ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಮೈಸೂರಿನ ಕಿರಣ್ ಎಂಬುವವರು ಜಪಾನಿನಲ್ಲಿ ಎರಡು ತಿಂಗಳುಗಳು ವಾಸವಿದ್ದ ಸಂದರ್ಭದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಓದಿದ್ದೆ. ಅದನ್ನು ನಿಮಗೂ ಹೇಳಬೇಕು. ‘ನಾನು ಟೋಕಿಯೋದಲ್ಲಿದ್ದ ಎರಡು ತಿಂಗಳ ಅವಧಿಯಲ್ಲಿ, ಅಲ್ಲಿ ನನಗೆ ನಿತ್ಯವೂ ವಿಭಿನ್ನ ಅನುಭವ ಗಳಾಗುತ್ತಿದ್ದುದು ನನ್ನನ್ನು ವಿಸ್ಮಯಗೊಳಿಸಿತ್ತು. ಅಲ್ಲಿನ ಜನರ ಸಂಸ್ಕೃತಿ, ಜೀವನವಿಧಾನ ಮತ್ತು ಜನಜೀವನ ನನ್ನ ಮೇಲೆ ಗಾಢ ಪ್ರಭಾವವನ್ನು ಬೀರಿದೆ’ ಎಂದು ಕಿರಣ್ ಹೇಳುತ್ತಾ, ಆ ಅನುಭವವನ್ನು ನಿವೇದಿಸಿ ಕೊಂಡಿದ್ದರು.
‘ಜಪಾನಿಗೆ ಬಂದ ಹತ್ತು ದಿನಗಳಾಗಿರಲಿಲ್ಲ. ನಾನು ಕೊರಿಯರ್ ಕಂಪನಿಗೆ ನನಗೆ ಪಾರ್ಸೆಲ್ ತಲುಪಿಸುವ ಸಮಯ ಮಧ್ಯಾಹ್ನ ಹನ್ನೆರಡು ಗಂಟೆ ಎಂದು ನಿಗದಿಪಡಿಸಿದ್ದೆ. ಸಾಮಾನ್ಯವಾಗಿ ನಮ್ಮೂರಿನಲ್ಲಿ ಯಾರೂ ಹೇಳಿದ
ಸಮಯಕ್ಕೆ ಡೆಲಿವರಿ ಮಾಡುವುದಿಲ್ಲವಲ್ಲ. ಟೋಕಿಯೋದ ಕೊರಿಯರ್ ಕಂಪನಿಯೂ ಹಾಗೆ ವರ್ತಿಸಬಹುದು ಎಂಬುದು ನನ್ನ ಊಹೆಯಾಗಿತ್ತು. ನಾನು ಮಧ್ಯಾಹ್ನ 11.55ಕ್ಕೆ ನನ್ನ ಅಪಾರ್ಟಮೆಂಟ್ ಬಾಗಿಲನ್ನು ತೆರೆದರೆ,
ಡೆಲಿವರಿ ಬಾಯ್ ಅಲ್ಲಿಯೇ ಸುಮ್ಮನೆ ನಿಂತಿದ್ದ. ನನಗೆ ಆಶ್ಚರ್ಯವಾಯಿತು.
“ನೀನು ಮುಂಚಿತವಾಗಿಯೇ ಬಂದಿದ್ದರೆ ನನ್ನ ಬಾಗಿಲನ್ನು ಏಕೆ ತಟ್ಟಲಿಲ್ಲ?” ಎಂದು ನಾನು ಅವನನ್ನು ಕೇಳಿದಾಗ ಆತ, “ನಾನು ೧೨ ಗಂಟೆ ಆಗುವುದಕ್ಕೆ ಕಾಯುತ್ತಿದ್ದೇನೆ. ಇನ್ನೂ ಐದು ನಿಮಿಷ ಇದೆಯಲ್ಲ” ಎಂದು ಹೇಳಿದ. “ಏನು ಇನ್ನೂ ಐದು ನಿಮಿಷಗಳಿರುವಾಗಲೇ ಬಂದುಬಿಟ್ಟಿದ್ದೀಯಾ?” ಎಂದು ಕೇಳಿದೆ. ಅದಕ್ಕೆ ಆತ, “ನೀವು ಹೇಳಿದ್ದು ಹನ್ನೆರಡು ಗಂಟೆಗೆ ತಾನೇ? ನಾನು ಸಮಯಪಾಲಿಸಬೇಕಲ್ಲ? ನೀವು ಯಾವ ಸಮಯಕ್ಕೆ ಹೇಳುತ್ತೀರೋ ಆ ಸಮಯಕ್ಕೆ ತಲುಪಿಸುತ್ತೇವೆ. ಮಧ್ಯರಾತ್ರಿ 2.51ಕ್ಕೆ ತಲುಪಿಸಿ ಎಂದು ಶೆಡ್ಯೂಲ್ ಮಾಡಿದರೆ, ಸರಿಯಾಗಿ ಅದೇ ಸಮಯಕ್ಕೆ ತಲುಪಿಸುತ್ತೇವೆ” ಎಂದು ಹೇಳಿದ.
ನನಗೆ ಆತನ ಸಮಯ ಪಾಲನೆ ಮತ್ತು ಕರ್ತವ್ಯಪ್ರಜ್ಞೆ ಅತೀವ ಅಚ್ಚರಿಯನ್ನುಂಟು ಮಾಡಿತು. ಆತನ ಕೆಲಸಕ್ಕೆ ಖುಷಿ ಯಾಗಿ ನಾನು ಟಿಪ್ ನೀಡಲು ಮುಂದಾದೆ. ಆತ ಅದನ್ನು ನಯವಾಗಿ ತಿರಸ್ಕರಿಸಿದ. ಇನ್ನೊಂದು ಪ್ರಸಂಗ. ಒಂದು ದಿನ ಚಳಿಗಾಲದ ಮಧ್ಯಾಹ್ನದ ಹೊತ್ತಿನಲ್ಲಿ ಭಾರತೀಯ ರೆಸ್ಟೋರೆಂಟಿನಲ್ಲಿ ಊಟಕ್ಕೆಂದು ಹೋಗಿದ್ದೆ. ನನ್ನ ಟೇಬಲ್ ಪಕ್ಕದಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಊಟ ಮಾಡುವಾಗ ಧೂಮಪಾನ ಮಾಡಲು ಪ್ರಾರಂಭಿಸಿದ. ಆತ ಬಿಟ್ಟ ಹೊಗೆ ನನ್ನ ತನಕ ಬರುತ್ತಿತ್ತು. ನನ್ನನ್ನು ಬೇರೆ ಟೇಬಲ್‌ಗೆ ವರ್ಗಾಯಿಸುವಂತೆ ನಾನು ವೇಟರ್‌ಗೆ ಹೇಳಿದೆ. ಆತ ನನ್ನ
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ. ಇದನ್ನು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಗಮನಿಸುತ್ತಿದ್ದ.
ನನಗೆ ಆತನ ಹೊಗೆ ಚಟದಿಂದ ತೊಂದರೆಯಾಗಿದೆ ಎಂಬುದು ಅವನಿಗೆ ಮನವರಿಕೆಯಾಯಿತು. ಆತ ನನ್ನ ಬಳಿ ಬಂದು ಕ್ಷಮೆಯಾಚಿಸಿದ. ನಡು ಬಗ್ಗಿಸಿ ನಮಸ್ಕರಿಸಿ ಹೋದ. ನಾನು ಪರವಾಗಿಲ್ಲ ಎಂದು ಅವನಿಗೆ ಹೇಳಿದೆ. ನಂತರ ನನ್ನ ಊಟವಾಯಿತು. ನಾನು ಬಿಲ್ ಪಾವತಿಸಲು ಕೌಂಟರ್ ಬಳಿ ಹೋದಾಗ, “ಸಿಗರೇಟು ಸೇದುತ್ತಿದ್ದ ಆ ವ್ಯಕ್ತಿ
ನಿಮ್ಮ ಊಟದ ಬಿಲ್ ಪಾವತಿಸಿದ್ದಾನೆ. ನಿಮಗಾದ ತೊಂದರೆಗೆ ಆತ ವಿಷಾದ ವ್ಯಕ್ತಪಡಿಸಿದ್ದಾನೆ” ಎಂದು ವೇರ್ಟ ಹೇಳಿದ. ನನಗೆ ಪಿಚ್ಚೆನಿಸಿತು.
“ನಿಮಗೆ ಅದೆಷ್ಟು ಕಿರಿಕಿರಿ ಆಯಿತೇನೋ ಎಂದು ಅವರು ಬಹಳ ಬೇಸರಿಸಿಕೊಂಡರು ಮತ್ತು ನಿಮ್ಮಿಂದ ಹಣ ತೆಗೆದುಕೊಳ್ಳುವುದು ಬೇಡ. ಅವರ ಬಿಲ್‌ನ್ನು ನಾನೇ ಕೊಡುತ್ತೇನೆ ಎಂದು ಹೇಳಿ ಹೊರಟುಹೋದರು” ಎಂದು ವೇಟರ್ ಹೇಳಿದ. ಆತ ಬಿಟ್ಟ ಸಿಗರೇಟು ಹೊಗೆಯನ್ನು ಸಹಿಸಿಕೊಳ್ಳಬಹುದಿತ್ತು, ನಾನು ಅಲ್ಲಿಂದ ಎದ್ದು ಹೋಗ ಬಾರದಿತ್ತು ಎಂದು ನನಗೆ ಅನಿಸಿತು. ಹೀಗೆ ಜಪಾನಿನಲ್ಲಿ ಇದ್ದಷ್ಟು ದಿನ ನನಗೆ ಇಂಥ ಅವೆಷ್ಟು ಅನುಭವಗಳು ಆಗಿವೆ ಯೇನೋ? ಅಲ್ಲಿ ಇzಗ ಯಾರೂ ನನ್ನನ್ನು ಒರಟಾಗಿ ನಡೆಸಿಕೊಳ್ಳಲಿಲ್ಲ.
ನನಗೆ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ನನಗೆ ಊರಿನ ನೆನಪು ಬರದಷ್ಟು ಆಪ್ತವಾಗಿ ಅಲ್ಲಿನ ಜನ ನನ್ನಂಥ ಅಪರಿಚಿತನನ್ನು ನಡೆಸಿಕೊಂಡರು. ಜಪಾನಿಯರು ಹೇಗೆ ಇದ್ದಾರೆ ಎಂಬುದನ್ನು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಗಳನ್ನು ಕೇಳುವುದಕ್ಕಿಂತ ಅವರನ್ನು ಗಮನಿಸುವುದರಿಂದ ಹೆಚ್ಚು ಕಲಿಯಬಹುದು ಎಂಬ ಭಾವನೆ ನನ್ನಲ್ಲಿದೆ. ಅದು ಜಪಾನಿಯರಿಗೆ ಸಹಜ. ಆದರೆ ನಮಗೆ ಅವರ ಪ್ರತಿ ನಡೆಯೂ ಒಂದು ಅಮೂಲ್ಯ ಪಾಠ. ಅವರಿಂದ ನಾವು ಕಲಿಯುವುದು ಬೇಕಾದಷ್ಟಿವೆ.
ಇದನ್ನೂ ಓದಿ: @vishweshwarbhat