Monday, 23rd December 2024

Vishweshwar Bhat Column: ಪ್ರಾಮಾಣಿಕತೆ ಒಳ್ಳೆಯ ಗುಣವೇ ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನಮ್ಮ ನಡುವಿನ ನೈಜ ಚಿಂತಕರಲ್ಲಿ ಒಬ್ಬರಾಗಿದ್ದ ಓಶೋ ತಮ್ಮ ಕೃತಿಯೊಂದರಲ್ಲಿ, Honesty is the best policy ಎಂಬ ವಾಕ್ಯವನ್ನು ಪ್ರಸ್ತಾಪಿಸುತ್ತಾ, ನಿಜಕ್ಕೂ ಪ್ರಾಮಾಣಿಕತೆ ಎಂಬುದು ಅತ್ಯುತ್ತಮ ನೀತಿ ಅಥವಾ ಗುಣವಾ ಎಂದು ಪ್ರಶ್ನಿಸಿದ್ದಾರೆ. ಇದು ಮೇಲ್ನೋಟಕ್ಕೆ ತೀರಾ ಸರಳ ಪ್ರಶ್ನೆ ಎಂದು ಅನಿಸಬಹುದು. ಆದರೆ ಓಶೋ ಈ ಸಣ್ಣ ವಾಕ್ಯದ ಸಿಪ್ಪೆ ಬಿಡಿಸುತ್ತಾ ಹೋಗುತ್ತಾರೆ.

ಅದನ್ನು ಅವರ ಮಾತಿನಲ್ಲಿಯೇ ಕೇಳೋಣ- Honesty is the best policy ಎಂದು ಮೊದಲ ಬಾರಿಗೆ ಹೇಳಿದವನು ಮಹಾ ನಯವಂಚಕನೇ ಇರಬೇಕು. ಅಸಲಿಗೆ, ಪ್ರಾಮಾಣಿಕತೆ ಎಂಬುದು ಒಂದು ನೀತಿ (policy) ಅಥವಾ ಮಹಾ ಗುಣವೇ ಅಲ್ಲ. ಒಂದು ವೇಳೆ ಅದು ಒಂದು ಮಹಾಗುಣವೇ ಆಗಿದ್ದಿದ್ದರೆ, ಅದು ಪ್ರಾಮಾಣಿಕತೆ ಎಂದು ಕರೆಯಿಸಿ ಕೊಳ್ಳುವುದಿಲ್ಲ. ನೀವು ಯಾಕೆ ಪ್ರಾಮಾಣಿಕರಾಗಿದ್ದೀರಿ ಅಂದ್ರೆ ಅದರಿಂದ ನಿಮಗೆ ಲಾಭವಿದೆ. ಇದರಿಂದ ಜನ ನಿಮ್ಮನ್ನು ಪ್ರಾಮಾಣಿಕ ಎಂದು ಹೊಗಳಲಿ ಎಂಬ ಸ್ವಾರ್ಥ ನಿಮ್ಮಲ್ಲಿ ಅಡಗಿರುವು ದರಿಂದ ನೀವು ಪ್ರಾಮಾಣಿಕ ರಾಗಲು ಬಯಸುತ್ತೀರಿ ಮತ್ತು ಹಾಗೆ ವರ್ತಿಸುತ್ತೀರಿ.

ಜನ ಯಾಕೆ ಅಪ್ರಾಮಾಣಿಕರಾಗುತ್ತಾರೆ ಅಂದ್ರೆ ಹಾಗಿರುವುದರಿಂದಲೂ ಅವರಿಗೆ ಲಾಭವಿದೆ. ಪ್ರಾಮಾಣಿಕತೆ ಮತ್ತು ಅಪ್ರಾಮಾಣಿಕತೆ ಈ ಎರಡನ್ನೂ ಜನ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಪ್ರಾಮಾಣಿಕರಾಗುವುದಕ್ಕಿಂತ ಅಪ್ರಾಮಾ ಣಿಕರಾಗಿರುವುದೇ ವಾಸಿ ಎಂದು ಅನಿಸಿದರೆ, ಜನ ಅಪ್ರಾಮಾಣಿಕರಂತೆ ವರ್ತಿಸುತ್ತಾರೆ. ಹಾಗಾದರೆ politeness (ಸಭ್ಯ, ನಯ, ನಾಜೂಕು, ಶಿಷ್ಟ) ಅಂದ್ರೆ ಏನು? ಇದು ಸಹ ಒಂದು ರೀತಿಯ ಪೊಲಿಟಿಕ್ಸ್. policy, politeness ಮತ್ತು politics ಈ ಮೂರೂ ಪದಗಳ ಮೂಲ ಒಂದೇ. ಅವುಗಳ ಅರ್ಥವೂ ಹೆಚ್ಚು-ಕಮ್ಮಿ ಒಂದೇ ಅಥವಾ ಒಂದಕ್ಕೊಂದು ಪೂರಕ.

ಆದರೆ ಅನೇಕರು ಸಭ್ಯತೆ ಒಳ್ಳೆಯ ಗುಣ ಅಥವಾ ವರ್ತನೆ ಎಂದು ಭಾವಿಸಿದ್ದಾರೆ. ಅದು ಕೂಡ ಒಂದು ಪಾಲಿಟಿಕ್ಸ್ ಎಂದು ಅನೇಕರು ಭಾವಿಸುವುದಿಲ್ಲ. ವಾಸ್ತವದಲ್ಲಿ ಅದು ಸಹ ಒಂದು ರಾಜಕೀಯ ನಡೆಯೇ. ಸಭ್ಯವಾಗಿ ವರ್ತಿಸು ವುದರಿಂದ ಲಾಭವಿದೆ ಎಂಬುದು ಮನವರಿಕೆಯಾದರೆ, ಜನ ಹಾಗೆ ವರ್ತಿಸುತ್ತಾರೆ. ಸಭ್ಯ ನಡತೆಯಿಂದ ಏನನ್ನೋ ಪಡೆಯುವ, ಒಳ್ಳೆಯವನೆಂದು ಕರೆಯಿಸಿಕೊಳ್ಳುವ ಇಂಗಿತವಿರುತ್ತದೆ. ಅಂದರೆ ಅದು ಸಹ ಒಂದು ರಾಜಕೀಯ ನಡೆಯೇ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನ ಭೇಟಿಯಾದಾಗ ಪರಸ್ಪರ ಕೈ (ಹಸ್ತಲಾಘವ) ಕುಲುಕುತ್ತಾರೆ. ಎಲ್ಲರೂ ಬಲಗೈಯನ್ನೇ ಕುಲುಕುತ್ತಾರೆ,

ಎಡಗೈಯನ್ನಲ್ಲ, ಏಕೆ? ಅದಕ್ಕೆ ಕೊಡುವ ಸ್ಪಷ್ಟನೆ ಏನೆಂದರೆ ನಮ್ಮ ಹೃದಯ ಎಡಭಾಗದಲ್ಲಿದೆ ಎಂಬುದು. ಇದು ಸಹ ಒಂದು ಪೊಲಿಟಿಕ್ಸ್. ಕೈ ಕುಲುಕುವುದು ಸ್ನೇಹದ ದ್ಯೋತಕವಲ್ಲ. ಅದೊಂದು ಸನ್ನೆ ಅಥವಾ ಸೂಚಕ. ನನ್ನ ಬಲಗೈ ಖಾಲಿಯಾಗಿದೆ, ಹೀಗಾಗಿ ಭಯಪಡಬೇಡ. ಹಾಗೆ ನಿನ್ನ ಬಲಗೈ ಕೂಡ ಖಾಲಿಯಾಗಿಯೇ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು. ಇಬ್ಬರೂ ಪರಸ್ಪರರನ್ನು ಹಾನಿ ಮಾಡುವುದಿಲ್ಲ ಎಂಬ ಭರವಸೆಯನ್ನು ಕೊಡುವುದು ಕೈ ಕುಲುಕುವುದರ ಉದ್ದೇಶ. ಭಾರತದಲ್ಲಿ ಎರಡೂ ಕೈಗಳಿಂದ ನಮಸ್ಕರಿಸುವ ಪದ್ಧತಿ ನಾದಿಕಾಲದಿಂದಲೂ ಜಾರಿಯಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಮಾತ್ರ ಕೈ ಕುಲುಕುವ ಸಂಪ್ರದಾಯ ಆರಂಭವಾಗಿದ್ದು (ಕೋವಿಡ್ ಕಾಲದಲ್ಲಿ ಜಗತ್ತಿ ನಾದ್ಯಂತ, ಕೈ ಮುಗಿಯುವ ಪದ್ಧತಿ ಜಾರಿಗೆ ಬಂದಿತ್ತು). ಅದು ಸಹ ಎರಡೂ ಕೈಗಳು ಖಾಲಿಯಾಗಿವೆ ಎಂಬುದನ್ನು ಸೂಚಿಸುತ್ತವೆ. ನಮ್ಮ ಆಚರಣೆ ಮತ್ತು ಧರ್ಮ ನಮ್ಮನ್ನು ಆಷಾಢಭೂತಿಗಳನ್ನಾಗಿ ಮಾಡಿದೆ. ನಮಗೆ ನಾವು ನಿಷ್ಠರಾಗಿ ಇಲ್ಲದವರನ್ನಾಗಿ ಮಾಡಿದೆ. ಜಗತ್ತಿನ ಎಲ್ಲ ಧರ್ಮಗಳೂ ಇದನ್ನೇ ಮಾಡುತ್ತಿರುವುದು. ಧಾರ್ಮಿಕ ನಾಯಕರು ತಮ್ಮ ವರಸೆಗಳನ್ನು ಸಾಧಿಸಲು ನಮ್ಮನ್ನು ಹೆಚ್ಚು ಹೆಚ್ಚು ಮೂರ್ಖರನ್ನಾಗಿ ಮಾಡುತ್ತಾ ಬಂದಿದ್ದಾರೆ. ಈ ಕುರಿತು ಯಾರೂ ಪ್ರಶ್ನಿಸುವುದಿಲ್ಲ.

ಬೇರೆಯವರು ಹೇಳಿದ್ದೇ ಸರಿ ಇದ್ದಿರಬಹುದೆಂದು ಅಂಧರಾಗಿ ಅನುಕರಣೆ ಮಾಡುತ್ತಿದ್ದೇವೆ. ಜನರ ಪ್ರತಿ ಅಭಿವ್ಯಕ್ತಿ ಯೂ ಯಾವುದೋ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರಬಹುದಾ ಎಂಬ ಸಂದೇಹ ಮೂಡು ವಂತೆ ಮಾಡಿದೆ. ಕೆಲವರು ಕೈ ಮುಗಿಯುವ ಬದಲು, ಕಾಲಿಗೆ ಬೀಳುತ್ತಾರೆ. ಇದು ಯಾಕಿರಬಹುದು ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.

ಇದನ್ನೂ ಓದಿ: @vishweshwarbhat