Friday, 20th September 2024

ಕೃಷಿ ಕಾಯಕಕ್ಕೂ ಪೂರ್ಣ ಪ್ರಮಾಣದ ವಿದ್ಯುತ್ ಸಿಗಲಿ

ಸಚಿವರಾದ ದಿನದಿಂದಲೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಚಿವ ಸುನೀಲ್ ಕುಮಾರ್ ಅವರು ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಘೋಷಿಸಿರುವುದು ಸ್ವಾಗತಾರ್ಹ.

ಇಂಧನ ಇಲಾಖೆ ಈ ನಾಡಿನ ರೈತರಿಗೆ ಬಹಳ ಹತ್ತಿರವಾದ ಇಲಾಖೆ ಆಗಿದೆ. ಕೃಷಿ, ಪಶುಸಂಗೋಪನೆಯು ಇಂದಿನ ದಿನಗಳಲ್ಲಿ ವಿದ್ಯುತ್‌ನ್ನು ಅವಲಂಬಿಸಿದೆ ಎಂಬುದು ಈ ಹಿಂದಿನ ಸರಕಾರಗಳಿಗೆ, ಇಂಧನ ಸಚಿವರಿಗೆ ಗೊತ್ತಿದ್ದರೂ ಯಾರೊಬ್ಬರೂ ಕೃಷಿ ಕಾಯಕಕ್ಕೆ ಅಗತ್ಯವಾದ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಸುವ ಯಾವ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಈವರೆಗೂ ಹೆಚ್ಚಿನ ಸಂದರ್ಭಗಳಲ್ಲಿ ಕೈಗಾರಿಕೆಗಳಿಗೆ ಮಾತ್ರ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಿ ನೀರಾವರಿ ಪಂಪ್‌ಸೆಟ್‌ಗಳ ಬಳಕೆಗೆ ಹೆಚ್ಚು ಅವಧಿಯ ಗುಣಮಟ್ಟದ ವಿದ್ಯುತ್ ಪೂರೈಕೆಯಾದದ್ದು ತೀರಾ ಕಡಿಮೆ.

ಇದೀಗ ರಾಜ್ಯದಲ್ಲಿ ಬಹುತೇಕ ಅಣೆಕಟ್ಟೆಗಳು ಭರ್ತಿಯಾಗಿವೆ. ಜಲ ವಿದ್ಯುತ್ ಘಟಕಗಳಲ್ಲಿ ಸಾಮರ್ಥ್ಯದ ಪೂರ್ಣ ಪ್ರಮಾಣದಷ್ಟು ಉತ್ಪಾದನೆ ಆಗುತ್ತಿದೆ. ಸೌರಶಕ್ತಿ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲೂ ಹಲವು ಪಟ್ಟು ಹೆಚ್ಚಳವಾಗಿದೆ. ರಾಜ್ಯ ಸರಕಾರದ ಒಡೆತನದ ಜಲವಿದ್ಯುದ್ ಗಾರಗಳು, ಉಷ್ಣ ವಿದ್ಯುತ್ ಸ್ಥಾವರಗಳು, ಸೌರಶಕ್ತಿ ಘಟಕಗಳು, ಪವನ ವಿದ್ಯುತ್ ಘಟಕಗಳು, ಕೇಂದ್ರ ಸರಕಾರಿ ಸ್ವಾಮ್ಯದ ಉಷ್ಣ ವಿದ್ಯುತ್ ಸ್ಥಾವರಗಳು, ಅಣು ವಿದ್ಯುತ್ ಸ್ಥಾವರಗಳು ಹಾಗೂ ಖಾಸಗಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಯಾಗುತ್ತಿದೆ.

ಒಟ್ಟು ಉತ್ಪಾದನೆ ಮತ್ತು ಪೂರೈಕೆಯ ಸಾಮರ್ಥ್ಯಕ್ಕಿಂತಲೂ ಕಡಿಮೆ ವಿದ್ಯುತ್ ಬಳಕೆಯಾಗುತ್ತಿದೆ ಎಂಬುದನ್ನು ಸರಕಾರವೇ ತಿಳಿಸಿದೆ. ಹೀಗಿರುವಾಗ ಗ್ರಾಮೀಣ ಪ್ರದೇಶದ ರೈತರಿಗೂ ದಿನದ ೨೪ ಗಂಟೆ ಪೂರ್ಣ ಪ್ರಮಾಣದ (ತ್ರಿಫೇಸ್) ವಿದ್ಯುತ್ ಪೂರೈಸುವಲ್ಲಿ ಸಚಿವ ಸುನೀಲ್ ಕುಮಾರ್ ಅವರು ಕ್ರಮ ಕೈಗೊಳ್ಳಬೇಕಿದೆ.