Wednesday, 8th January 2025

‌Vishweshwar Bhat Column: ಜಪಾನಿನ ಮೇಡ್‌ ಕೆಫೆ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನಿನಲ್ಲಿ ಒಂದು ವಿಭಿನ್ನ ಮಾದರಿಯ ಕೆಫೆ ಇದೆ. ಮೊದಲ ಬಾರಿಗೆ ಹೋದವರಿಗೆ ಇದು ಅಚ್ಚರಿಯ ಅನುಭವವನ್ನು ನೀಡುವುದರಲ್ಲಿ
ಯಾವ ಸಂದೇಹವೂ ಇಲ್ಲ. ಕಾರಣ ಅಂಥ ಕೆಫೆಯನ್ನು ಬೇರೆಲ್ಲೂ ನೋಡಿರಲೂ ಸಾಧ್ಯವಿಲ್ಲ. ಅದನ್ನು ಮೇಡ್ ಕೆಫೆ (Maid Cafe) ಅಂತಾರೆ. ಎಲ್ಲಾ ಅದು ಅತಿಥಿ ಸತ್ಕಾರದ ಒಂದು ವಿಭಿನ್ನ ರೀತಿಯ ಕೆಫೆ. ಇದು ಜಪಾನಿನ ಪಾಪ್ ಸಂಸ್ಕೃತಿಯ ಭಾಗವೂ ಹೌದು. ಇದನ್ನು ಮೊದಲ ಬಾರಿ 2000ರ ದಶಕದ ಆರಂಭದಲ್ಲಿ ಟೋಕಿಯೋ ನಗರದ ಅಕಿಹಾಬಾರಾ ಪ್ರದೇಶದಲ್ಲಿ ಆರಂಭಿಸಲಾಯಿತು. ಈ ಕೆಫೆಗಳಲ್ಲಿ ಸಿಬ್ಬಂದಿ (ಸರ್ವೀಸ್ ಸ್ಟಾಫ್) ಮೇಡ್ (ಮನೆ ಕೆಲಸಗಾರ್ತಿ) ಉಡುಪುಗಳನ್ನು ಧರಿಸಿರುತ್ತಾರೆ ಮತ್ತು ಅತಿಥಿಗಳಿಗೆ ಗೌರವಪೂರ್ಣ ಹಾಗೂ ಸ್ನೇಹಪೂರ್ಣ ಸೇವೆಯನ್ನು ನೀಡುತ್ತಾರೆ.

ಅಲ್ಲಿ ಗ್ರಾಹಕರಿಗೆ feel at home ಭಾವನೆ ಬರುವಂತೆ ನೋಡಿಕೊಳ್ಳಲಾಗುತ್ತದೆ. ಮೇಡ್ ಕೆಫೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಿಳಿ ಏಪ್ರನ್ ಮತ್ತು ಕಪ್ಪು ಅಥವಾ ಬಿಳಿ ಬಣ್ಣದ ಡ್ರೆಸ್ ಧರಿಸಿರುತ್ತಾರೆ. ಇವರ ವೇಷಭೂಷಣವು ಪಶ್ಚಿಮದ ವಿಕ್ಟೋರಿಯನ್ ಶೈಲಿಯ ಮೇಡ್ ವಸ್ತ್ರಧಾರಣೆ ಯನ್ನು ಪ್ರತಿ ಬಿಂಬಿಸುತ್ತದೆ. ಇದರಿಂದ ಕೆಫೆಗೆ ಬರುವ ಗ್ರಾಹಕರಿಗೆ ಬೇರೆ ಲೋಕದಲ್ಲಿರುವ ಭಾವನೆ ಮೂಡುತ್ತದೆ. ಅಲ್ಲಿನ ಕೆಲಸಗಾರರು ಅನಿಮೆ ಅಥವಾ ಪಾಶ್ಚಿಮಾತ್ಯ ಪುರಾತನ ಸೇವಕಿಯ ಉಡುಪು ಧರಿಸುತ್ತಾರೆ. ಇವರ ಉಡುಪುಗಳು ವಿಶಿಷ್ಟವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಅದರಿಂದಲೇ ಅವರು ಗ್ರಾಹಕರನ್ನು ಸೆಳೆಯುತ್ತಾರೆ. ಅಲ್ಲಿಗೆ ಆಗಮಿಸುವ ಅತಿಥಿಗಳನ್ನು ಸನ್ಮಾನ ಭಾವದಲ್ಲಿ ಮತ್ತು ಸ್ನೇಹಪೂರ್ಣವಾಗಿ ಬರಮಾಡಿಕೊಳ್ಳುತ್ತಾರೆ. ‘ಮಾಸ್ಟರ್’ (Master) ಅಥವಾ ‘ಮಿಸ್ಟ್ರೆಸ್’ (Mistress) ಎಂದು ಸಂಬೋಧಿಸಿ ಅತಿಗಳನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಅಲ್ಲಿನ ಆಹಾರ, ಕಾಫಿ ಅಥವಾ ಡೆಸರ್ಟ್ ಅನ್ನು ವಿಶೇಷವಾಗಿ ಅಲಂಕರಿಸಿರುತ್ತಾರೆ.

ಅವುಗಳ ಮೇಲೆ ನಿಮಗಿಷ್ಟವಾದ ಪಾತ್ರಧಾರಿಗಳ ಚಿತ್ರಗಳನ್ನು ರಚಿಸಿರುತ್ತಾರೆ. ಅಲ್ಲಿ ನೀಡುವ ಆಹಾರಗಳಿಗೆ ವಿಶೇಷವಾಗಿ ಪ್ಲೇಟಿಂಗ್ ಮಾಡಲಾಗಿರುತ್ತದೆ. ಉದಾಹಣೆಗೆ, ಐಸ್ ಕ್ರೀಮ್ ಅಥವಾ ಆಮ್ಲೆಟ್ ಮೇಲೆ ಚಾಕೊಲೇಟ್ ಸಾಸ್ ಬಳಸಿ ಹೃದಯ (Heart)ದ ಆಕೃತಿಯನ್ನು ಬಿಡಿಸಿರುತ್ತಾರೆ. ಇವು ಗ್ರಾಹಕರಿಗೆ ದೃಷ್ಟಿಕೂಟ ಮತ್ತು ಸ್ವಾದ ಎರಡನ್ನೂ ಒದಗಿಸುತ್ತವೆ. ಕೆಲವೊಂದು ಮೇಡ್ ಕೆಫೆಗಳಲ್ಲಿ ಗೇಮ್ಸ, ಸಿಂಗಿಂಗ್, ಡಾ ಪ್ರದರ್ಶನ, ಫೋಟೋಶೂಟ್ ಗಳನ್ನು ಆಯೋಜಿಸಿರುತ್ತಾರೆ. ಕೆಲ ಕೆಫೆಗಳಲ್ಲಿ ಮೇಡ್‌ಗಳು ಕೋರಿಕೆಯ ಮೇರೆಗೆ ಗ್ರಾಹಕರ ಜತೆಗೆ ಬೋರ್ಡ್ ಗೇಮ್ಸ ಅನ್ನು ಸಹ ಆಡುತ್ತಾರೆ.

ಮೇಡ್ ಕೆಫೆ ಜಪಾನಿನ ಓಟಾಕು (Otaku) ಸಂಸ್ಕೃತಿಯ ಪ್ರಮುಖ ಭಾಗ. ಅನಿಮೆ, ಮಂಗಾ ಮತ್ತು ಗೇಮಿಂಗ್ ಅಭಿಮಾನಿಗಳು ಈ ಸ್ಥಳಗಳಿಗೆ
ಬರುವುದನ್ನು ಬಹಳ ಇಷ್ಟಪಡುತ್ತಾರೆ. ಮೇಡ್ ಕೆಫೆಗಳಿಗೆ ಬರುವ ಅತಿಥಿಯ ಮನಸ್ಸಿನಲ್ಲಿ ತಾನು ವಿಶೇಷ ವ್ಯಕ್ತಿಯೆಂಬ ಅನುಭವ ಮೂಡಿಸು ವುದು ಅಲ್ಲಿನ ವೈಶಿಷ್ಟ್ಯ. ಅಲ್ಲಿನ ಸೇವೆಯ ಪ್ರತಿಯೊಂದು ಭಾಗವೂ ಮನಸ್ಸಿಗೆ ತೃಪ್ತಿ ನೀಡುವಂತೆ ವಿನ್ಯಾಸಗೊಳಿಸಿರುತ್ತಾರೆ. ಇದು ಕೇವಲ ಆಹಾರ ಸೇವಿಸುವ ಸ್ಥಳವಷ್ಟೇ ಅಲ್ಲ, ಅಲ್ಲಿನ ಜನರ ನಡೆವಳಿಕೆ ಮತ್ತು ಪರಿಸರ ವಿಶೇಷ ಅನುಭೂತಿಯನ್ನುಂಟು ಮಾಡುತ್ತವೆ. ಅಕಿಹಾಬಾರಾ (Akihabara), ಟೋಕಿಯೋ ನಗರದ ದುಬಾರಿ ಪ್ರದೇಶ, ಮೇಡ್ ಕೆಫೆಗಳ ಕೇಂದ್ರ. ಪ್ರವಾಸಿಗರು ಮತ್ತು ಸ್ಥಳೀಯರು ಈ ಸ್ಥಳಕ್ಕೆ ಬಂದು ಜಪಾನಿನ ವಿಶಿಷ್ಟ ಮತ್ತು ಸೃಜನಶೀಲ ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸುತ್ತಾರೆ.

ಮೇಡ್ ಕೆಫೆಯು ಅನಿಮೇಷನ್ ಮತ್ತು ಫ್ಯಾಂಟಸಿ ಜಗತ್ತನ್ನು ಅನಾವರಣಗೊಳಿಸುವ ಸಂಸ್ಕೃತಿಯ ಒಂದು ಭಾಗವೂ ಹೌದು. ಈ ಕೆಫೆಗಳಲ್ಲಿ ಸೇವಕಿಯರೊಂದಿಗೆ ಗ್ರಾಹಕರು ಚರ್ಚಿಸಬಹುದು. ಇದು ಸಾಮಾಜಿಕ ಪರಸ್ಪರ ಸಂಬಂಧಗಳಿಗಾಗಿ ಒಂದು ವೇದಿಕೆಯೂ ಆಗಬಲ್ಲದು.
ಹಲವರು ತಮ್ಮ ಪ್ರತಿದಿನದ ಜೀವನದಿಂದ ಸ್ವಲ್ಪ ವಿರಾಮ ಪಡೆದು ನಿರಾಳತೆಅನುಭವಿಸಲು ಇಲ್ಲಿ ಬರುವುದು ಸಾಮಾನ್ಯ.

ಇದನ್ನೂ ಓದಿ: @vishweshwarbhat

Leave a Reply

Your email address will not be published. Required fields are marked *