Thursday, 9th January 2025

‌Vishweshwar Bhat Column: ಹಸಿರು ಚಹ ಸೇವನೆ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನಿಗೆ ಹೋಗಿ ಗ್ರೀನ್ ಟೀ (ಹಸಿರು ಚಹ) ಕುಡಿಯದೇ ಬರುವುದುಂಟಾ? ಚಹ ಕುಡಿಯದೇ ಬಂದರೆ ಯಾರೂ ಏನೂ ಮಾಡುವುದಿಲ್ಲ. ಆದರೆ ಅಷ್ಟರಮಟ್ಟಿಗೆ ಆ ದೇಶದ ಒಂದು ಸಂಪ್ರದಾಯದಿಂದ ವಂಚಿತರಾಗುವುದು ಮಾತ್ರ ದಿಟ. ಗ್ರೀನ್ ಟೀ ಜಪಾನಿನ ಸಂಸ್ಕೃತಿ ಮತ್ತು ಜೀವನ ಶೈಲಿಯ ಮಹತ್ವದ ಭಾಗ. ಸಾಮಾನ್ಯವಾಗಿ ಎಲ್ಲಿಗೇ ಹೋದರೂ ‘ಗ್ರೀನ್ ಟೀ ಕುಡಿಯುತ್ತೀರಾ?’ ಎಂದು ಕೇಳುತ್ತಾರೆ.

ಹಾಗೆ ಕೇಳಿದಾಗ, ಕುಡಿಯುವ ಇಚ್ಛೆ ಇಲ್ಲದಿದ್ದರೂ ಯಾರೂ ‘ಬೇಡ’ ಎಂದು ಹೇಳುವುದಿಲ್ಲ. ಕಾರಣ ಅದು ಶಿಷ್ಟಾ ಚಾರ, ಗೌರವಸೂಚಕ. ಆ ದೇಶದಲ್ಲಿ ಹಸಿರು ಚಹ ಕುಡಿಯುವ ಮತ್ತು ತಯಾರಿಸುವ ಕಲೆಗೆ ಧ್ಯಾನ ಸಮಾನ ಮಹತ್ವ ನೀಡಲಾಗಿದೆ. ಹಸಿರು ಚಹ ಜಪಾನಿನ ಸಾಮಾಜಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಕಾರಗಳಲ್ಲಿ ಮೂಲಭೂತ ಪಾತ್ರವನ್ನು ವಹಿಸಿದೆ. ಜಪಾನಿಗೆ ಹಸಿರು ಚಹ 9ನೇ ಶತಮಾನದಲ್ಲಿ ಚೀನಾದಿಂದ ಬಂದ ಬೌದ್ಧ ಭಿಕ್ಷುಗಳಿಂದ ಪರಿಚಯವಾಯಿತು.

ಧ್ಯಾನದಲ್ಲಿ ಮನಸ್ಸು ಹಾಗೂ ದೇಹವನ್ನು ಏಕಾಗ್ರಗೊಳಿಸಲು ಮತ್ತು ಶಾಂತಗೊಳಿಸಲು ಶುರುವಿನಲ್ಲಿ ಇದರ ಬಳಕೆಯಾಗುತ್ತಿತ್ತು. 13ನೇ ಶತಮಾನದಲ್ಲಿ ಜಪಾನಿನ ಮೇನ್ ಲ್ಯಾಂಡಿನಲ್ಲಿ ಹಸಿರು ಚಹದ ಬೆಳವಣಿಗೆ ಪ್ರಸಿದ್ಧಿ ಪಡೆಯಿತು. ಸೆನರಿಕ್ಯೂ ಎಂಬ ಝೆನ್ ಬೌದ್ಧ ಪಾದ್ರಿಯಿಂದ ಚಹ ಪೂಜಾ ಸಂಪ್ರದಾಯ ಆರಂಭವಾಗಿ, ನಂತರದ ದಿನಗಳಲ್ಲಿ ಅದು ಆಧುನಿಕ ರೂಪವನ್ನು ಪಡೆಯಿತು. ಜಪಾನಿನಲ್ಲಿ ಹಸಿರು ಚಹದ ಅನೇಕ ತಳಿಗಳು ಲಭ್ಯವಿದ್ದು, ಅವು ರುಚಿ, ಪರಿಮಳ ಮತ್ತು ಗುಣಧರ್ಮಗಳಲ್ಲಿ ವಿಭಿನ್ನವಾಗಿವೆ. ಅಲ್ಲಿ ಚಹವನ್ನು ಕೇವಲ ಪೇಯ ವಾಗಿ ನೋಡುವುದಿಲ್ಲ. ಅದು ಅವರ ದೈನಂದಿನ ಆಹಾರ ಸಂಸ್ಕೃತಿಯೂ ಹೌದು, ಜೀವನ ವಿಧಾನವೂ ಹೌದು.

ಮಚಾ (Matcha) ಎಂಬುದು ನುಣುಪಾಗಿ ಪುಡಿ ಮಾಡಿದ ಹಸಿರು ಚಹ. ಇದನ್ನು ವಿಶೇಷ ಸಂದರ್ಭಗಳಲ್ಲಿ ಬಳಸುತ್ತಾರೆ. ಇದು ಗಾಢರುಚಿ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿದೆ. ಸೆನ್ಚಾ (Sencha)ಎಂಬ ಇನ್ನೊಂದು ಬಗೆಯ ಚಹವಿದೆ. ಹೆಚ್ಚು ಜನಪ್ರಿಯವಾಗಿರುವ ಈ ಹಸಿರು ಚಹವನ್ನು ಪ್ರತಿ ದಿನ ಅನೇಕರು ಕುಡಿಯುತ್ತಾರೆ. ಇದರ ರುಚಿ ತುಸು ಸಿಹಿ. ಕಹಿಯಾದ ಮಿಶ್ರಣದಲ್ಲೂ ಲಭ್ಯ. ಗ್ಯೊಕುರೋ (Gyokuro) ಎಂಬುದು ಅತ್ಯುತ್ತಮ ಗುಣಮಟ್ಟದ ಹಸಿರು ಚಹಗಳಂದು. ಆ ಚಹ ಎಲೆಗಳನ್ನು ನೆರಳಲ್ಲಿ ಬೆಳೆಯುವುದರಿಂದ ವಿಶೇಷ ಉಸಕಾರಿ ರುಚಿಯನ್ನು ಹೊಂದಿದೆ. ಹೋಜಿಚಾ (Hojicha) ಎಂಬ ಇನ್ನೊಂದು ಬಗೆಯ ಹಸಿರು ಚಹ ತುಸು ಹಗುರ ಮತ್ತು ಮೃದು ಸುವಾಸನೆಯನ್ನು ಹೊಂದಿದೆ.

ಜೆನ್ಮೈಚಾ (Genmaicha) ಎಂಬ ಹಸಿರು ಚಹಕ್ಕೆ, ಅಕ್ಕಿಯನ್ನು ಸೇರಿಸಿ ತಯಾರಿಸುತ್ತಾರೆ. ಇದು ನಾಜೂಕಾದ ಮತ್ತು ನೈಸರ್ಗಿಕವಾದ ರುಚಿಯುಳ್ಳದ್ದು. ಜಪಾನಿನ ಹಸಿರು ಚಹದ ತಯಾರಿಕೆ ವಿಶಿಷ್ಟ. ಚಹ ಎಲೆಗಳನ್ನು ಆರಿಸಿ ಕೊಂಡು ಪಾರಂಪರಿಕ ವಿಧಾನಗಳಿಂದ ವಾಸನೆ ಮತ್ತು ಪೌಷ್ಟಿಕತೆಯನ್ನು ಉಳಿಸಿಕೊಂಡು ಶುದ್ಧಗೊಳಿಸ ಲಾಗುತ್ತದೆ. ಎಲೆಗಳನ್ನು ಬಾಡಿಸದೇ ತಕ್ಷಣ ಆವಿಯಲ್ಲಿಡುವುದರಿಂದ ಅದರ ಹಸಿರು ಬಣ್ಣ ಮತ್ತು ಪೌಷ್ಟಿಕತೆ ಯನ್ನು ಕಾಪಾಡಲಾಗುತ್ತದೆ. ಮಚಾ, ಗ್ಯೊಕುರೋ ಮುಂತಾದ ವಿಶೇಷ ತಳಿಗಳನ್ನು ಇನ್ನೂ ಹೆಚ್ಚು ನಾಜೂಕಾಗಿ ತಯಾರಿಸುತ್ತಾರೆ. ಆರೋಗ್ಯದ ದೃಷ್ಟಿಯಿಂದ ಜಪಾನಿನ ಹಸಿರು ಚಹ ಮಹತ್ವದ್ದಾಗಿದೆ. ಆರೋಗ್ಯದ ಲಾಭ ಪ್ರತಿ ಚಹ ಸೇವನೆಯ ಹಿಂದೆ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿ ಕೆಮಿಕಲ್ ಸಂಯೋಜನೆಗಳಾದ ಕ್ಯಾಟೆಚಿನ್ (Catechins), ಆಂಟಿ-ಆಕ್ಸಿಡೆಂಟ್ಸ್, ಮತ್ತು ಎಲ್-ಥಿಯಾನಿನ್ (L-Theanine) ಇದ್ದು, ಜೀರ್ಣಕ್ರಿಯೆ, ಹೃದಯ ಆರೋಗ್ಯ ಮತ್ತು ಮಾನಸಿಕ ಶಾಂತಿಗೆ ಸಹಕಾರಿ. ಅದು ವಯಸ್ಸು ಕಡಿಮೆ ಮಾಡುವ ಮತ್ತು ತ್ವಚೆಯ ಆರೋಗ್ಯ ವನ್ನು ಕಾಪಾಡುವ ಗುಣವನ್ನು ಸಹ ಹೊಂದಿದೆಯಂತೆ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಕೂಡ ಸಹಾಯಕ. ಹಸಿರು ಚಹ ಮೆಟಬಾಲಿಸಂ ಹೆಚ್ಚಿಸುವ ಮೂಲಕ ದೇಹದ ತೂಕವನ್ನು ಸಮತೋಲನ ದಲ್ಲಿಡುತ್ತದೆ. ಜಪಾನಿಗೆ ಹೋದ ಪ್ರವಾಸಿಗರು ಹಸಿರು ಚಹ ತಯಾರಿಕೆಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ಚಹ ಸೇವನಾ ಸಂಪ್ರದಾಯವನ್ನು ಅನುಭವಿಸುವುದುಂಟು. ಚಹ ಪೂಜಾ ವಿಧಾನವನ್ನು ‘ಚನೋಯು’ ಅಥವಾ ‘ಚಾದೋ’ (The Way of‌ Tea) ಎಂದು ಕರೆಯುತ್ತಾರೆ. ಅದು ಗಂಭೀರ ಮತ್ತು ಆಧ್ಯಾತ್ಮಿಕ ಪಾಲನಾ ಸಂಪ್ರದಾಯ ವಾಗಿದೆ.

ಇದನ್ನೂ ಓದಿ: @vishweshwarbhat

Leave a Reply

Your email address will not be published. Required fields are marked *