Saturday, 11th January 2025

‌Vishweshwar Bhat Column: ಪತ್ರಿಕೆ ಮತ್ತು ರಾಜಕೀಯ ವರದಿ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಖ್ಯಾತ ಪತ್ರಕರ್ತ ದಿವಂಗತ ವೈಎನ್‌ಕೆ ಅವರು ಬರೆದ ‘ಇದು ಸುದ್ದಿ, ಇದು ಸುದ್ದಿ’ ಪುಸ್ತಕವನ್ನು ಕೆಲ ದಿನಗಳ ಹಿಂದೆ
ಓದುತ್ತಿz. ಇದು ಸುಮಾರು 38 ವರ್ಷಗಳ ಹಿಂದೆ ಪ್ರಕಟವಾದ ಒಂದು ಅಪರೂಪದ ಕೃತಿ. ಅದರಲ್ಲಿ ವೈಎನ್‌ಕೆ ಒಂದೆಡೆ ಹೀಗೆ ಬರೆಯುತ್ತಾರೆ- “ಕನ್ನಡ ಪತ್ರಿಕೆಗಳಲ್ಲಿ ರಾಜಕೀಯ ಸುದ್ದಿ ಬರೆಯುವ ಸಾಕಷ್ಟು ಪತ್ರಕರ್ತರಿದ್ದಾರೆ.

ಆದರೆ ಕಲೆ, ವಿಜ್ಞಾನ, ಸಂಗೀತ, ಕೃಷಿ ಬಗ್ಗೆ ಬರೆಯುವವರು ಕಮ್ಮಿ. ವಿಜ್ಞಾನದ ಮಹಾ ಸಂಶೋಧನೆಗಳ ವಿವರಗಳು ಪತ್ರಿಕೆಯಲ್ಲಿ ಹೆಚ್ಚು ವರದಿಯಾಗುವುದಿಲ್ಲ. ನೊಬೆಲ್ ಪ್ರಶಸ್ತಿ ಪಡೆದವರು ಏನು ಮಾಡಿದ್ದಾರೆ, ಅವರ ಯಾವ ಸಂಶೋಧನೆಗೆ ಆ ಪ್ರಶಸ್ತಿ ನೀಡಿದ್ದಾರೆ, ಆ ಸಂಶೋಧನೆ ನಮಗೆ ಎಷ್ಟು ಪ್ರಸ್ತುತ, ಅದರ ಮಹತ್ವ ಏನು ಎಂಬ ವಿವರಗಳು ಇರುವುದಿಲ್ಲ”. ಇದು ನಿಜ. ಈಗಲೂ ಅದೇ ಪರಿಸ್ಥಿತಿ ಇದೆ.

ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಬರೆಯುವ ಉತ್ತಮ ಲೇಖಕರು ಬಂದಿದ್ದಾರೆ. ಆದರೆ ಅಂಥ ವಿಷಯ ವನ್ನು ಬರೆಯುವ ಪತ್ರಕರ್ತರ ಸಂಖ್ಯೆ ಕಮ್ಮಿಯೇ. ರಾಜಕಾರಣದ ಬಗ್ಗೆ ಬರೆಯಲು ಸುದ್ದಿಮನೆಯಲ್ಲಿ ನೂಕು ನುಗ್ಗಲು. ಆ ವಿಷಯವನ್ನು ಬರೆಯಲು ಬಹಳ ಶಾಣ್ಯಾತನ ಬೇಕಿಲ್ಲ. ಅದೇ ವಿಜ್ಞಾನ, ತಂತ್ರಜ್ಞಾನ, ಸಂಗೀತ, ಕಲೆಗಳ ಬಗ್ಗೆ ಬರೆಯಲು ಸ್ವಲ್ಪವಾದರೂ ಓದಿಕೊಂಡಿರಬೇಕು. ರಾಜಕಾರಣಿಗಳ ಪತ್ರಿಕಾಗೋಷ್ಠಿಗೆ ಹೋಗಲು ವಿಶೇಷ ಅರ್ಹತೆ ಬೇಕಿಲ್ಲ. ಅವರು ಹೇಳಿದ್ದನ್ನು ಬರೆದುಕೊಂಡು ಬರಲು ಅಥವಾ ಅವರಿಗೆ ಪ್ರಶ್ನೆಗಳನ್ನು ಕೇಳಲು ವಿಶೇಷ ಪ್ರೌಢಿಮೆ ಬೇಕಿಲ್ಲ. ಕೆಲ ರಾಜಕೀಯ ಪಕ್ಷಗಳ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಯಾವ ಪತ್ರಕರ್ತರಾದರೂ
ಪಾಲ್ಗೊಳ್ಳಬಹುದು. ಅದೇ ನೀವು ಇಸ್ರೋ ಅಧ್ಯಕ್ಷ, ಇಂಗ್ಲಿಷ್ ಸಾಹಿತಿ, ಪಾಪ್ ಸಂಗೀತಗಾರ, ಹಿಂದುಸ್ಥಾನಿ ಗಾಯಕ, ಕೃಷಿ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಒಂದು ಅರ್ಹತೆ ಬೇಕು.

ಮೊದಲನೆಯದಾಗಿ ಅವರು ಯಾರು, ಅವರ ಹಿನ್ನೆಲೆಯೇನು ಎಂಬುದಾದರೂ ಗೊತ್ತಿರಬೇಕು. ಅವರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವಷ್ಟಾದರೂ ಜ್ಞಾನ ಇರಬೇಕು. ಇಲ್ಲದಿದ್ದರೆ, ಇಸ್ರೋ ಅಧ್ಯಕ್ಷರ ಪತ್ರಿಕಾಗೋಷ್ಠಿಯಲ್ಲಿ, ವರದಿಗಾರನೊಬ್ಬ, “ಸರ್, ಚಂದ್ರಲೋಕಕ್ಕೆ ಹೋಗಲು ಎಷ್ಟು ಲೀಟರ್ ಡೀಸೆಲ್ ಅಥವಾ ಪೆಟ್ರೋಲ್ ಬೇಕಾಗುತ್ತದೆ
ಮತ್ತು ಅದು ಬೆಂಗಳೂರಿನಿಂದ ಎಷ್ಟು ಹೊತ್ತಿನ ಪ್ರಯಾಣ?” ಎಂದು ಕೇಳಿದಂತಾಗುತ್ತದೆ. ಹೀಗಾಗಿ ಇಂಥವರ ಕಾರ್ಯಕ್ರಮ ವರದಿ ಮಾಡಲು ಅನೇಕರು ಒಲ್ಲದ ಮನಸ್ಸಿನಿಂದ ಹೋಗುತ್ತಾರೆ. ಅದೇ ಸಿದ್ದರಾಮಯ್ಯ ಅಥವಾ ಯಡಿಯೂರಪ್ಪನವರ ಪತ್ರಿಕಾಗೋಷ್ಠಿಗೆ ಯಾರನ್ನು ಕಳಿಸಿದರೂ ನಡೆಯುತ್ತದೆ. ಇನ್ನು ರಾಜ್ಯ ನಾಯಕರು, ಮಂತ್ರಿ ಗಳು ಜಿಲ್ಲೆಗಳಿಗೆ ಹೋಗುತ್ತಾರಲ್ಲ, ಆಗ ಅಲ್ಲಿನ ವರದಿಗಾರರು ಇವರನ್ನು ಮುತ್ತಿಕೊಳ್ಳುತ್ತಾರೆ.

ಹುಬ್ಬಳ್ಳಿ, ರಾಯಚೂರು, ಕಲಬುರ್ಗಿಗೆ ಈ ನಾಯಕರು ರೈಲಿನಲ್ಲಿ ಹೋಗುತ್ತಾರಲ್ಲ, ಬೆಳಗ್ಗೆ ಐದು ಗಂಟೆಗೆ ಅಲ್ಲಿ ಇಳಿಯುವ ಹೊತ್ತಿಗೆ ಹತ್ತಾರು ಪತ್ರಕರ್ತರು ರೈಲು ನಿಲ್ದಾಣದ ಇರುತ್ತಾರೆ. ಅದರಲ್ಲೂ ಟಿವಿ ಕೆಮರಾಮನ್ ಮತ್ತು ವರದಿಗಾರರು ತಪ್ಪದೇ ಹಾಜರ್. ಇನ್ನು ಅವರು ತಂಗಿದ ಅತಿಥಿಗೃಹ ಅಥವಾ ಹೋಟೆಲಿನಲ್ಲಿ ಬೆಳಗ್ಗೆ ಹತ್ತು ಗಂಟೆಯ ಹೊತ್ತಿಗೆ 30-40 ಪತ್ರಕರ್ತರು ಸೇರಿರುತ್ತಾರೆ. ಕೆಲವರು ತಮಗೆ ಮಾತ್ರ ಸಂದರ್ಶನ ನೀಡುವಂತೆ ಕೋರು ತ್ತಾರೆ. ಅದೇ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಲು ನೊಬೆಲ್ ವಿಜ್ಞಾನಿಯೊಬ್ಬ ಆಗಮಿಸಿದರೆ, ಯಾರೂ ಅತ್ತ ಸುಳಿಯುವುದಿಲ್ಲ. ಇನ್ನು ಸಂದರ್ಶನದ ಕೋರಿಕೆ ಯಂತೂ ದೂರವೇ ಉಳಿಯಿತು. ಪತ್ರಿಕೆಗಳಲ್ಲಿ ಉಳಿದ ವಿಷಯಗಳಿಗಿಂತ ರಾಜಕೀಯ ಸುದ್ದಿಯೇ ವಿಜೃಂಭಿಸಲು ಕಾರಣವೇನು ಎಂಬುದು ಗೊತ್ತಾಯಿತಲ್ಲ?

ಇದನ್ನೂ ಓದಿ: @vishweshwarbhat

Leave a Reply

Your email address will not be published. Required fields are marked *