Sunday, 15th December 2024

ಕರೋನಾ ಸೃಷ್ಟಿಸಿರುವ ಮತ್ತೊಂದು ಸಮಸ್ಯೆ

ಕರೋನಾ ರೋಗದಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಜನಜೀವನದ ಮೇಲೆ ಕರೋನಾ ನಾನಾ ರೀತಿಯ ಸಂಕಷ್ಟಗಳನ್ನು, ಸಮಸ್ಯೆಉಂಟುಮಾಡಿರುವುದರ ಜತೆಗೆ ಜೀವನ ಶೈಲಿಯನ್ನು ಸಹ ಬದಲಾಯಿಸಿದೆ.

ಕರೋನಾಗಮನದ ನಂತರ ಬಹುತೇಕರ ಜೀವನ ಶೈಲಿಯಲ್ಲಿ ಬದಲಾವಣೆಗಳಾಗಿವೆ. ಕೆಲವರ ವಾದಗಳ ಪ್ರಕಾರ ಕರೋನಾದ ಆಗಮನದಿಂದಾಗಿ ಸ್ವಚ್ಛತೆಯ ಪ್ರಾಮುಖ್ಯತೆ, ಅರಿವು, ಆದ್ಯತೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ ಅಲ್ಪಪ್ರಮಾಣದಲ್ಲಿ ಸ್ವಚ್ಛತೆಯ ಮಹತ್ವ ಹೆಚ್ಚಾಗಿದೆ ಯಾದರೂ, ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕ್ಕೆ ಕಾರಣವಾಗಿರುವುದರ ಬಗ್ಗೆ ಗಮನಹರಿಸಬೇಕಿರುವುದು ಮುಖ್ಯ. ಸೋಂಕಿನ ತಡೆ ನಿಟ್ಟಿನಲ್ಲಿ ಯೂಸ್ ಅಂಡ್ ಥ್ರೊ ವಸ್ತುಗಳ ಬಳಕೆ ಹೆಚ್ಚಳವಾಗಿದೆ.

ಇದರಿಂದ ತ್ಯಾಜ್ಯದ ಉತ್ಪತ್ತಿಯ ಪ್ರಮಾಣವೂ ಹೆಚ್ಚಳವಾಗಿದೆ. ಮತ್ತೊಂದೆಡೆ ವೈದ್ಯಕೀಯ ತ್ಯಾಜ್ಯದ ಪ್ರಮಾಣದ ಉತ್ಪತ್ತಿ ಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ಈ ಬೆಳವಣಿಗೆಯಿಂದ ಕರೋನಾ ಉಂಟುಮಾಡಿರುವ ಸಮಸ್ಯೆಗಳ ಮತ್ತೊಂದು ಮಗ್ಗಲನ್ನು ಕಾಣಬಹುದು. ಇದೀಗ ಕರೋನಾ ಸೋಂಕಿನ ತಡೆ ಜತೆಗೆ ತ್ಯಾಜ್ಯ ನಿರ್ಮೂಲನೆ ತಡೆಗೂ ಆದ್ಯತೆ ನೀಡಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ. ದೇಶಾದ್ಯಂತ ಕಳೆದ ನಾಲ್ಕು ತಿಂಗಳಲ್ಲಿ ಕೋವಿಡ್-19 ಗೆಸಂಬಂಧಿಸಿದಂತೆ 18006 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ.

ಸೆಪ್ಟೆಂಬರ್ ಮಾಸವೊಂದರಲ್ಲಿಯೇ ೫೫೦೦ ಟನ್ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗಿದೆ. ದೇಶದ ೧೯೮ ವೈದ್ಯಕೀಯ ತ್ಯಾಜ್ಯ ಘಟಕಗಳಿಂದ ಮಾತ್ರವೇ ಇಷ್ಟೊಂದು ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಉಳಿದಂತೆ ಜನಜೀವನದಲ್ಲಿ ಬಳಸಲ್ಪಡು ತ್ತಿರುವ ಯೂಸ್ ಅಂಡ್ ಥ್ರೊ ವಸ್ತುಗಳ ಪ್ರಮಾಣವನ್ನು ಲೆಕ್ಕಹಾಕಿದ್ದರೆ ಪ್ರಮಾಣ ಇನ್ನೂ ಹೆಚ್ಚಳವಾಗಲಿದೆ. ಕೋವಿಡ್ ತ್ಯಾಜ್ಯ ಉತ್ಪತ್ತಿಯಲ್ಲಿ ಮಹಾರಾಷ್ಟ್ರ ಮೊದಲನೆ ಸ್ಥಾನದಲ್ಲಿದ್ದು, ಇದೊಂದು ರಾಜ್ಯದಲ್ಲಿಯೇ ೩೫೮೭ ಟನ್ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ.

ಪ್ರಸ್ತುತ ತಮಿಳುನಾಡು, ಗುಜರಾತ್, ಕೇರಳ, ಉತ್ತರಪ್ರದೇಶ, ದೆಹಲಿಗೆ ಹೋಲಿಸಿದರೆ ಕರ್ನಾಟಕದ ಪ್ರಮಾಣ ಕಡಿಮೆ ಎಂಬುದು ಸ್ವಲ್ಪ ನಿರಾಳತೆಯ ಸಂಗತಿ.