ಇಂದಿನಿಂದ ೨೦೨೩ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶುರುವಾಗಲಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಮಾಡಬೇಕು ಎನ್ನುವ ಹಂಬಲದ ಜತೆಗೆ ಒತ್ತಡವೂ ಇರುತ್ತದೆ.
ಒತ್ತಡಕ್ಕೆ ಮುಖ್ಯ ಕಾರಣ ತಂದೆ-ತಾಯಿಯ ನಿರೀಕ್ಷೆಗಳು. ಅನೇಕರ ಮನೆಗಳಲ್ಲಿ ಹಲವು ತಿಂಗಳುಗಳಿಂದ ಪರೀಕ್ಷೆ ಗಾಗಿ ಅಘೋಷಿತ ಕರ್ಫ್ಯು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಟಿವಿ ಕೇಬಲ್ ತೆಗೆಸಿ, ಮನರಂಜನೆಯೇ ಇರದ ಓದುವ ವಾತಾವರಣ ಮನೆಗಳಲ್ಲಿ ಸೃಷ್ಟಿಸಿರುತ್ತಾರೆ. ಪರೀಕ್ಷೆಗಳಲ್ಲಿ ಅಂಕ ಗಳಿಸುವುದು, ತೇರ್ಗಡೆ ಯಾಗುವುದು, ಜೀವನದಲ್ಲಿ ತೇರ್ಗಡೆಯಾಗುವುದಕ್ಕೆ ಸಮವೆಂದೇ ಭಾವಿಸಲಾಗಿರುತ್ತದೆ. ಪರೀಕ್ಷೆ ಎಂಬ ಕ್ರಮ ಮೌಲ್ಯಮಾಪನಕ್ಕೆ ಬೇಕೇ ಬೇಕು. ಒಂದು ನಿರ್ದಿಷ್ಟ ಹಂತದವರೆಗಿನ ಒತ್ತಡವು ವಿದ್ಯಾರ್ಥಿಗಳ ಪರೀಕ್ಷೆಯಲ್ಲಿನ ಪ್ರದರ್ಶನವನ್ನು ಉತ್ತಮ ಗೊಳಿಸುತ್ತದೆ.
ಒಂದಿಷ್ಟು ಹುರುಪು ತರುವ ಹಾರ್ಮೋನುಗಳನ್ನು ಬಿಡುಗಡೆ ಮಾಡಿ, ಏಕಾಗ್ರತೆ, ನೆನಪಿನ ಶಕ್ತಿಯನ್ನು ವಧಿಸು ತ್ತದೆ. ಆದರೆ ಸಮಸ್ಯೆ ಎದುರಾಗುವುದು, ಈ ಆತಂಕ ಒಂದು ಹಂತ ದಾಟಿದಾಗ. ಪರೀಕ್ಷೆ ದಿನವೇ ಅನೇಕ ವಿದ್ಯಾರ್ಥಿ ಗಳಲ್ಲಿ ಅನಾರೋಗ್ಯ ಸಮಸ್ಯೆಯೂ ಆಗುತ್ತದೆ. ಅದಕ್ಕೆ ಮುಖ್ಯ ಕಾರಣ ಪಾಲಕರು ಮಗುವಿನ ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಮಕ್ಕಳನ್ನು ಕಾಡುತ್ತಿರುವುದು ಪರೀಕ್ಷೆಯ ಆತಂಕವಲ್ಲ. ಪಾಲಕರ ಈ ಹೆಚ್ಚಿನ ನಿರೀಕ್ಷೆಗಳು. ಆದ್ದರಿಂದ ಪಾಲಕರಿಗೆ ತಮ್ಮ ಮಕ್ಕಳ ಸಾಮರ್ಥ್ಯ ಏನು ಎಂಬುವುದು ಅರಿವಿರುತ್ತದೆ. ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ನಿರೀಕ್ಷೆ ಇಟ್ಟುಕೊಂಡು ಮಕ್ಕಳನ್ನು ಹುರುಪಿನಿಂದ ಪರೀಕ್ಷೆಗೆ ಕಳುಹಿಸಬೇಕು.
ವಿದ್ಯಾರ್ಥಿಗಳೂ ಅಷ್ಟೆ, ನೀವು ಪರೀಕ್ಷೆ ದೃಷ್ಟಿಯಿಂದ ಪಠ್ಯದ ಕೆಲವು ವಿಷಯಗಳ ಅಧ್ಯಯನ ಮಾಡಲು ಸಾಧ್ಯವಾಗದಿರಬಹುದು. ಆದರೆ ನೀವು ಅಧ್ಯಯನ ಮಾಡಿದ್ದರಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಿ. ಇದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ನೀವು ಡಾಕ್ಟರೋ, ಎಂಜಿನಿಯರೋ ಆಗಬಹುದು, ಕಡಿಮೆ ಅಂಕ ಬಂದು ಆ ಕೋರ್ಸ್‌ಗಳಿಗೆ ನಿಮಗೆ ಪ್ರವೇಶ ಸಿಗದೇ ಇರಬಹುದು. ಅಷ್ಟಕ್ಕೇ ಜೀವನವೇ ಮುಗಿಯಿತು ಎಂದಲ್ಲ. ಇಂದಿನ ದಿನಗಳಲ್ಲಿ ಡಾಕ್ಟರ್, ಎಂಜಿನಿಯರ್‌ಗಳಿಗಿಂತ ಸಾಕಷ್ಟು ಆದಾಯ, ಗೌರವವನ್ನು ಸಂಪಾದನೆ ಮಾಡುವ ಅನೇಕ ಕೋರ್ಸ್‌ಗಳಿವೆ. ಹೀಗಾಗಿ ಈ ಪರೀಕ್ಷೆಯನ್ನು ಒತ್ತಡವಿಲ್ಲದೆ ನಿಭಾಯಿಸಿ, ಆಲ್ ದಿ ಬೆಸ್ಟ್.