ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನಿನ ಶಿಬುಯಾ ಕ್ರಾಸಿಂಗ್ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ, ಓದಿದ್ದೆ. ಅಷ್ಟೇ ಅಲ್ಲ, Lost in Translation, The Fast and the Furious: Tokyo Drift, Alice in Borderland ಸೇರಿದಂತೆ ಕೆಲವು ಪ್ರಮುಖ ಸಿನಿಮಾಗಳಲ್ಲಿ ಆ ಕ್ರಾಸಿಂಗ್ನ್ನು ನೋಡಿದ್ದೆ.
ಹಲವು ವೀಡಿಯೋ ಗೇಮ್ಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲೂ ಶಿಬುಯಾ ಕ್ರಾಸಿಂಗ್ ನ್ನು ತೋರಿಸಲಾಗಿದೆ. ಜಪಾನಿಗೆ ಹೋದಾಗ ಶಿಬುಯಾ ಕ್ರಾಸಿಂಗ್ ಗೆ ಹೋಗಲೇಬೇಕು ಎಂದು ನಿರ್ಧರಿಸಿz. ಆದರೆ ನಮ್ಮ ಪ್ರವಾಸಪಟ್ಟಿ ಯಲ್ಲಿ ಅಲ್ಲಿಗೆ ಭೇಟಿ ನೀಡಿರುವುದು ಇರಲಿಲ್ಲ. ನ್ಯೂಯಾರ್ಕಿಗೆ ಹೋಗಿ ಟೈಮ್ಸ್ ಸ್ಕ್ವೇರ್ ನೋಡದಿದ್ದರೆ ಹೇಗೆ? ಹಾಗೆ ಟೋಕಿಯೋಕ್ಕೆ ಬಂದು ಶಿಬುಯಾ ಕ್ರಾಸಿಂಗ್ ನೋಡದಿರುವುದುಂಟೇ? ಏನೇ ಆಗಲಿ, ಶಿಬುಯಾ ಕ್ರಾಸಿಂಗ್
ನ್ನು ನೋಡಲೇಬೇಕು ಎಂದು ನಮ್ಮ ಗೈಡ್ಗೆ ವರಾತಕ್ಕೆ ಬಿದ್ದೆ.
ಶಿಬುಯಾ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಆ ಕ್ರಾಸಿಂಗ್ ಟೋಕಿಯೋ ನಗರದ ಅನನ್ಯ ಸಾಂಸ್ಕೃತಿಕ ಸಂಕೇತ. ಇದು ಆ ನಗರದಲ್ಲಿರುವ ಪ್ರಪಂಚದ ಅತ್ಯಂತ ಪ್ರಸಿದ್ಧ ಕ್ರಾಸಿಂಗ್ಗಳಲ್ಲಿ ಒಂದಾಗಿದೆ. ಹಾಗಾದರೆ ಏನಿದರ ಮಹತ್ವ ಎಂದು ಕೇಳಬಹುದು. ರಸ್ತೆ ಕ್ರಾಸಿಂಗ್ ತಾಣವೇಕೆ ಅಷ್ಟೊಂದು ಪ್ರಸಿದ್ಧ ಎಂದೂ ಕೇಳಬಹುದು. ಸರಳ ವಾಗಿ ಹೇಳುವುದಾದರೆ, ಇದು ಏಳೆಂಟು ರಸ್ತೆಗಳು ಸೇರುವ ಒಂದು ಕೂಡು ತಾಣ. ಸಿಗ್ನಲ್ ಲೈಟ್ ಹಸಿರಾಗು ತ್ತಿದ್ದಂತೆ, ಆ ಎಲ್ಲ ರಸ್ತೆಗಳಲ್ಲಿರುವ ಜನ ಒಂದೇ ಸಲ ರಸ್ತೆಯನ್ನು ದಾಟುತ್ತಾರೆ. ಆ ಸಂದರ್ಭದಲ್ಲಿ ಒಂದೂವರೆ ನಿಮಿಷಗಳ ಅವಧಿಯಲ್ಲಿ ಸುಮಾರು ಎರಡೂವರೆಯಿಂದ ಮೂರು ಸಾವಿರ ಜನ ರಸ್ತೆಯನ್ನು ದಾಟುತ್ತಾರೆ.
ಕೆಲವು ಸಲ ಹತ್ತು ಸಾವಿರ ಜನ ರಸ್ತೆ ದಾಟುವುದೂ ಉಂಟು. ವಿಶೇಷ ಹಬ್ಬ ಅಥವಾ ರಜಾ ಸಂದರ್ಭಗಳಲ್ಲಿ ಇಪ್ಪತ್ತು ಸಾವಿರ ಮಂದಿ ಏಕಕಾಲಕ್ಕೆ ರಸ್ತೆ ದಾಟುವುದೂ ಉಂಟು. ಹೀಗಾಗಿ ಇದನ್ನು Shibuya Scramble (ಅವಸರ ದಲ್ಲಿ ಅಡ್ಡಾದಿಡ್ಡಿ ವೇಗವಾಗಿ ನಡೆಯುವುದು) Square ಎಂದೂ ಕರೆಯುತ್ತಾರೆ. ಎಲ್ಲ ರಸ್ತೆಗಳಲ್ಲಿರುವ ಜನ ಸಿಗ್ನಲ್ ಲೈಟ್ ಹಸಿರು ಬಣ್ಣಕ್ಕೆ ತಿರುಗುವುದನ್ನೇ ಕಾಯುತ್ತಿರುತ್ತಾರೆ. ಹಸಿರು ದೀಪ ಕಾಣುತ್ತಿದ್ದಂತೆ ಒಂದೇ ಸಮನೆ ಸರಸರನೆ ನಡೆಯಲಾರಂಭಿಸುತ್ತಾರೆ. ಅಷ್ಟು ಜನ ಎಲ್ಲಿಂದ ಬರುತ್ತಾರೋ, ಎಲ್ಲಿಗೆ ಹೋಗುತ್ತಾರೋ ಗೊತ್ತಾಗುವುದಿಲ್ಲ. ಅಷ್ಟೊಂದು ಮಂದಿ ರಸ್ತೆ ದಾಟುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಸಾವಿರಾರು ಮಂದಿ ಏಕಕಾಲದಲ್ಲಿ ರಸ್ತೆ ದಾಟುವಾಗ ಯಾರೂ ಮೈ ತಾಗಿಸುವುದಿಲ್ಲ. ಎಲ್ಲರೂ ಶಿಸ್ತಿನಿಂದ ನಡೆಯು ವುದನ್ನು ನೋಡುವುದೇ ಒಂದು ಅಪರೂಪದ ದೃಶ್ಯ. ಅಂಥ ದೃಶ್ಯ ಪ್ರಾಯಶಃ ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಅದನ್ನು ನೋಡಲೆಂದೇ ಜನ ಅಲ್ಲಿಗೆ ಬರುವುದೂ ಉಂಟು. ಇದು ಜಪಾನಿನ ಸಾಂಸ್ಕೃತಿಕ ಜೀವನಶೈಲಿ ಮತ್ತು ನಗರೀಕರಣದ ಪ್ರತೀಕ ಎಂದು ಭಾವಿಸಲಾಗಿದೆ. ಪ್ರತಿದಿನ ಏನಿಲ್ಲವೆಂದರೂ ಎರಡೂವರೆ ಲಕ್ಷ ಜನ ಇಲ್ಲಿ ರಸ್ತೆ ದಾಟುತ್ತಾರೆ. ಅದಕ್ಕಾಗಿ ಇದನ್ನು ವಿಶ್ವದ ಅತ್ಯಂತ ಜನನಿಬಿಡ ಭೂ ಸಂಚಯ ಸ್ಥಳಗಳಂದು ಎಂದು ಪರಿಗಣಿಸ ಲಾಗಿದೆ. ಇದು ಮನುಷ್ಯರ ಚಟುವಟಿಕೆ, ಸಂಸ್ಕೃತಿ ಮತ್ತು ನಗರ ಜೀವನದ ಗತಿಯನ್ನು ತೋರಿಸುವ ಅದ್ಭುತ ತಾಣವಾಗಿದೆ. ಇದು ಎಲ್ಲ ದಿಕ್ಕುಗಳಲ್ಲಿ ಹಾದುಹೋಗಲು ಅವಕಾಶ ನೀಡುವ ವಿನ್ಯಾಸವನ್ನು ಹೊಂದಿದೆ.
ಈ ಕ್ರಾಸಿಂಗ್ ಸುತ್ತಮುತ್ತ ನೂರಾರು ಕಣ್ಣುಕುಕ್ಕುವ ಬೃಹತ್ ಬಿಲ್ ಬೋರ್ಡುಗಳು ಮತ್ತು ಎಲ್ಇಡಿ ಪರದೆಗಳು ದಿನವಿಡೀ ಜಗಮಗಿಸುತ್ತಿರುತ್ತವೆ. ಈ ಬೆಳಕು ಮತ್ತು ಧ್ವನಿಯ ಮಿಶ್ರಣವು ರಾತ್ರಿ ಸಮಯದಲ್ಲಿ ಶಿಬುಯಾ ಕ್ರಾಸಿಂಗ್ಗೆ ಆಕರ್ಷಣೆ ನೀಡುವುದು ವಿಶೇಷ. ಕೆಲಸಕ್ಕೆ ಹೋಗುವ ಕಾರ್ಯನಿರತ ಜನ, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಪ್ರೇಮಿಗಳ ದಟ್ಟಣೆ ಶಿಬುಯಾ ಕ್ರಾಸಿಂಗ್ನ ಸಾಮಾನ್ಯ ದೃಶ್ಯವಾಗಿದೆ. ಇದು ಕೇವಲ ರಸ್ತೆ ದಾಟುವ ತಾಣ ವಷ್ಟೇ ಅಲ್ಲ, ಇದು ಜಪಾನಿನ ತಂತ್ರeನ ಮತ್ತು ಆಧುನಿಕತೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೇ, ಇದು ಶಿಸ್ತುಬದ್ಧತೆ ಮತ್ತು ಸಹಅಸ್ತಿತ್ವದ ಮಹತ್ವವನ್ನು ಜನತೆಗೆ ಪರಿಚಯಿಸುತ್ತದೆ.
ಇದನ್ನೂ ಓದಿ: @vishweshwarbhat