ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಈ ದಿನ ಶಾಸಕ
ನಾರಾಯಣರಾವ್ ಅವರೂ ಕೋವಿಡ್ಗೆ ಬಲಿಯಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರೂ ಕರೋನಾದಿಂದಲೇ ಮೃತಪಟ್ಟಿದ್ದರು. ಇದಕ್ಕೆ ಮೊದಲು ಇಬ್ಬರು ಲೋಕಸಭೆ ಸದಸ್ಯರೂ ಕರೋನಾದಿಂದ ಮರಣ ಹೊಂದಿದ್ದಾರೆ. ಇವರ ಸಾವಿನಿಂದ ತುಂಬಲಾರದ ನಷ್ಟ ಎಂದೆಲ್ಲ ಸಂತಾಪ ಸೂಚಿಸಿ, ಶ್ರದ್ದಾಂಜಲಿ ಸಲ್ಲಿಸಿ ಸುಮ್ಮನಾಗುವ ವಿಷಯ ಇದಲ್ಲ. ಏಕೆಂದರೆ 30 ಸಂಸದರಲ್ಲಿ ಪಾಸಿಟಿವ್ ಕಂಡು ಬಂದಿದೆ.
ರಾಜ್ಯದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ ಅನೇಕ ಶಾಸಕರು, ಕೆಲವು ಸಚಿವರು ಕರೋನಾ ಪೀಡಿತರಾಗಿದ್ದಾರೆ. ಹಾಗೆ ನೋಡಿ ದರೆ ಇವರೆಲ್ಲ ಜನಪ್ರತಿನಿಧಿಗಳು. ಇವರಿಗೆ ಉತ್ತಮ ಆರೋಗ್ಯ ಸೇವೆ ಮತ್ತಿತರ ಸೌಲಭ್ಯ ಉಂಟು. ಆದರೆ ಸಚಿವ ಅಂಗಡಿ ಸೇರಿ ದಂತೆ ನಾಲ್ವರು ಸಂಸದರು, ಅನೇಕ ರಾಜ್ಯಗಳಲ್ಲಿ ಜನಪ್ರತಿನಿಧಿಗಳು ಇದಕ್ಕೆ ಬಲಿಯಾಗಿದ್ದಾರೆ. ಅಧಿಕಾರ ಇರುವವವರು, ಇಲ್ಲದವರು; ಶ್ರೀಮಂತರು, ಬಡವರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಯಾವುದೇ ಪರಿಗಣನೆ ಇಲ್ಲದೆ ಎಲ್ಲರನ್ನೂ
ಸೋಂಕುತ್ತದೆ. ಇದೇ ವೇಳೆ ದೇಶಾದ್ಯಂತ ಕರೋನಾ ಸೋಂಕಿನ ಪ್ರಮಾಣ ದಿನೇ ದಿನೇ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಅಷ್ಟೇ ಏಕೆ ವಿಶ್ವದ ಹಲವು ದೇಶಗಳಲ್ಲಿ ಕರೋನಾ ಸೋಂಕಿನ ಎರಡನೇ ಅಲೆ ಏಳುತ್ತಿದೆ.
ಬ್ರಿಟನ್ ಮತ್ತಿತರ ದೇಶಗಳು ಎರಡನೇ ಸುತ್ತಿನ ಲಾಕ್ಡೌನ್ ಮತ್ತಿತರ ನಿರ್ಬಂಧಗಳನ್ನು ವಿಧಿಸುತ್ತಿದೆ. ನಿನ್ನೆೆ ತಾನೇ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳ ಜತೆ ನಡೆಸಿದ ಸಬೆಯಲ್ಲಿ ಸೋಂಕು ಹೆಚ್ಚುವ ಅಪಾಯ ಹಾಗೂ ಅದನ್ನು ನಿಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಇದೆಲ್ಲದರ ತಾತ್ಪರ್ಯ ಇಷ್ಟೇ. ಕರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿ ಆರು ತಿಂಗಳು ಕಳೆದಿರುವ ಈ ಹೊತ್ತಿನಲ್ಲಿ ನಾವು ಆತ್ಮ ಮತ್ತು ಬಾಹ್ಯ ವಿಮರ್ಶೆಗಳೆರಡನ್ನೂ ಮಾಡಬೇಕಾದ ಅನಿವಾರ್ಯತೆ ಇದೆ. ಆರ್ಥಿಕ ಕಾರಣದಿಂದಾಗಿ ಲಾಕ್ಡೌನ್ ತೆರವುಗೊಳಿಸಿದ ಬಳಿಕ ಎಲ್ಲ ಚಟುವಟಿಕೆಗಳು ಪುನರಾರಂಭವಾಗಿವೆ. ಕರೋನಾ ಅನಿಯಂತ್ರಿತವಾಗಿ ಹರಡಲು ಎಲ್ಲ ಅವಕಾಶಗಳು ಇವೆ.
ಜನರೂ ಕೂಡ ಮೈಮರೆತವರಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಸರಕಾರ ಈ ಸಂದರ್ಭದಲ್ಲಿ ಕರೋನಾ ಸ್ಥಿತಿಯನ್ನು ನಿಯಂತ್ರಿ ಸಲು ಮತ್ತಷ್ಟು ಕಠಿಣ ಮತ್ತು ಹೊಸ ಕ್ರಮಗಳನ್ನು ಕೈಗೊಳ್ಳಬೇಕು. ಏಕೆಂದರೆ ’ಜೀವ ಇದ್ದರೆ ಜೀವನ’ ಎಂಬ ಪ್ರಧಾನಿಯವರ ಮಾತು ಅತ್ಯಂತ ಪ್ರಸ್ತುತವಾದುದಾಗಿದೆ.