಿಗೆ ಗೌರವ ಸೂಚಿಸಿದಂತೆ. ಇದನ್ನು ಅವರು ನೇಕೋಜಿಟಾ (Nekojita) ಎಂದು ಕರೆಯುತ್ತಾರೆ.
ಇದನ್ನು ಇಂಗ್ಲಿಷಿನಲ್ಲಿ ಸ್ಲರ್ಪಿಂಗ್ ಅಂತಾರೆ. ಸೂಪ್ ಕುಡಿಯುವ ಸಾಮರ್ಥ್ಯ, ಜಪಾನಿನ ಆಹಾರ ಸಂಸ್ಕೃತಿಯ ಪ್ರಮುಖ ಅಂಶ. ‘ನೇಕೋಜಿಟಾ’ ಎಂಬುದು ಜಪಾನಿ ಪದವಾಗಿದ್ದು, ಹಾಗೆಂದರೆ ‘ಬೆಕ್ಕಿನ ನಾಲಿಗೆ’ ಎಂದರ್ಥ. ಸ್ಲರ್ಪಿಂಗ್ (Slurping) ಅಥವಾ ನೇಕೋಜಿಟಾ ಆಹಾರ ಸೇವನೆಯ ಅತ್ಯುತ್ತಮ ಪದ್ಧತಿ, ಕಲೆ ಎಂದು ಪರಿಗಣಿತವಾಗಿದೆ. ಅಷ್ಟೇ ಅಲ್ಲ, ಅದು ಅಲ್ಲಿನ ಶಿಷ್ಟಾಚಾರದ ಭಾಗವಾಗಿದೆ. ವಿಶೇಷವಾಗಿ ರಾಮನ್, ಸೋಬಾ ಮತ್ತು ಉಡೋನ್ ನೂಡಲ್ಸ ಸೇವಿಸುವಾಗ ಮತ್ತು ಹಸಿರು ಚಹಾ ಸೇವಿಸುವಾಗ ಸ್ಲರ್ಪ್ ಮಾಡುವುದುಂಟು. ಜಪಾನಿನ ಭೋಜನ ಸಂಸ್ಕೃತಿ ಯಲ್ಲಿ, ಆಹಾರವನ್ನು ಸದ್ದು ಮಾಡುತ್ತಾ ಸೇವಿಸುವುದು ಅದನ್ನು ತಯಾರಿಸಿದವರಿಗೆ (ಶೆ-ಗೆ) ಮತ್ತು ರುಚಿಗೆ ಗೌರವ ವ್ಯಕ್ತಪಡಿಸುವ ವಿಧಾನ ವಾಗಿ ಬೆಳೆದು ಬಂದಿದೆ. ಬೆಕ್ಕು ಮತ್ತು ನಾಯಿಗಳೂ ದ್ರವ ಆಹಾರವನ್ನು ಸಪ್ಪಳ (ಸ್ಲರ್ಪ್) ಮಾಡಿಯೇ ಸೇವಿಸುತ್ತವೆ.
ಹೀಗೆ ಸ್ಲರ್ಪ್ ಮಾಡುವುದರಿಂದ ಬಿಸಿ ಆಹಾರವು ತಕ್ಷಣ ತಣ್ಣಗಾಗುತ್ತದೆ. ಇದರಿಂದ ಆಹಾರವನ್ನು ಬೇಗನೆ ಸೇವಿಸಲು ಅಥವಾ ಕುಡಿಯಲು ಸುಲಭವಾಗುತ್ತದೆ. ಶೀತಗಾಲದಲ್ಲಿ ಬಿಸಿ ಸೂಪ್ ಮತ್ತು ನೂಡಲ್ಸ್ ಸೇವಿಸುವಾಗ, ಸ್ಲರ್ಪಿಂಗ್ ತಂತ್ರವು ಹೆಚ್ಚು ಉಪಯುಕ್ತವಾಗಿದೆ. ಸ್ಲರ್ಪ್ ಮಾಡುವಾಗ ಆಹಾರ ದೊಂದಿಗೆ ಗಾಳಿ ಮಿಶ್ರಗೊಳ್ಳುವುದರಿಂದ, ಇದು ರುಚಿಯ ವೈವಿಧ್ಯವನ್ನು ಹೆಚ್ಚಿಸುತ್ತದೆ. ಸೂಪ್ ಅಥವಾ ನೂಡಲ್ಸ ಬಾಯಿ ಸುಡುವ ಬಿಸಿಯಿದ್ದರೆ, ಅದನ್ನು ಸೇವಿಸುವಾಗ ‘ಸೊರ್.. ಸೊರ್’ ಎಂದು ಸದ್ದು ಮಾಡಿದರೆ, ಬಾಯಲ್ಲಿ ಗಾಳಿಯಾಡುವುದರಿಂದ ಅವನ್ನು ಸೇವಿಸಲು ಸುಲಭವಾಗುತ್ತದೆ.
ಇದರಿಂದ ಚಹಾ ಅಥವಾ ಸೂಪ್‌ನ ಸ್ವಾದವನ್ನು ತ್ವರಿತವಾಗಿ ಅನುಭವಿಸಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಇದು ಆಹಾರದ ತಾಜಾತನ ಮತ್ತು ರುಚಿಯ ಮಟ್ಟವನ್ನು ಬಿಂಬಿಸುತ್ತದೆ. ಜಪಾನಿಯರಿಗೆ ಚಹಾ ಸೇವನೆ ಒಂದು ಧ್ಯಾನಪೂರ್ಣ ಪ್ರಕ್ರಿಯೆಯಾಗಿದ್ದು, ಸ್ಲರ್ಪಿಂಗ್ ಕಲೆ ಶ್ರದ್ಧೆಯ ಸಂಕೇತವೂ ಆಗಿದೆ. ಕುಟುಂಬದ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಊಟ ಮಾಡುವಾಗ, ಸ್ಲರ್ಪಿಂಗ್ ಮಾಡುತ್ತಾ ಉತ್ಸಾಹ, ಸಂತಸವನ್ನು ಹೆಚ್ಚಿಸಿಕೊಳ್ಳಬಹುದು. ಜಪಾನಿನಲ್ಲಿದ್ದಾಗ ದ್ರವ ಪದಾರ್ಥಗಳನ್ನು ಸೇವಿಸುವಾಗ ‘ಸೊರ್.. ಸೊರ್’ ಎಂದು ಸದ್ದು ಮಾಡಿದರೆ ತಪ್ಪು ಭಾವಿಸ ಬಾರದು. ಅದಕ್ಕಿಂತ ಮುಖ್ಯವಾಗಿ ನೀವೂ ಹಾಗೇ ಸದ್ದು ಮಾಡುತ್ತಾ ಅವನ್ನು ಸೇವಿಸಬೇಕು. ಇಲ್ಲದಿದ್ದರೆ ಅಡುಗೆಭಟ್ಟನಿಗೆ ಅವಮಾನ ಮಾಡಿದಂತೆ.
ಇದನ್ನೂ ಓದಿ: @vishweshwarbhat