Thursday, 19th September 2024

Kids Story with Audio : ಸೋಹನ್‌, ಮೋಹನ್‌ ಮತ್ತು ಮಾಯಾಶಂಖ

Kids Story
ಅಲಕಾ ಕೆ

ಅದೊಂದು ಊರು. ಆ ಊರಂಚಿನಲ್ಲಿ ಮೋಹನ ಎಂಬಾತ ತನ್ನ ಕುಟುಂಬದ ಜೊತೆಗೆ ಸಣ್ಣ ಮನೆಯಲ್ಲಿ ವಾಸವಾಗಿದ್ದ. ಅವನಿಗೊಂದು ಪುಟ್ಟ ಹೊಲ ಇತ್ತು. ಅದರಲ್ಲಿ ಆತ ಎಷ್ಟೇ ದುಡಿದರೂ, ಅವನ ಮನೆಮಂದಿಯ ಹೊಟ್ಟೆ ತುಂಬಿಸೋಕೆ ಕಷ್ಟವಾಗ್ತಾ ಇತ್ತು. ಅದೇ ಊರಿನಲ್ಲಿ ಅವನ ಅಣ್ಣ ಸೋಹನ್‌ ಸಹ ವಾಸ ಮಾಡ್ತಾ ಇದ್ದ. ಅವನಿಗೆ ದೊಡ್ಡ ಹೊಲ-ಮನೆ ಎಲ್ಲವೂ ಇತ್ತು. ತಂದೆ ನೀಡಿದ್ದ ಆಸ್ತಿಯಲ್ಲಿನ ಹೆಚ್ಚಿನ ಭಾಗವನ್ನು ಮೋಹನನಿಗೆ ಕೊಡದೆ, ಅಣ್ಣ ತಾನೇ ಇರಿಸಿಕೊಂಡಿದ್ದರಿಂದ ಒಬ್ಬ ಬಡವನಾಗಿದ್ದ, ಇನ್ನೊಬ್ಬ ಶ್ರೀಮಂತನಾಗಿದ್ದ. ಬರುವ ಆದಾಯ ಸಾಲದೆ, ಸದಾ ಕಾಲ ಮಕ್ಕಳನ್ನು ಅರ್ಧ ಹೊಟ್ಟೆಯಲ್ಲಿ ಮಲಗಿಸೋದಕ್ಕೆ ಮೋಹನನ ಹೆಂಡತಿ ಸೇವಂತಿಗೆ ಸಂಕಟ ಆಗ್ತಾ ಇತ್ತು. ಆದರೆ ಮಾಡೋದೇನು? ಒಂದು ದಿನ- “ಏನ್ರೀ, ಈ ಉಪವಾಸ- ವನವಾಸ ನಂಗೂ ಸಾಕಾಗೋಗಿದೆ. ನಿಮ್ಮ ತಂದೆಯಿಂದ ಬರಬೇಕಾಗಿದ್ದ ನಮ್ಮ ಪಾಲಿನ ಸಂಪತ್ತನ್ನು ಕೊಡು ಅಂತ ಅಣ್ಣನನ್ನೇ ಕೇಳಿ, ಹೋಗಿ” ಅಂತ ಮೋಹನನಿಗೆ ಸೇವಂತಿ ಹೇಳಿದಳು. ಅವನೇನು ಈವರೆಗೆ ಕೇಳಿಯೇ ಇಲ್ಲ ಅಂತಲ್ಲ. ಕೇಳಿದರೂ ಆತ ಕೊಟ್ಟಿರಲಿಲ್ಲ. ಇನ್ನೂ ಒಂದು ಪ್ರಯತ್ನ ಮಾಡೋಣ ಅಂತ ಮೋಹನನಿಗೆ ಅನ್ನಿಸಿತು. (Kids Story ) ನೇರ ಹೋದ ಅಣ್ಣನ ಮನೆಗೆ.

“ಅಣ್ಣಾ, ನಮಗೂ ಈ ಉಪವಾಸ-ವನವಾಸ ಮಾಡಿ ಸಾಕಾಗೋಗಿದೆ. ಇರುವ ಸಣ್ಣ ಹೊಲದಲ್ಲಿ ಎಷ್ಟು ದುಡಿದರೂ ಸಾಕಾಗ್ತಾ ಇಲ್ಲ. ನಮ್ಮಿಬ್ಬರಿಗೂ ಸಮನಾಗಿ ಸಂಪತ್ತನ್ನು ಅಪ್ಪ ಕೊಟ್ಟಿದ್ದಲ್ಲವೇ? ನನ್ನ ಪಾಲಿನ ಸಂಪತ್ತನ್ನು ನಂಗೇ ಕೊಡು” ಅಂತ ಕೇಳಿದ ಮೋಹನ. ಅದಕ್ಕೆ ಅಣ್ಣ ಸೋಹನ್‌ಗೆ ಸಿಟ್ಟು ಬಂತು. ʻಎಲಾ ಇವನಾ! ಸಂಪತ್ತು ಬೇಕಾ? ಮಾಡ್ತೀನಿ ಇರುʼ ಅಂತ ಲೆಕ್ಕ ಹಾಕಿ, “ಅರೆ! ಅಪ್ಪನ ಸಂಪತ್ತನ್ನು ತಗೊಳ್ಳೋದು ಅಷ್ಟು ಸುಲಭ ಅಂತ ತಿಳೀಬೇಡ. ರಾಮಾಯಣದ ರಾಮನಿಗೇ ವನವಾಸ ತಪ್ಪಲಿಲ್ಲ, ಇನ್ನು ನಿನ್ನ ಉಪವಾಸ-ವನವಾಸ ಏನು ಮಹಾ! ಇದನ್ನೆಲ್ಲ ತಪ್ಪಿಸಿಕೊಳ್ಳಬೇಕಾದರೆ ಏನು ಮಾಡಬೇಕು ಅನ್ನೋದನ್ನ ಶ್ರೀರಾಮನನ್ನೇ ಕೇಳಬೇಕು ನೀನು. ನನ್ನ ಕೇಳಿದ್ರೆ… ನಾನೇನು ಮಾಡ್ಲಿ?” ಅಂತ ಬಾಗಿಲು ಹಾಕಿಬಿಟ್ಟ. ಮೋಹನನಿಗೆ ಸಿಕ್ಕಾಪಟ್ಟೆ ಬೇಸರ ಆಯ್ತು. ಎಷ್ಟು ಖೊಟ್ಟಿ ಅದೃಷ್ಟ ತನ್ನದು ಅಂದ ಹಲುಬುತ್ತಾ ಮನೆಗೆ ಬಂದ.

ಈ ವಿಷಯವನ್ನೆಲ್ಲ ಕೇಳಿ ತಿಳಿದುಕೊಂಡಳು ಸೇವಂತಿ. ಮೋಹನನಿಗೆ ರೊಟ್ಟಿ ಬುತ್ತಿ ಕಟ್ಟಿದಳು. ಅದನ್ನು ಅವನ ಕೈಗಿಟ್ಟು, ʻಈ ಊರಲ್ಲಿ ಅಲ್ಲದಿದ್ದರೆ ಬೇರೆ ಊರಲ್ಲಾದರೂ ಒಳ್ಳೆಯ ಕೆಲಸ ಸಿಗತ್ತಾ ನೋಡು, ಹೋಗಿ ಅದೃಷ್ಟ ಪರೀಕ್ಷೆ ಮಾಡುʼ ಅಂತ ಹೇಳಿದಳು. ಸರಿ, ಬುತ್ತಿಗಂಟನ್ನು ಹಿಡಿದ ಮೋಹನ ಮನೆಯಿಂದ ಹೊರಟೇಬಿಟ್ಟ. ನಸುಕಿನ ಹೊತ್ತಿಗೇ ಮನೆ ಬಿಟ್ಟಿದ್ದ ಆತ, ಬಿಸಿಲು ಸುಡುವಂಥ ನಡು ಮಧ್ಯಾಹ್ನದ ಹೊತ್ತಿಗೆ ದೊಡ್ಡ ಕಾಡೊಂದನ್ನು ಸೇರಿ ಮುಂದೆ ನಡೆದ. ಸಂಜೆ ಅನ್ನುವಷ್ಟರಲ್ಲಿ ಬೆಳಗಿನಿಂದ ನಡೆದೂ ನಡೆದು ಆಯಾಸವಾಗಿತ್ತು, ಹಸಿವೆಯೂ ಆಗಿತ್ತು. ದೊಡ್ಡ ಮರವೊಂದರ ಕೆಳಗೆ ಕುಳಿತ. ಅಲ್ಲಿಯೇ ಪಕ್ಕದಲ್ಲಿ ವ್ಯಕ್ತಿಯೊಬ್ಬ ಮಲಗಿರುವುದು ಕಂಡುಬಂತು. ನೋಡುವುದಕ್ಕೆ ಸನ್ಯಾಸಿಯಂತೆ ಕಾಣುತ್ತಿದ್ದ. ಆತನಿಗೆ ವಯಸ್ಸಾಗಿತ್ತು, ಕೃಷವಾಗಿದ್ದ. ನಿದ್ದೆ ಬಂದು ಮಲಗಿದ್ದಾನೋ ಅಥವಾ ಏಳುವುದಕ್ಕೆ ಆಗದೆ ಮಲಗಿದ್ದಾನೊ ಎಂಬುದು ಮೋಹನನಿಗೆ ತಿಳಿಯಲಿಲ್ಲ. ಅಷ್ಟರಲ್ಲಿ ಆತ ಏನೋ ಕನವರಿಸುತ್ತಿರುವಂತೆ ಕೇಳಿಸಿತು. ಮೋಹನ ಕಿವಿಗೊಟ್ಟು ಆಲಿಸಿದ. ಮಲಗಿದ್ದ ವ್ಯಕ್ತಿಯು ʻನೀರು… ನೀರುʼ ಎಂದು ನರಳುತ್ತಿದ್ದ. ಬಹುಶಃ ಬಾಯಾರಿಕೆಯಿಂದ ಈತ ಅಸ್ವಸ್ಥನಾಗಿರಬೇಕು ಎಂದುಕೊಂಡ ಮೋಹನ, ತನ್ನಲ್ಲಿದ್ದ ನೀರು ಕುಡಿಸಿದ; ಒಂದಿಷ್ಟು ದೊಡ್ಡ ಎಲೆಗಳನ್ನು ಜೋಡಿಸಿಕೊಂಡು ಗಾಳಿ ಹಾಕಿದ. ಕೆಲವೇ ನಿಮಿಷಗಳಲ್ಲಿ ಮಲಗಿದ್ದ ಸನ್ಯಾಸಿ ಚೇತರಿಸಿಕೊಂಡು ಎದ್ದು ಕುಳಿತ. ಆತನಿಗೆ ತನ್ನಲ್ಲಿದ್ದ ಬುತ್ತಿಯಿಂದ ರೊಟ್ಟಿಯೊಂದನ್ನು ತಿನ್ನುವುದಕ್ಕೆ ಕೊಟ್ಟ ಮೋಹನ. ರೊಟ್ಟಿ ತಿಂದ ಮೇಲೆ ಆ ಮುದುಕ ಸನ್ಯಾಸಿ ಮಾತನಾಡಲಾರಂಭಿಸಿದ.

ಇದನ್ನೂ ಓದಿ: Kids Story Kannada : ಒಳ್ಳೆಯ ಬುದ್ಧಿ ತೋರಿಸಿದ ಭೋಲಾನಿಗೆ ಏನಾಯ್ತು?

“ಅಯ್ಯಾ ಪುಣ್ಯಾತ್ಮ, ಇವತ್ತು ನನ್ನ ಜೀವ ಉಳಿಸಿದೆ ನೀನು. ಹಸಿವೆ, ಬಾಯಾರಿಕೆಯಿಂದ ಮುಂದೆ ನಡೆಯೋದಕ್ಕೂ ಆಗದಷ್ಟು ನಿತ್ರಾಣನಾಗಿದ್ದೆ. ನಿನ್ನ ಈ ಉಪಕಾರಕ್ಕೆ ಪ್ರತಿಯಾಗಿ ನಾನೇನಾದರೂ ಮಾಡಬೇಕಲ್ಲ?” ಕೇಳಿದ ಆತ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ತನ್ನ ಕರ್ತವ್ಯವಾಗಿತ್ತು. ಹಾಗೆಲ್ಲ ಏನನ್ನೂ ಬಯಸಿ ನೆರವು ನೀಡಲಿಲ್ಲ ಎಂದು ಮೋಹನ ವಿನಯದಿಂದ ಹೇಳಿದ. “ಈ ಘೋರಡವಿಯಲ್ಲಿ ಏನು ಮಾಡ್ತಾ ಇದ್ದೀಯಪ್ಪ ನೀನು? ಯಾಕಾಗಿ ಇಲ್ಲಿಗೆ ಬಂದೆ?” ಕೇಳಿದ ಸನ್ಯಾಸಿ. ಆತನಿಗೆ ತನ್ನ ಕಥೆಯನ್ನೆಲ್ಲ ಹೇಳಿದ ಮೋಹನ. ಆ ಕಥೆಯನ್ನು ಕೇಳುತ್ತಾ ಅವರು ಆ ಸನ್ಯಾಸಿಯ ಪರ್ಣಕುಟಿಯನ್ನು ತಲುಪಿದರು. ರಾತ್ರಿಯನ್ನು ತನ್ನ ಕುಟೀರದಲ್ಲೇ ಕಳೆಯಬಹುದು ಅಂತ ಹೇಳಿದ ಸನ್ಯಾಸಿ. ಜೊತೆಗೆ, “ಕಷ್ಟದಲ್ಲಿರೊ ನಿನಗೆ ನೆರವಾಗುವುದು ನನಗೂ ಕರ್ತವ್ಯವೇ” ಎಂದು ಹೇಳಿ, ತನ್ನ ಜೋಳಿಗೆಯಿಂದ ಶಂಖವೊಂದನ್ನು ತೆಗೆದ. “ಇದು ಮಾಯಾ ಶಂಖ. ಇದನ್ನು ಊದುವ ಕ್ರಮವನ್ನೂ ಹೇಳಿಕೊಡ್ತೀನಿ. ಆ ಕ್ರಮದಲ್ಲಿ ಇದನ್ನು ಊದಿ, ಮನಸಲ್ಲಿ ಇದ್ದಿದ್ದನ್ನು ಪ್ರಾಮಾಣಿಕ ಭಾವದಿಂದ ಕೇಳಿದರೆ, ಅದೆಲ್ಲ ಒದಗುತ್ತದೆ ನಿನಗೆ. ತಪ್ಪಾಗಿ ಊದಿದರೆ ಎಡವಟ್ಟಾಗತ್ತ, ಮಾತ್ರವಲ್ಲ ದುಷ್ಟ ಕೆಲಸಕ್ಕೆ ಇದು ಒದಗುವುದಿಲ್ಲ” ಎಂದು ಶಂಖವನ್ನು ಕೈಗಿತ್ತ ಸನ್ಯಾಸಿ. “ಈಗ ರಾತ್ರಿಯಾಯಿತು, ಮಲಗು. ಬೆಳಗ್ಗೆ ಇದನ್ನು ಊದುವುದನ್ನು ಹೇಳಿಕೊಡ್ತೀನಿ” ಎಂದು ಹೇಳಿದ. ಬೆಳಗ್ಗೆ ಆ ಶಂಖ ಊದುವ ಕ್ರಮವನ್ನೂ ಹೇಳಿಕೊಟ್ಟು, ʻಒಳ್ಳೇಯದಾಗಲಿʼ ಅಂತ ಹರಸಿ, ಮೋಹನನನ್ನು ಕಳುಹಿಸಿಕೊಟ್ಟ ವೃದ್ಧ ಸನ್ಯಾಸಿ.

ಖುಷಿಯಿಂದ ಮನೆಗೆ ಬಂದ ಮೋಹನ. ವಿಷಯವನ್ನೆಲ್ಲ ತಿಳಿದ ಸೇವಂತಿಯೂ ಹಿಗ್ಗಿದಳು. ಮಾಯಾಶಂಖದ ಬಳಿ, ಮೊದಲು ಮನೆಮಂದಿಗೆಲ್ಲ ಹೊಟ್ಟೆ ತುಂಬ ಊಟ ಕೇಳಿದರು. ಎಲ್ಲರಿಗೂ ಒಳ್ಳೆಯ ಬಟ್ಟೆಗಳನ್ನು ಕೇಳಿದರು. ಮನೆಯ ಕೊಟ್ಟಿಗೆಯ ತುಂಬ ಹಸುಗಳು, ಹೊಲದ ತುಂಬಾ ಪೈರು ಕೇಳಿದರು. ಇವೆಲ್ಲವೂ ಅವರಿಗೆ ದೊರೆತವು. ಇಷ್ಟೆಲ್ಲ ಬದಲಾವಣೆಗಳು ಊರಿನಲ್ಲಿ ಹೆಚ್ಚಿನವರ ಗಮನಕ್ಕೆ ಬರಲಿಲ್ಲ. ಆದರೆ ಅವರು ಯಾವಾಗ ಸಣ್ಣ ಹಳೆಯ ಮನೆಯ ಬದಲಿಗೆ ದೊಡ್ಡ, ಹೊಸ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದು ಊರೆಲ್ಲ ಸುದ್ದಿಯಾಯಿತೊ, ಅಣ್ಣ ಸೋಹನ್‌ಗೂ ಇದು ತಿಳಿಯಿತು. ತಮ್ಮನ ಹೊಸ ಮನೆಯನ್ನು ನೋಡುವ ನೆವ ಮಾಡಿಕೊಂಡು ಮೋಹನನ ಮನೆಗೆ ಬಂದ.

ತಮ್ಮನ ಮನೆಯ ಸಂಪತ್ತನ್ನೆಲ್ಲ ನೋಡಿದ ಸೋಹನ್‌ಗೆ ಹೊಟ್ಟೆಯಲ್ಲಿ ಬೆಂಕಿ ಎದ್ದಂತಾಯ್ತು. ಇಷ್ಟೆಲ್ಲ ಗಳಿಸುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ತಮ್ಮನನ್ನು ಕೇಳಿದ. ಸನ್ಯಾಸಿ ತನಗೆ ಶಂಖವನ್ನು ನೀಡಿದ ಕಥೆಯನ್ನೆಲ್ಲ ಅಣ್ಣನಿಗೆ ಹೇಳಿದ ಮೋಹನ. ಮನೆ ನೋಡುವ ನೆವ ಮಾಡಿಕೊಂಡು ಅವರ ಮನೆಗೆ ಹೋಗಿ, ಆ ಶಂಖವನ್ನು ಕದ್ದುಕೊಂಡು ಬರುವಂತೆ ತನ್ನ ಹೆಂಡತಿಗೆ ಸೂಚಿಸಿದ ಸೋಹನ್‌. ಆತನ ಹೆಂಡತಿ ಅದನ್ನೇ ಮಾಡಿದಳು. ಮನೆಗೆ ಬಂದ ಮಾಯಾಶಂಖವನ್ನು ತನಗೆ ತಿಳಿದಂತೆ ಊದಿದ ಸೋಹನ್‌, ತಮ್ಮನ ಹೊಲದ ಪೈರೆಲ್ಲ ಒಣಗಿ ಹೋಗಲಿ ಎಂದ. ಆತ ತಪ್ಪಾಗಿ ಊದಿದ್ದರಿಂದ ಮೋಹನನ ಹೊಲಕ್ಕೆ ಏನೂ ಆಗಲಿಲ್ಲ; ಅಷ್ಟೇ ಅಲ್ಲ, ಆತನದ್ದು ದುಷ್ಟ ಕೆಲಸವಾದ್ದರಿಂದ ಸೋಹನ್‌ನ ಹೊಲವೇ ಒಣಗಿಹೋಯಿತು. ಸಿಟ್ಟಿಗೆದ್ದ ಅಣ್ಣ ಮತ್ತೊಮ್ಮೆ ಪ್ರಯತ್ನಿಸಿದ.

ತಮ್ಮನ ಮನೆ ಮುರಿದು ಬೀಳಲಿ ಎಂದು ಆಶಿಸಿ, ಶಂಖ ಊದಿದ. ಆತನ ಕಣ್ಣೆದುರಿಗೇ ಆತನ ಮನೆ ಕುಸಿದುಬಿತ್ತು. ಇರುವುದಕ್ಕೆ ಸೂರಿಲ್ಲದೆ, ತಿನ್ನುವುದಕ್ಕೆ ಹೊಲದಲ್ಲಿ ಏನೂ ಇಲ್ಲದೆ. ಆತನ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಅನಿವಾರ್ಯವಾಗಿ ತಮ್ಮನ ಬಳಿಗೆ ಹೋಗಿ ಗೋಳಾಡುತ್ತಾ ತನ್ನ ತಪ್ಪೊಪ್ಪಿಕೊಂಡ ಸೋಹನ್‌. ಅಣ್ಣನ ತಪ್ಪನ್ನು ಕ್ಷಮಿಸಿ, ಆತನಿಗೆ ತನ್ನ ಮಾಯಾಶಂಖದ ಮೂಲಕ ಹೊಲ-ಮನೆಗಳನ್ನು ದೊರಕಿಸಿಕೊಟ್ಟ ತಮ್ಮ. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ, ಇಷ್ಟಾದ ಮೇಲೆ ತನ್ನ ದುಷ್ಟ ಬುದ್ಧಿಯನ್ನೆಲ್ಲ ಬದಿಗಿಟ್ಟು ಒಳ್ಳೆಯವನಾಗಿ ಬದುಕಿದ ಅಣ್ಣ.