Tuesday, 24th December 2024

Vishweshwar Bhat Column: ವೆಂಡಿಂಗ್‌ ಮಷೀನುಗಳ ದೇಶ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನಿಜ, ಜಪಾನಿನಲ್ಲಿ ಎಲ್ಲೂ ಅವ್ಯವಸ್ಥೆ ಗೋಚರಿಸುವುದಿಲ್ಲ. ಕಸ-ಕಡ್ಡಿಗಳು ಮತ್ತು ಕಸದ ತೊಟ್ಟಿಗಳೂ ಕಾಣುವು ದಿಲ್ಲ. ಆದರೆ ಎಲ್ಲಿಗೆ ಹೋದರೂ ವೆಂಡಿಂಗ್ ಮಷೀನು (ಮಾರಾಟ ಯಂತ್ರ) ಗಳನ್ನು ಮಾತ್ರ ನೋಡದೇ ಇರಲು ಸಾಧ್ಯವಿಲ್ಲ. ಟೋಕಿಯೋ ನಗರವೊಂದೇ ಅಲ್ಲ, ಗ್ರಾಮೀಣ ಪ್ರದೇಶದಲ್ಲೂ ಎಡೆ ವೆಂಡಿಂಗ್ ಮಷೀನುಗಳು ಗೋಚರಿಸುತ್ತವೆ. ಜನವಸತಿ ಇಲ್ಲದಿದ್ದರೇನಾಯಿತು, ಜನ ಸಂಚಾರ ಇರುವ ಕಡೆಗಳಲ್ಲೂ ವೆಂಡಿಂಗ್ ಮಷೀನು ಗಳನ್ನು ನೋಡಬಹುದು.

ನಮ್ಮ ದೇಶದಲ್ಲಿ ಯಾವುದೇ ಊರಿಗೆ ಹೋದರೂ, ಪೆಟ್ಟಿಗೆ ಅಂಗಡಿ ಅಥವಾ ಗೂಡಂಗಡಿಗಳು ಇರುವಂತೆ, ಅಲ್ಲಿ ವೆಂಡಿಂಗ್ ಮಷೀನುಗಳು. ಕಾಶ್ಮೀರದ ಪರ್ವದ ಹತ್ತಿ, ಕೊಡಚಾದ್ರಿ ಗುಡ್ಡ ಹತ್ತಿ ಅಂದು ಗೂಡಂಗಡಿ ಕಾಣಿಸದೇ ಹೋಗುವುದಿಲ್ಲ. ಹಾಗೆಯೇ ಜಪಾನಿನ ಮೌಂಟ್ -ಜಿ ಪರ್ವತದ ತಪ್ಪಲಲ್ಲಿ ವೆಂಡಿಂಗ್ ಮಷೀನು! ಭಾರತದಲ್ಲಿ ಇರುವ ಗೂಡಂಗಡಿಗಳೆಷ್ಟು ಎಂದು ಯಾರೂ ಸಮೀಕ್ಷೆ ಮಾಡಿಲ್ಲ. ಆದರೆ 12.57 ಕೋಟಿ ಜನಸಂಖ್ಯೆಯಿರುವ ಜಪಾನಿನಲ್ಲಿ 55 ಲಕ್ಷ ವೆಂಡಿಂಗ್ ಮಷೀನುಗಳಿವೆ!

ಅಂದರೆ ಪ್ರತಿ 23 ಮಂದಿಗೆ ಒಂದು ವೆಂಡಿಂಗ್ ಮಷೀನು! ಜಗತ್ತಿನ ಮತ್ಯಾವ ದೇಶದಲ್ಲೂ ಈ ಪ್ರಮಾಣದ ವೆಂಡಿಂಗ್ ಮಷೀನನ್ನು ಕಾಣಲು ಸಾಧ್ಯವಿಲ್ಲ. ವಿಮಾನ ನಿಲ್ದಾಣ, ಮಾಲ, ಹೋಟೆಲು, ಬಸ್ ನಿಲ್ದಾಣ, ರೈಲು ನಿಲ್ದಾಣ, ಸಿನಿಮಾ ಥಿಯೇಟರ್, ರಸ್ತೆಯ ಫುಟ್ ಪಾತ್, ದೇವಾಲಯ, ಸಾರ್ವಜನಿಕ ಸ್ಥಳ, ಕಾಲೇಜು-ವಿಶ್ವ ವಿದ್ಯಾಲಯಗಳ ಕ್ಯಾಂಪಸ್… ಹೀಗೆ ಯಾವುದೇ ತಾಣವಿರಲಿ, ಎಲ್ಲಿ ನೋಡಿದರೂ ಅಲ್ಲ ವರ್ಕಿಂಗ್ ಕಂಡೀಷನ್‌ ನಲ್ಲಿರುವ ವೆಂಡಿಂಗ್ ಮಷೀನುಗಳನ್ನು ಕಾಣಬಹುದು. ಈ ಮಾರಾಟ ಅಥವಾ ವಿತರಣಾ ಯಂತ್ರಗಳ ವೈಶಿಷ್ಟ್ಯ ವೇನೆಂದರೆ, ಅವು ಮಾರಾಟ ಮಾಡುವ ವಸ್ತುಗಳು ವ್ಯಾಪಕ ಶ್ರೇಣಿಯನ್ನು ಹೊಂದಿವೆ.

ಜ್ಯೂಸು, ಪೆಪ್ಸಿ, ಕೋಲಾ, ಐಸ್ ಕ್ರೀಮ್, ‌ಫುಡ್, ಪಾಪ್ ಕಾರ್ನ್, ಹಾಲು, ಮೊಸರು, ಹಣ್ಣು, ಚಹ, ಕಾಫಿ, ಸಿಗರೇಟು, ಬೆಂಕಿಪೊಟ್ಟಣ, ಸ್ನ್ಯಾಕ್ಸ್, ನೂಡಲ್ಸ್, ಪಿಜ್ಜಾ, ಬರ್ಗರ್, ಮೊಟ್ಟೆ, ಚಿಪ್ಸ್, ಸೋಡಾ, ನೀರು, ಸೂಪ್, ಸಿಮ್ ಕಾರ್ಡ್, ಕೆಮರಾ, ಮೊಬೈಲ್ ಕೇಬಲ, ಮೊಬೈಲ್ ಕವರ್, ಚಾರ್ಜರ್, ಪವರ್ ಬ್ಯಾಂಕ್, ಸ್ಮಾರ್ಟ್ ಫೋನ್,‌ ಇಯರ್ ಫೊನ್, ಹೆಡ್ ಫೋನ್, ಮಾಸ್ಕ್, ಡಯರ್ಪ, ಟಿ-ಶರ್ಟ್ಸ್,‌ ಸಾಬೂನು, ಪೇ, ಟೂತ್ ಬ್ರಷ್, ಟಾವೆಲ್, ಕರ್ಚೀ-, ವಾಚು, ಬ್ಯಾಟರಿ‌ ಸೆಲ್, ಪೆನ್, ಪೆನ್ಸಿಲ್, ರೀಫಿ‌ಲ್, ಕಾಂಡಮ್ಸ್… ಹೀಗೆ ಯಾವ‌ ವಸ್ತುವನ್ನಾದರೂ ವೆಂಡಿಂಗ್ ಮಷೀನುಗಳ ಮೂಲಕ ಖರೀದಿಸಬಹುದು.

ಬನಿಯನ್, ನಿಕ್ಕರ್, ಬ್ರಾಗಳನ್ನೂ ಆ ಮಷೀನುಗಳು ಮಾರಾಟ ಮಾಡುತ್ತವೆ. ಕೆಲವು ಮಷೀನುಗಳಲ್ಲಿ ಬಿಯರ್, ವಿಸ್ಕಿ, ವೈನನ್ನೂ ಖರೀದಿಸಬಹುದು. ದಿನಸಿ, ಬೇಳೆ-ಕಾಳು, ತರಕಾರಿ, ಸೊಪ್ಪುಗಳನ್ನೂ ಈ ಮಷೀನುಗಳಿಂದ
ಪಡೆಯಬಹುದು. ಜಗತ್ತಿನ ಬೇರೆ ದೇಶಗಳಲ್ಲಿ ಯಾವ ರೀತಿ ಕೆಲಸ ಮಾಡುತ್ತವೋ ಅದೇ ರೀತಿ ಈ ವೆಂಡಿಂಗ್ ಮಷೀನುಗಳು ಕೆಲಸ ಮಾಡುತ್ತವೆ. ಕೆಲವೆಡೆ ಹಾಟ್ ವೆಂಡಿಂಗ್ ಮಷೀನುಗಳಿವೆ. ಅಂದರೆ ಅಲ್ಲಿ ಖರೀದಿಸಿದ
ಆಹಾರ ಪದಾರ್ಥಗಳನ್ನು ಅದರೊಳಗೇ ಇರುವ ಓವನ್ ನಿಂದ ಕ್ಷಣಾರ್ಧದಲ್ಲಿ ಬಿಸಿ ಮಾಡಿಕೊಳ್ಳುವ ವ್ಯವಸ್ಥೆಯೂ ಇದೆ. ಅಂದರೆ ಆ ಮಷೀನುಗಳಲ್ಲಿ ಇಟ್ಟಿರುವ ವಸ್ತುಗಳು ಸೇವಿಸಲು ಸುರಕ್ಷಿತ ಎಂದಂತಾಯಿತು.

ಕೆಲವು ಮಷೀನುಗಳಲ್ಲಿ ಸಾರು, ಸಾಂಬಾರು, ಅನ್ನ, ಸಲಾಡ್ ಇರುವ ಮಿನಿಮೀಲ್ ಸಹ ಲಭ್ಯ. ಅವಸರದಲ್ಲಿ ರುವವರಿಗೆ ಕೇವಲ ಒಂದೆರಡು ನಿಮಿಷಗಳಲ್ಲಿ ತಮಗೆ ಬೇಕಾದ ಆಹಾರವನ್ನು ಪಡೆಯಲು ಇದು ಸಹಕಾರಿ. ಈ ವೆಂಡಿಂಗ್ ಮಷೀನುಗಳ ಯಶಸ್ಸಿಗೆ ಪ್ರಮುಖ ಕಾರಣವೆಂದರೆ ದಿನದ ಯಾವ ಹೊತ್ತಿನ ದರೂ (೨೪/೭) ನಮಗೆ ಬೇಕಾದ ಪದಾರ್ಥ ಅಥವಾ ವಸ್ತುಗಳನ್ನು ಕ್ಷಣಾರ್ಧ ದಲ್ಲಿ ಪಡೆಯಬಹುದು. ಸಿಗರೇಟು ಮತ್ತು ಆಲ್ಕೋಹಾಲ್‌ನ್ನು ನಿರ್ದಿಷ್ಟ ವಯೋಮಾನ ಮೇಲ್ಪಟ್ಟವರು ಮಾತ್ರ ಪಡೆಯಲು ಐಡಿ ಕಾರ್ಡ್ ಅಥವಾ ಟೆಸ್ಕೋ ಕಾರ್ಡ್ ಅಗತ್ಯ. ಏಕಾಏಕಿ ಮಳೆ ಸುರಿಯಲಾರಂಭಿಸಿದರೆ ಅಥವಾ ಬಿಸಿಲಿನ ಝಳ ಜಾಸ್ತಿಯಾದರೆ ಛತ್ರಿ ಬೇಕೆನಿಸಿದರೆ, ಅದನ್ನೂ ವೆಂಡಿಂಗ್ ಮಷೀನುಗಳಿಂದ ಖರೀದಿಸಬಹುದು. ಈ ಯಂತ್ರಗಳಲ್ಲಿರುವ ಸಾಮಾನುಗಳು ಖರ್ಚಾಗುತ್ತಿದ್ದಂತೆ, ಭರ್ತಿ ಮಾಡಲಾಗುತ್ತದೆ. ಈ ಎಲ್ಲ ಕೆಲಸಗಳನ್ನು ಮನುಷ್ಯರೇ ಮಾಡಬೇಕಿದ್ದರೆ, ಎಷ್ಟು ಜನ ಬೇಕಾಗುತ್ತಿದ್ದರು, ಯೋಚಿಸಿ.‌

ಇದನ್ನೂ ಒದಿ: @vishweshwarbhat