Thursday, 12th December 2024

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ ಅಗತ್ಯ ವಿಲ್ಲ.

ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸ್ಪಷ್ಟನೆ ನೀಡಿದ್ದು, ವೈದ್ಯಕೀಯ ಇಲಾಖೆ ಹಾಗೂ ಸರಕಾರದ ಹೊರತಾಗಿ ಇತರ ಮೂಲಗಳ ಹೇಳಿಕೆಗಳ ಬಗ್ಗೆ ಜನತೆ ಗಮನಹರಿಸದಿರುವುದು ಮುಖ್ಯ. ಆದರೆ ಲಸಿಕೆ ಪಡೆದ ನಂತರ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜನತೆ ಮಾಹಿತಿಪಡೆಯುವುದು ಹಾಗೂ ಅದನ್ನು
ಪಾಲಿಸುವುದು ಮುಖ್ಯ.

ಕೋವಿಡ್-19 ನಿವಾರಣೆ ಜತೆಗೆ ಹೊಸ ಅಲೆಯ ಆತಂಕ ಹೆಚ್ಚುತ್ತಿರುವ ದಿನಗಳಲ್ಲಿ ಈ ಲಸಿಕೆಗಳಿಗೆ ದೊರೆತಿರುವ ಅನುಮತಿ
ಭಾರತದ ಪಾಲಿಗೆ ಸಕಾಲಿಕ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದ್ದು, ಒಂದೇ ಸಂದರ್ಭದಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಮತ್ತಷ್ಟು ಮಹತ್ವ.

ನೋವು, ಅಲರ್ಜಿಯಂಥ ಸಣ್ಣ ವ್ಯತ್ಯಾಸಗಳ ಸಾಧ್ಯತೆಗಳು ಎಲ್ಲಾ ರೀತಿಯ ಲಸಿಕೆಗಳಲ್ಲಿಯೂ ಸಾಮಾನ್ಯ. ಸುರಕ್ಷತೆಯ ನಿಟ್ಟಿ ನಲ್ಲಿ ಬಹಳಷ್ಟು ಪ್ರಯೋಗಗಳನ್ನು ನಡೆಸಲಾಗಿದ್ದು, ಈ ಕುರಿತು ಆತಂಕದ ಅಗತ್ಯವಿಲ್ಲ ಎಂದು ಸರಕಾರ ಸ್ಪಷ್ಟನೆ ನೀಡಿದೆ. ಪ್ರಸ್ತುತದ ಆತಂಕದ ಪರಿಸ್ಥಿತಿಯಲ್ಲಿ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿರುವ ಭಾರತ ಸರಕಾರದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಸ್ವಾಗತಿಸಿದೆ.

ಹೊಸ ವರ್ಷವನ್ನು ಸ್ವಾಗತಿಸುತ್ತಿರುವ ಈ ವೇಳೆ, ಹೊಸ ಬೆಳಕಿನಂತೆ ಕಂಡುಬಂದಿರುವ ಈ ಲಸಿಕೆಗಳ ಬಗ್ಗೆ ಆತಂಕ, ಗೊಂದಲ, ರಾಜಕೀಯ, ವಿವಾದಗಳಿಗಿಂತಲೂ ಮುಖ್ಯವಾಗಿ ಲಸಿಕೆ ಪಡೆಯುವುದು ಹಾಗೂ ವೈದ್ಯಕೀಯ ಇಲಾಖೆ ಸೂಚಿಸುವ ಸುರಕ್ಷತಾ
ನಿಯಮಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಹೊಣೆ.