Monday, 13th January 2025

Vishweshwar Bhat Column: ದೈಹಿಕ ನ್ಯೂನತೆ ಮೀರಿದವರು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಸಾಮಾನ್ಯ ವ್ಯಕ್ತಿಗಳಿಗೆ ಮಹಾನ್ ಕ್ರೀಡಾಪಟುಗಳ ನೋವಿನ ಮಿತಿಯನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಕಾಲಕಾಲಕ್ಕೆ, ಕ್ರಿಕೆಟಿಗರು ಗಂಭೀರ ಗಾಯ, ಅನಾರೋಗ್ಯ ಮತ್ತು ಇತರ ದೈಹಿಕ ನ್ಯೂನತೆಗಳ ವಿರುದ್ಧ ಹೋರಾಡಿ ವಿಜಯಶಾಲಿಯಾಗಿ ಹೊರಹೊಮ್ಮುವುದು ಹೆಚ್ಚಿನವರ ಗಮನಕ್ಕೆ ಬರುವುದಿಲ್ಲ.

ಕ್ರೀಡೆಯಲ್ಲಿ ಸಾಧನೆಗಿಂತ ಶಾರೀರಿಕ ಅಸ್ವಾಸ್ಥ್ಯ ಮೀರಿ ಭಾಗವಹಿಸುವುದೇ ಒಂದು ದೊಡ್ಡ ಸಾಧನೆ. ಮನ್ಸೂರ್ ಅಲಿಖಾನ್ ಪಟೌಡಿ ಟೆಸ್ಟ್ ಕ್ರಿಕೆಟ್ ಆಡುವ ಮುನ್ನವೇ 1961ರಲ್ಲಿ ಕಾರು ಅಪಘಾತದಲ್ಲಿ ಬಲಗಣ್ಣನ್ನು ಕಳೆದು ಕೊಂಡರು. ಆ ಸ್ಥಿತಿಯಲ್ಲಿ ಅವರು ಆಡುವುದು ಸಾಧ್ಯವೇ ಇರಲಿಲ್ಲ. ಒಂದು ಕ್ಷಣ ನಿಮ್ಮ ಒಂದು ಕಣ್ಣನ್ನು ಮುಚ್ಚಿ ಎದುರಿಗೆ ವೇಗದ ಬೌಲರ್ ಎಸೆಯುವ ಬಾಲ್ ನಿಮ್ಮತ್ತ ಧಾವಿಸಿ ಬರುವುದನ್ನು ಕಲ್ಪಿಸಿಕೊಳ್ಳಿ. ನಿಮ್ಮ ಜಂಘಾಬಲವೇ ಉಡುಗಿ ಹೋಗುತ್ತದೆ.

ಪಟೌಡಿಯನ್ನು ‘ಗಾಜಿನ ಕಣ್ಣಿನಲ್ಲಿ ಕ್ರಿಕೆಟ್ ಆಡುವ ದಿಟ್ಟ ನಿರ್ಧಾರವನ್ನು ಏಕೆ ತೆಗೆದುಕೊಂಡಿರಿ?’ ಎಂದು ‘ಗಬ್ಬಿ’ ಅಲೆನ್ ಕೇಳಿದಾಗ, ‘ನಾನು ಇಂಗ್ಲಿಷ್ ದಾಳಿಯನ್ನು ನೋಡಿದಾಗ’ ಎಂದು ಪ್ರತಿಕ್ರಿಯಿಸಿದ್ದರು. ಪಟೌಡಿ 46 ಟೆಸ್ಟ್ ಪಂದ್ಯಗಳಲ್ಲಿ, 35 ರನ್ ಸರಾಸರಿಯಲ್ಲಿ 2793 ರನ್ ಗಳಿಸಿದರು. ಟೆಸ್ಟ್ ಪಂದ್ಯಗಳಲ್ಲಿ 6 ಶತಕ, 16 ಅರ್ಧಶತಕ ಗಳಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 33 ಶತಕ ಮತ್ತು 75 ಅರ್ಧಶತಕ ಬಾರಿಸಿದರು. ಟೆಸ್ಟ್ ಪಂದ್ಯದಲ್ಲಿ ಔಟಾಗದೇ ಹೊಡೆದ 203 ರನ್ ಅವರ ಗರಿಷ್ಠ ಮೊತ್ತ. 1967-68ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಪಟೌಡಿಯವರ ಸಾಧನೆಯನ್ನು ಆ ದೇಶದ ಪ್ರಧಾನಿ ರಾಬರ್ಟ್ ಮೆಂಜಿಸ್ ಪ್ರಶಂಸಿಸಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಮಂಡಿನೋವಿನಿಂದ ಆಡುವುದು ಸಾಧ್ಯವಿಲ್ಲ ಎಂದು ಪಟೌಡಿ ಪೆವಿಲಿಯನ್‌ನಲ್ಲಿ ಕುಳಿತಿದ್ದರು. ಆದರೆ ಭಾರತ 25 ರನ್‌ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ, ಮಂಡಿ ನೋವನ್ನು ಲೆಕ್ಕಿಸದೇ ಮೈದಾನಕ್ಕೆ ಇಳಿದರು. ಮತ್ತೊಬ್ಬ ಆಟಗಾರ ರುಸಿ ಸ್ಪೂರ್ತಿ ಕೂಡ ಗಾಯಗೊಂಡಿದ್ದರು. ಆ
ಪಂದ್ಯದಲ್ಲಿ ಪಟೌಡಿ ಅಕ್ಷರಶಃ ಒಂದೇ ಕಾಲಿನಲ್ಲಿ ನಿಂತು ಆಡಿದ್ದನ್ನು ಯಾರೂ ಮರೆಯುವುದಿಲ್ಲ. ಆ ಪಂದ್ಯದಲ್ಲಿ ಅವರು 75 ರನ್ ಹೊಡೆದರು.

‘ಪಟೌಡಿಗೆ 2 ಕಣ್ಣು ಮತ್ತು 2 ಕಾಲುಗಳು ಸರಿಯಾಗಿ ಇದ್ದಿದ್ದರೆ ಹೇಗಿರುತ್ತಿತ್ತು ಎಂಬುದನ್ನು ಊಹಿಸುವುದೂ ಕಷ್ಟ’ ಎಂದು ಪಂದ್ಯ ಮುಗಿದ ಬಳಿಕ ಪ್ರಧಾನಿ ರಾಬರ್ಟ್ ಮೆಂಜಿಸ್ ಹೇಳಿದ್ದರು. ತಮ್ಮ 21ನೇ ವಯಸ್ಸಿನಲ್ಲಿ ಭಾರತ ತಂಡದ ನಾಯಕನಾದ ಪಟೌಡಿ, ಆ ಕಾಲದ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದರು. ಇಂದಿಗೂ ಖ್ಯಾತ ನೇತ್ರತಜ್ಞರು ಪಟೌಡಿ ಅವರ ಆ ಸಾಧನೆ ನೋಡಿ ಬೆರಗಾಗುತ್ತಾರೆ. ಭಾಗವತ್ ಸುಬ್ರಮಣ್ಯ ಚಂದ್ರಶೇಖರ್ ಅವರು 6ನೇ ವಯಸ್ಸಿ ನಲ್ಲಿ ಪೋಲಿಯೋಗೆ ತುತ್ತಾದರು. ಇದರಿಂದ ಅವರು ಬಲಗೈಯನ್ನು ಸರಾಗವಾಗಿ ಬಳಸುವಂತಿರಲಿಲ್ಲ. ಹತ್ತನೇ ವಯಸ್ಸಾಗುವ ಹೊತ್ತಿಗೆ ಕ್ರಿಕೆಟ್ ಆಡುವಷ್ಟು ಶಕ್ತರಾದರು.

ಅವರ ನೀಳವಾದ ಬಲಗೈ ಸ್ಪಿನ್ ಬೌಲಿಂಗ್‌ಗೆ ಸಹಾಯಕವಾಯಿತು. ಅವರು ಸ್ಪಿನ್ ಬೌಲಿಂಗ್‌ಗೆ ವೇಗವನ್ನು ತುಂಬಲು ಯಶಸ್ವಿಯಾಗಿದ್ದರು. ಬ್ಯಾಟ್ಸ್‌ಮನ್‌ಗಳು ಅವರ ವೇಗದ ಬೌಲಿಂಗ್‌ನಿಂದ ಹೆಚ್ಚಾಗಿ ಮೋಸ ಹೋಗು ತ್ತಿದ್ದರು. ಚಂದ್ರಶೇಖರ್ ಬ್ಯಾಟಿಂಗಿನಲ್ಲಿ ಎಷ್ಟು ಅಸಮರ್ಥರಾಗಿದ್ದರೆಂದರೆ ಅವರು ಕೆಲವೊಮ್ಮೆ ಎಡಗೈಯಿಂದ ಬಲಗೈಯನ್ನು ಬೆಂಬಲಿಸಬೇಕಾಗುತ್ತಿತ್ತು. ಫೀಲ್ಡಿಂಗ್ ಮಾಡುವಾಗ ಅವರು ಬಾಲನ್ನು ಎಡಗೈಯಿಂದ ಎಸೆಯು ತ್ತಿದ್ದರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಹೊಡೆದಿದ್ದಕ್ಕಿಂತ ಹೆಚ್ಚು ವಿಕೆಟ್ (242) ಗಳನ್ನು ಪಡೆದಿರುವುದು ಗಮನಾರ್ಹ. ಚಂದ್ರಶೇಖರ್ ಅವರು ತಮ್ಮ ದೈಹಿಕ ನ್ಯೂನತೆಯನ್ನು ಮೀರಿ, ಅಸಾಮಾನ್ಯ ಸಾಧನೆ ಮೆರೆದರು. ದೈಹಿಕ ನ್ಯೂನತೆಗಳನ್ನು ಗೆದ್ದ ಈ ಕ್ರೀಡಾಪಟುಗಳ ಸಾಧನೆ ಯಾವತ್ತೂ ಒಳ್ಳೆಯ ದೇಹದಾರ್ಢ್ಯ ಇರುವವರಿಗೂ ಆದರ್ಶ.

ಇದನ್ನೂ ಓದಿ: @vishweshwarbhat