ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನಿನಲ್ಲಿ ‘ಮಮಚಾರಿ’ ಪದವನ್ನು ಕೇಳದವರು ಯಾರೂ ಇರಲಿಕ್ಕಿಲ್ಲ. ಹಾಗಾದರೆ ಮಮಚಾರಿ ರಾಮಾಚಾರಿಗೆ ಏನಾಗಬೇಕು ಅಥವಾ ಇಬ್ಬರಿಗೂ ಏನಾದರೂ ಸಂಬಂಧ ಇದೆಯಾ ಎಂದು ಕೇಳಬೇಡಿ. ಅದು ಅತ್ಯಂತ ಸಾಮಾನ್ಯ ವಾದ ಮತ್ತು ಜನಪ್ರಿಯವಾದ, ಶ್ರೀಸಾಮಾನ್ಯರ ದಿನನಿತ್ಯದ ಸಾರಿಗೆ ಸಾಧನವಾದ ಸೈಕಲ್. ಹ್ಯಾಂಡಲ್‌ಗೆ ಬಾಸ್ಕೆಟ್ ಮತ್ತು ಬೆಲ್ ಇರುವ, ಸಾಮಾನ್ಯವಾಗಿ ಒಂದೇ ಗೇರ್ ಹೊಂದಿರುವ ಸರಳವಾದ ಸೈಕಲ್‌ಗೆ ಅಲ್ಲಿ ಮಮಚಾರಿ ಅಂತ ಕರೆಯುತ್ತಾರೆ. ಎರಡನೇ ಮಹಾಯುದ್ಧದ ನಂತರ ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಗೆ, ದಿನಸಿ ಸಾಮಾನು ಗಳನ್ನು ತರಲು ಮತ್ತು ಮಕ್ಕಳನ್ನು ಸ್ಕೂಲಿಗೆ ಬಿಡಲು ಅಥವಾ ಸುತ್ತಾಡಿಸಲು ಕಾರ್ಯನಿರತ ತಾಯಂದಿರಿಗೆ ಅನುಕೂಲವಾಗಲಿ ಎಂದು ಈ ಬೈಸಿಕಲ್ ಅನ್ನು ತಯಾರಿಸಲಾಯಿತು.
ತಗ್ಗಿದ ಹ್ಯಾಂಡಲ್ ಹಾಗೂ ಸಂತುಲಿತ ಕೇಂದ್ರ ಗುರುತ್ವಾಕರ್ಷಣೆಯು ಇದನ್ನು ಸುರಕ್ಷಿತ ಮತ್ತು ಸ್ಥಿರ ಸವಾರಿಗೆ ಹೇಳಿ ಮಾಡಿಸಿದ ಬೈಸಿಕಲ್ ಆಗಿಸಿದೆ. ಇದು ಕೇವಲ ಹತ್ತು ಸಾವಿರ ಯೆನ್‌ಗೆ ಲಭ್ಯವಿರುವುದರಿಂದ ಇದನ್ನು ಯಾರು ಬೇಕಾದರೂ ಹೊಂದಬಹುದಾಗಿದೆ. ಹಳೆ ಛತ್ರಿಯಂತೆ ಯಾರಾದರೂ ಇದನ್ನು ಎದರೂ ಬಿಟ್ಟು ಹೋದರೂ ತಲೆಕೆ ಡಿಸಿಕೊಳ್ಳುವುದಿಲ್ಲ. ಮಮಚಾರಿ ಎಂಬ ಹೆಸರು ಜಪಾನಿ ಭಾಷೆಯ ‘ಮಮಾ’ (ತಾಯಿ) ಮತ್ತು ‘ಚಾರಿ’ (ಸೈಕಲ) ಪದಗಳಿಂದ ಬಂದಿದೆ.
ಇದನ್ನು ಸರಳವಾಗಿ ‘ತಾಯಿಯಂದಿರ ಸೈಕಲ್’ ಎಂದು ಹೇಳಬಹುದು. ಈ ಬೈಸಿಕಲ್‌ಗಳನ್ನು ವಿಶೇಷವಾಗಿ ಗೃಹಿಣಿ ಯರು ಮತ್ತು ತಾಯಿಯರು ತಮ್ಮ ದೈನಂದಿನ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ವಿನ್ಯಾಸಗೊಳಿಸ ಲಾಗಿದೆ. ಮಮಚಾರಿ ಸೈಕಲ್‌ಗಳು ಮುಂಭಾಗದಲ್ಲಿ ಸಾಮಾನ್ಯವಾಗಿ ಲೋಹದ ಅಥವಾ ಪ್ಲಾಸ್ಟಿಕ್‌ನ ಬಾಸ್ಕೆಟ್ ಹೊಂದಿರು ತ್ತವೆ. ಈ ಬಾಸ್ಕೆಟ್ ದಿನನಿತ್ಯದ ಖರೀದಿ ಸಾಮಾನುಗಳು, ಪುಸ್ತಕಗಳು, ಸಣ್ಣ ಪುಟ್ಟ ವಸ್ತುಗಳನ್ನು ಸಾಗಿಸಲು ಸಹಾಯಕವಾಗಿದೆ. ಮಮಚಾರಿ ಬೈಸಿಕಲ್‌ಗಳು ಸಹಜ ಸೌಕರ್ಯದ ಜತೆಗೆ ಉತ್ತಮ ಸೀಟ್ ವ್ಯವಸ್ಥೆಯನ್ನು ಹೊಂದಿವೆ.
ಮಗುವನ್ನು ಕುಳ್ಳಿರಿಸಲು ಅಥವಾ ಎರಡನೇ ಪ್ರಯಾಣಿಕ ಹಿಂಬದಿಯಲ್ಲಿ ಕುಳಿತುಕೊಳ್ಳಲು ಆಸನವನ್ನು ಕಲ್ಪಿಸ ಲಾಗಿದೆ. ಹೆಚ್ಚಿನ ಮಮಚಾರಿ ಬೈಸಿಕಲ್‌ಗಳಲ್ಲಿ ಗೇರ್ ಸಿಸ್ಟಮ್ ಇರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಗೇರ್ ಆವೃತ್ತಿಗಳ ಬೈಸಿಕಲ್‌ಗಳು ಜನಪ್ರಿಯವಾಗಿವೆ. ಗೇರ್ ಇಲ್ಲದ ಕಾರಣದಿಂದ ಬೈಸಿಕಲ್ ಬಳಸುವವರು ಹೆಚ್ಚಿನ ನಿರ್ವಹಣೆಯ ಅಗತ್ಯವಿಲ್ಲದೇ ಸುಲಭವಾಗಿ ಚಲಿಸಬಹುದು. ದೊಡ್ಡ, ಬಲವಾದ ಚಕ್ರಗಳು ಮತ್ತು ನಿಲ್ಲಿಸಲು ಸರಳ
ಲಾಕ್ ವ್ಯವಸ್ಥೆಯು ಮಮಚಾರಿ ಬೈಸಿಕಲ್‌ಗಳ ವಿಶೇಷ ಅಂಶವಾಗಿವೆ.
ಇವು ಹಳೆಯ ರಸ್ತೆಗಳಲ್ಲಿಯೂ ಬಳಸಲು ಅನುಕೂಲಕರ. ಬೈಸಿಕಲ್‌ಗಳು ಸಾಮಾನ್ಯವಾಗಿ ಡೈನಾಮೋ ಲೈಟ್ ಅಥವಾ ಬ್ಯಾಟರಿ ಚಾಲಿತ ಬೆಳಕನ್ನು ಹೊಂದಿರುತ್ತವೆ. ಇದು ರಾತ್ರಿ ಪ್ರಯಾಣದ ವೇಳೆ ಸುರಕ್ಷಿತ. ತಾಯಿಯರು ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಈ ಬೈಸಿಕಲ್ ಅನ್ನು ಹೆಚ್ಚು ಬಳಸುತ್ತಾರೆ. ಹಿಂದೆ ಮತ್ತು ಮುಂದೆ ಮಕ್ಕಳನ್ನು ಸುರಕ್ಷಿತವಾಗಿ ಕುಳ್ಳಿರಿಸಿಕೊಂಡು ಹೋಗಬಹುದು. ಮೂರ್ನಾಲ್ಕು ಕಿ.ಮೀ. ದೂರ ಹೋಗಲು, ಆಫೀಸಿಗೆ ಹೋಗಲು ಮಮಚಾರಿ ಹೇಳಿಮಾಡಿಸಿದಂತಿದೆ. ಇದು ದುಬಾರಿ ಸಾರಿಗೆಗೆ ಪರ್ಯಾಯವಾಗಿದೆ. ಮಮಚಾರಿ ಬೈಸಿಕಲ್
ಪರಿಸರ ಸ್ನೇಹಿ. ಇದರಿಂದ ಮಾಲಿನ್ಯವಿಲ್ಲ. ಇಂಧನ ಬೇಕಿಲ್ಲ. ಇದು ದೇಹಾರೋಗ್ಯಕ್ಕೂ ಅನುಕೂಲ. ಇವುಗಳ ಬಳಕೆಯೂ ಮಿತವ್ಯಯಕಾರಿ. ನಿರ್ವಹಣಾ ವೆಚ್ಚ ಇಲ್ಲ.
ಜಪಾನಿನಲ್ಲಿ ಪ್ರಾರಂಭವಾದ ಮಮಚಾರಿ ಈಗ ಜಗತ್ತಿನ ಅನೇಕ ಭಾಗಗಳಿಗೆ ವ್ಯಾಪಿಸಿದೆ. ತಂತ್ರಜ್ಞಾನವು ಬೆಳೆಯುವ ಜತೆಗೆ, ಮಮಚಾರಿ ಬೈಸಿಕಲ್‌ಗಳಲ್ಲಿಯೂ ಪರಿವರ್ತನೆ ಸಂಭವಿಸುತ್ತಿದೆ. ಈಗಾಗಲೇ ಇಲೆಕ್ಟ್ರಿಕ್ ಮಮಚಾರಿ ಬೈಸಿಕಲ್‌ಗಳು ಲಭ್ಯವಿದ್ದು, ಅವು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿವೆ. ನಿರ್ಗಮಿಸುತ್ತಿರುವ ಇಂಧನ ವಾಹನ ಗಳಿಗೆ ಪರ್ಯಾಯವಾಗಿ ಈ ಬೈಸಿಕಲ್‌ಗಳು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಈ ಬೈಸಿಕಲ್‌ಗಳು ಜಪಾನಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೆ ಸರಳ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ಗಮನಾರ್ಹ.
ಇದನ್ನೂ ಓದಿ: @vishweshwarbhat