Thursday, 26th December 2024

Vishweshwar Bhat Column: ಮಾತು ಕೇಳುವ ಕಮೋಡ್‌ಗಳು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಸಾಮಾನ್ಯವಾಗಿ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದಾಗ, ಕೆಲವರಿಗೆ ‘ಕಲ್ಚರಲ್ ಶಾಕ್’ ಆಗುತ್ತದೆ. ಆದರೆ ಹಲವು ಸಲ ವಿದೇಶ ಪ್ರಯಾಣ ಮಾಡಿದವರಿಗೂ ಜಪಾನ್‌ನಲ್ಲಿನ ಶೌಚಾಲಯಗಳನ್ನು ನೋಡಿದಾಗ ಅಂಥ ಅನುಭವವಾದರೆ ಆಶ್ಚರ್ಯವಿಲ್ಲ. ಕಾರಣ ಜಪಾನಿನಲ್ಲಿ ಟಾಯ್ಲೆಟ್‌ಗಳು ಮಾತಾಡುತ್ತವೆ ಅಥವಾ ನಾವು ಹೇಳಿ ದಂತೆ ಅವು ಕೇಳುತ್ತವೆ,

ಅಂದರೆ ನಮ್ಮ ಆದೇಶಗಳನ್ನು ಪಾಲಿಸುತ್ತವೆ. ಟಾಯ್ಲೆಟ್ ಪ್ರವೇಶಿಸುತ್ತಿದ್ದಂತೆ, ಮುಚ್ಚಿದ ಕಮೋಡ್‌ಗಳು ತಮ್ಮಷ್ಟಕ್ಕೆ ತೆರೆದುಕೊಳ್ಳುತ್ತವೆ. ಅಂದರೆ ಅದರ ಮುಚ್ಚಳ ಓಪನ್ ಆಗುತ್ತದೆ. ಕಮೋಡ್ ಮೇಲೆ ಕುಳಿತ ತಕ್ಷಣ ಬೆಚ್ಚಗಿನ
ಅನುಭವವಾಗುತ್ತದೆ. ಕಾರಣ ಕಮೋಡ್ ಸೀಟು ಯಾವತ್ತೂ ಬೆಚ್ಚಗಿರುತ್ತದೆ.

ಇಲ್ಲಿನ ಟಾಯ್ಲೆಟ್ ಅನ್ನು ಕೆಲವೊಮ್ಮೆ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶೌಚಾಲಯಗಳಿಗಿಂತ ಹೆಚ್ಚು ವಿಸ್ತಾರವಾಗಿ, ಸುಂದರವಾಗಿ ಮತ್ತು ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಯುರೋಪಿಯನ್ ಶೌಚಾಲಯಗಳು ಸಾಂದರ್ಭಿಕವಾಗಿ ಪ್ರತ್ಯೇಕ ಬಿಡೆ ಅಥವಾ ಬಿಡೆಟ್ (Bidet) ಅನ್ನು ಹೊಂದಿರು ತ್ತವೆ, ಆದರೆ ಜಪಾನ್‌ನ ಎಲ್ಲ ಶೌಚಾಲಯಗಳಲ್ಲಿ ಇಲೆಕ್ಟ್ರಾನಿಕ್ ಬಿಡೆಟ್ ಅನ್ನು ಸಂಯೋಜಿಸಲಾಗಿದೆ.

ಜಪಾನ್‌ನ ಶೇ.81ರಷ್ಟು ಶೌಚಾಲಯಗಳಲ್ಲಿ ಟೋಟೋ ಕಂಪನಿಯ ಇಲೆಕ್ಟ್ರಾನಿಕ್ ಕಮೋಡ್‌ಗಳನ್ನು ಅಳವಡಿಸಿ ರುವುದು ವಿಶೇಷ. ಸಾರ್ವಜನಿಕ ಶೌಚಾಲಯಗಳಲ್ಲೂ ಇಲೆಕ್ಟ್ರಾನಿಕ್ ಕಮೋಡುಗಳನ್ನು ಕಾಣಬಹುದು. ಸ್ಪ್ರೇ ಸಿಸ್ಟಮ್ ಅನ್ನು ಒಳಗೂಡಿಸಿರುವ ಈ ಟಾಯ್ಲೆಟ್ ಸೀಟುಗಳು, ಬಟನ್ ಒತ್ತಿದರೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಪೃಷ್ಠ ಭಾಗಕ್ಕೆ ನೀರನ್ನು ಸ್ಪ್ರೇ ಮಾಡುತ್ತವೆ.

ಮಲ ವಿಸರ್ಜನೆ ಮುಗಿಸಿದ ಬಳಿಕ ಕೈಯಿಂದ ತೊಳೆದುಕೊಳ್ಳುವ ಅಥವಾ ಕಾಗದ (ಟಿಶ್ಯು ಪೇಪರ್) ಬಳಸುವ ಅಗತ್ಯವಿಲ್ಲ. ನಮಗೆ ಬೇಕಾದ ಪ್ರೆಶರ್‌ಗೆ ತಕ್ಕಂತೆ ಗುದ ಅಥವಾ ಪೃಷ್ಠವನ್ನು ಕಮೋಡಿನಲ್ಲಿರುವ ಸ್ಪ್ರೇ ಸ್ವಚ್ಛ ಗೊಳಿಸುತ್ತದೆ. ನೀರಿನ ಪ್ರೆಶರ್ ಅನ್ನು ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಳ್ಳುವ ಅನುಕೂಲವೂ ಇದರಲ್ಲಿ ಇದೆ. ಮಲ ವಿಸರ್ಜಿಸುವಾಗಿನ ಶಬ್ದ ಅಕ್ಕ-ಪಕ್ಕದವರಿಗೆ ಕೇಳಬಾರದು ಎಂದಿದ್ದರೆ, ಫ್ಲಶ್ ಸಿಸ್ಟಮ್‌ಗೆ, ಮ್ಯೂಸಿಕ್ ಬಟನ್ ಸಹ ಅಳವಡಿಸಲಾಗಿದೆ.

ಜೋರಾಗಿ ಮ್ಯೂಸಿಕ್ ಹಾಕಿಕೊಂಡು ವಿಸರ್ಜಿಸಬಹುದು. ಇದು ಮುಜುಗರವಾಗಿಸುವ ಶಬ್ದವನ್ನು ನಾಲ್ಕು ಗೋಡೆಗಳ ಮಧ್ಯವೇ ಇರುವಂತೆ ಮಾಡುತ್ತದೆ. ಕಮೋಡ್ ಅನ್ನು ಅನಕ್ಷರಸ್ಥರೂ ಸುಲಭವಾಗಿ ಬಳಸಲು ಅನುವಾಗುವಂತೆ ಚಿಹ್ನೆ ಅಥವಾ ಸಂeಗಳನ್ನು ಬಳಸಲಾಗಿದೆ. ಈ ಕಮೋಡ್ ಅಥವಾ ವಾಶ್ಲೆಟ್‌ಗಳಲ್ಲಿ ಸಾಮಾನ್ಯ ವಾಗಿ ಕಂಡುಬರುವ ವೈಶಿಷ್ಟ್ಯಗಳೆಂದರೆ ಗುದದ ನೈರ್ಮಲ್ಯ, ಪೃಷ್ಠ ಭಾಗಕ್ಕೆ ನೀರು ಸ್ಪ್ರೇ ಆಗುವುದು, ಸೀಟ್ ವಾರ್ಮಿಂಗ್ ಮತ್ತು ಡಿಯೋಡರೈಸೇಶನ್. ‌

ಕೆಲವೆಡೆ ವಾಯ್ಸ್ ಕಮಾಂಡ್‌ಗಳ ಮೂಲಕ ಟಾಯ್ಲೆಟ್ ಅನ್ನು ಆಪರೇಟ್ ಮಾಡಬಹುದು. ಅಲ್ಲಿನ ಶೌಚಾಲಯ ಗಳು ಪರಿಸರ-ಸ್ನೇಹಿ. ಏಕೆ ಎಂದು ಆಶ್ಚರ್ಯ ಪಡುತ್ತೀರಾ? ಏಕೆಂದರೆ ಅವು ಕಡಿಮೆ ಟಾಯ್ಲೆಟ್ ಪೇಪರ್ ಮತ್ತು ಕಡಿಮೆ ನೀರನ್ನು ಬಳಸಲು ಅವಕಾಶ ಮಾಡಿಕೊಡುತ್ತವೆ. ನಾವು ಬಳಸುವ ಟಿಶ್ಯು ಪೇಪರಿನ ಪ್ರತಿ ರೋಲ್ ಎಷ್ಟು ಮರಗಳನ್ನು ಬಳಸುತ್ತದೆ ಎಂಬುದರ ಕುರಿತು ನಾವ್ಯಾರೂ ಹೆಚ್ಚು ಯೋಚಿಸಿರಲಿಕ್ಕಿಲ್ಲ.

ಆದರೆ ೧೦೦ ಪೌಂಡ್‌ಗಳಷ್ಟು ಟಾಯ್ಲೆಟ್ ಪೇಪರ್ ಅನ್ನು ಉತ್ಪಾದಿಸಲು ಒಂದು ಮರ ಬೇಕು ಮತ್ತು ಪ್ರತಿದಿನ ೮೩ ದಶಲಕ್ಷ ರೋಲ್‌ಗಳ ಕಾಗದವನ್ನು ಉತ್ಪಾದಿಸಲಾಗುತ್ತದೆ. ಟಾಯ್ಲೆಟ್ ಪೇಪರ್‌ಗೆ ಜಾಗತಿಕ ಬೇಡಿಕೆ ಅದೆಷ್ಟಿದೆ ಯೆಂದರೆ, ಪ್ರತಿದಿನ 27 ಸಾವಿರ ಮರಗಳನ್ನು ಕಡಿಯಲಾಗುತ್ತದೆ. ಜಪಾನಿ ಶೌಚಾಲಯಗಳು ಅತ್ಯುತ್ತಮವಾಗಿ ಆಹ್ಲಾದಕರ ಮತ್ತು ಸ್ಥಾಪಿಸಲು ಸುಲಭವಾಗುವುದರ ಜತೆಗೆ, ವೈದ್ಯಕೀಯ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ಗಮನಾರ್ಹ.

ಇದರಿಂದ ಅಲ್ಲಿನ ಶೌಚಾಲಯಗಳು ಸಂಪೂರ್ಣ ಸ್ವಚ್ಛತೆ ಕಾಪಾಡಲು ಯಶಸ್ವಿಯಾಗಿವೆ. ಉದ್ಯಾನಗಳು, ನಿಲ್ದಾಣ ಗಳು, ಡಿಪಾರ್ಟ್ಮೆಂಟ್ ಸ್ಟೋರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಶೌಚಾಲಯ ಗಳನ್ನು ಕಾಣಬಹುದು. ಅವನ್ನು ಹುಡುಕಲು ನಿಮಗೆ ಕಷ್ಟವಾಗುವುದಿಲ್ಲ. ಜಪಾನಿನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಬಳಸಿದರೆ ಹಣ ಕೊಡಬೇಕಿಲ್ಲ.

ಇದನ್ನೂ ಓದಿ: @vishweshwarbhat