Thursday, 26th December 2024

Vishweshwar Bhat Column: ಜಪಾನಿನ ಲೈಫ್‌ ʼಲೈನ್‌ʼ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನಾನು ಜಪಾನ್‌ಗೆ ಹೋಗುವ ಮುನ್ನ, ಕೆಲವು ಸ್ನೇಹಿತರ ಜತೆ ವಾಟ್ಸಾಪ್ ಚಾಟ್ ಮಾಡಲು ಬಯಸಿದ್ದೆ. ಕೆಲವರಿಗೆ ವಾಟ್ಸಾಪ್ ಮೆಸೇಜ್ ಕಳಿಸಿ 3-4 ತಾಸುಗಳಾದರೂ ಬ್ಲೂಟಿಕ್ ಬರುತ್ತಿರಲಿಲ್ಲ. ಅಂದರೆ ಅವರು ನನ್ನ ಮೆಸೇಜನ್ನೇ ನೋಡುತ್ತಿರಲಿಲ್ಲ. ಒಬ್ಬರು, ಇಬ್ಬರಾದರೆ ಅರ್ಥಮಾಡಿಕೊಳ್ಳಬಹುದು. ಆದರೆ ನಾನು ಚಾಟ್ ಮಾಡಿದ ಐದಾರು
ಮಂದಿ ಸಹ ವಾಟ್ಸಾಪ್ ಮೆಸೇಜುಗಳನ್ನು ಕನಿಷ್ಠ ಒಂದು ಗಂಟೆಯ ಬಳಿಕ ನೋಡುತ್ತಿದ್ದರು. ಅಮೆರಿಕದಲ್ಲಿ ಇ-ಮೇಲ್ ಕಳಿಸಿದ 10 ನಿಮಿಷಗಳೊಳಗೆ ಉತ್ತರ ಬರದಿದ್ದರೆ ಚಡಪಡಿಸುತ್ತಾರೆ. ಸಾಮಾನ್ಯವಾಗಿ ಅಲ್ಲಿ ಇ-ಮೇಲ್
ಕಳಿಸಿದ ಒಂದೆರಡು ನಿಮಿಷಗಳಲ್ಲಿ ಪ್ರತಿಕ್ರಿಯೆ ಬರುತ್ತದೆ. ಉದ್ದದ ಉತ್ತರ ಬರೆಯಬೇಕಾದ ಸಂದರ್ಭದಲ್ಲಿ, ‘ನಂತರ ನಿಮಗೆ ಉತ್ತರ ಬರೆಯಲಾಗುವುದು’ ಎಂದಾದರೂ ಹೇಳುತ್ತಾರೆ.

ಒಟ್ಟಾರೆ ಬಹುಬೇಗ ಉತ್ತರ ಬರುತ್ತದೆ. ಆದರೆ ಜಪಾನಿನಲ್ಲಿರುವ ಸ್ನೇಹಿತರು ವಾಟ್ಸಾಪ್‌ಗೆ ನಿಧಾನವಾಗಿ ಉತ್ತರಿಸು ತ್ತಿದ್ದುದು ಸೋಜಿಗವನ್ನುಂಟುಮಾಡಿತ್ತು. ಈ ಕುರಿತು ಸ್ನೇಹಿತರೊಬ್ಬರನ್ನು ವಿಚಾರಿಸಿದಾಗ ಅವರು, “ಜಪಾನಿನಲ್ಲಿ ಹೆಚ್ಚಿನ ಮಂದಿ ವಾಟ್ಸಾಪ್ ಬಳಸುವುದಿಲ್ಲ. ನಾವು ಪ್ರೈಮರಿ ಕಮ್ಯುನಿಕೇಷನ್ ಪ್ಲಾಟ್ ಫಾರ್ಮ್ ಆಗಿ ‘ಲೈನ್’ (Line) ಬಳಸುತ್ತೇವೆ. ಭಾರತದಲ್ಲಿ ವಾಟ್ಸಾಪ್ ಇದ್ದ ಹಾಗೆ ಜಪಾನಿನಲ್ಲಿ ಲೈನ್” ಎಂದು ಹೇಳಿದರು.

ಅದಾಗಿ ಜಪಾನಿಗೆ ಹೋದ ಬಳಿಕ, ನಮ್ಮ ಜತೆಗಿದ್ದ ಗೈಡ್, “ನಾನು ದಿನದಲ್ಲಿ ಹೆಚ್ಚೆಂದರೆ ಮೂರ್ನಾಲ್ಕು ಸಲ ವಾಟ್ಸಾಪ್ ನೋಡಬಹುದು, ಆದರೆ ಸದಾ ‘ಲೈನ್’ ನೋಡುತ್ತಾ ಇರುತ್ತೇನೆ. ನಮ್ಮ ಪಾಲಿಗೆ ಲೈನ್ ಎಂಬುದು ಲೈಫ್ಲೈನ್” ಎಂದು ಹೇಳಿದಳು. ಭಾರತವನ್ನು ‘ವಾಟ್ಸಾಪ್ ನೇಷನ್’ ಎಂದು ಹೇಳುವುದುಂಟು. ಇಲ್ಲಿ ವಾಟ್ಸಾಪ್ ಗೊತ್ತಿಲ್ಲದವರು, ಬಳಸದವರು ಸಿಗುವುದು ಅಪರೂಪ.

ಮೊಬೈಲ್ ಇರುವವರೆಲ್ಲರೂ ವಾಟ್ಸಾಪ್ ದಾಸರೇ. ಅಂದರೆ ವಾಟ್ಸಾಪ್ ಬಳಕೆದಾರರೇ. ಅದೇ ರೀತಿ ಜಪಾನಿನಲ್ಲಿ ಎಲ್ಲರೂ ‘ಲೈನ್’ ಹೊಡೆಯುವವರೇ! 2011ರಲ್ಲಿ ತೊಹೋಕು ಭೂಕಂಪ ಮತ್ತು ಸುನಾಮಿ ರೆಸ್ಪಾನ್ಸ್ ಆಪ್ ಆಗಿ ಆರಂಭವಾದ ‘ಲೈನ್’ ಇಂದು ಇಡೀ ಜಪಾನನ್ನು ಆವರಿಸಿಬಿಟ್ಟಿದೆ. ಒಂದು ನಿಮಿಷ ‘ಲೈನ್’ ಆಫ್ ಆದರೆ ಜನಜೀವನವೇ‌ ಅಲ್ಲೋಲ ಕಲ್ಲೋಲವಾಗುತ್ತದೆ.

ಜಪಾನಿನಲ್ಲಿ 104 ದಶಲಕ್ಷ ಇಂಟರ್ನೆಟ್ ಬಳಕೆದಾರರಿದ್ದಾರೆ. ಆ ಪೈಕಿ 96 ದಶಲಕ್ಷ ಮಂದಿ ‘ಲೈನ್’ ಅನ್ನು ಬಳಸು ತ್ತಿದ್ದಾರೆ. ಲೈನ್ ಆಪ್‌ನಲ್ಲಿ ಜಾಹೀರಾತನ್ನೂ ನೀಡಬಹುದಾಗಿದೆ. ಇದನ್ನು ಮೂಲತಃ ಕೊರಿಯಾದ ನಾರ್ವೆ ಎಂಬ ಕಂಪನಿ ಅಭಿವೃದ್ಧಿಪಡಿಸಿದರೂ, ಜಪಾನಿಯರನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸ ಲಾಗಿದೆ. ಜಪಾನಿನಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದಾಗ, ಅವರಿಗೆ ತುರ್ತು ಮತ್ತು ಅಗತ್ಯ ಮಾಹಿತಿ, ಸೂಚನೆ ನೀಡಲು ಲೈನ್ ಆರಂಭವಾಯಿತು. ಮುಂದಿನ ವರ್ಷ ಈ ಆಪ್ ಅನ್ನು ಸಾರ್ವಜನಿಕ ಬಳಕೆಗೆ ಪ್ರಸ್ತುತಪಡಿಸಲಾಯಿತು. 18 ತಿಂಗಳ ಅವಧಿಯಲ್ಲಿ 90 ದಶಲಕ್ಷ ಮಂದಿ ಆ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರು. ಈಗ ಲೈನ್ ಇಲ್ಲದ ಜಪಾನನ್ನು ಊಹಿಸಿಕೊಳ್ಳುವುದೂ ಕಷ್ಟ. ವಾಟ್ಸಾಪ್ ಯಾವಯಾವ ವೈಶಿಷ್ಟ್ಯ ಮತ್ತು ಸೇವೆಗಳನ್ನು ಹೊಂದಿದೆಯೋ, ಲೈನ್ ಕೂಡ ಆ ಎಲ್ಲ ಸೇವೆಗಳನ್ನು ನೀಡುತ್ತದೆ.

ಇದರ ಜತೆಗೆ ಹಣವನ್ನೂ ಲೈನ್ ಮೂಲಕ ವರ್ಗಾಯಿಸಬಹುದು ಮತ್ತು ಸ್ವೀಕರಿಸಬಹುದು. ಶಾಪಿಂಗ್‌ಗೆ ಸಂಬಂಧಿಸಿದ ಮಾಹಿತಿ ಮತ್ತು ಕ್ಷಣಕ್ಷಣದ ಸುದ್ದಿಯನ್ನೂ ಲೈನ್ ನೀಡುತ್ತದೆ. ಲೈನ್ ಸ್ಟಿಕರ್ ಮತ್ತು ಎಮೋಜಿಗಳು ಬಹಳ ಜನಪ್ರಿಯ. ಲೈನ್ ಅಧಿಕೃತ ಖಾತೆಯು ಬ್ರ್ಯಾಂಡ್ ಗಳು ಮತ್ತು ವ್ಯವಹಾರಗಳಿಗೆ ವಿಶೇಷ ಪ್ರೊಫೈಲ್‌ಗಳನ್ನು ತೆರೆಯಲು ಮತ್ತು ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು, ಪ್ರಚಾರದ ಮಾಹಿತಿಯನ್ನು ಕಳುಹಿಸಲು ಮತ್ತು ಗ್ರಾಹಕ ವಸ್ತುಗಳ ಪ್ರಚಾರ ಮಾಡಲು ಅನುವು ಮಾಡಿಕೊಡುತ್ತದೆ.

ಯಾವುದೇ ಬಿಜಿನೆಸ್ ಆರಂಭಿಸಿದವರು ಲೈನ್‌ನಲ್ಲಿ ಉಚಿತವಾಗಿ ಅಧಿಕೃತ ಖಾತೆಯನ್ನು ತೆರೆಯಬಹುದು. ಅಪ್ಲಿಕೇಶನ್ ಬಳಕೆದಾರರು ಪೋಸ್ಟ್‌ಗಳನ್ನು ವೀಕ್ಷಿಸಬಹುದು ಮತ್ತು ಲೈನ್‌ನಲ್ಲಿ ಅವರ ಸ್ನೇಹಿತರು

ಮತ್ತು ಕುಟುಂಬ ಸದಸ್ಯರು ಅಧಿಕೃತ ಖಾತೆಗಳೊಂದಿಗೆ ಸಂವಹನ ನಡೆಸಬಹುದು. ಲೈನ್‌ನ ಟೈಮ್‌ಲೈನ್‌ನಲ್ಲಿ ವಿಷಯವನ್ನು ಹಂಚಿಕೊಳ್ಳುವ ಮೂಲಕ, ಬ್ರಾ ಂಡ್‌ಗಳು ಬಳಕೆದಾರರ ಮನಸ್ಸಿನಲ್ಲಿ ಉಳಿಯಬಹುದು
ಮತ್ತು ಇತರ ಸಾಮಾಜಿಕ ಜಾಲತಾಣಗಳ ಪ್ಲಾಟ್ ಫಾರ್ಮ್‌ಗಳಂತೆ ಅಪ್ಡೇಟ್ ಗಳನ್ನು ಒದಗಿಸಬಹುದು.

ಇದನ್ನೂ ಓದಿ: @vishweshwarbhat