Thursday, 12th December 2024

ನಿಗೂಢ ನಡೆ

ಕರೋನಾ ನಿವಾರಣೆ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರವೇನು ಎಂಬುದು ಇಂದಿಗೂ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಕರೋನಾ ವ್ಯಾಕ್ಸಿನ್ ಪ್ರಯೋಗ ಆರಂಭಿಸಿದ ಬಹುತೇಕ ದೇಶಗಳು 3ನೇ ಹಂತದ ಪ್ರಯೋಗದಲ್ಲಿವೆ.

ರಷ್ಯಾ ಮತ್ತು ಇಂಗ್ಲೆಂಡ್‌ನಲ್ಲಿ ಕರೋನಾ ವ್ಯಾಕ್ಸಿನ್‌ಗಳನ್ನು ನೀಡುವ ಪ್ರಕ್ರಿಯೆ ಆರಂಭವಾದ ನಂತರ ಬಹಳಷ್ಟು ದೇಶಗಳಲ್ಲಿ
ಸಮಾಧಾನದ ಭಾವನೆ ವ್ಯಕ್ತವಾಗುತ್ತಿದೆ. ಆದರೆ ಇದೀಗ ವಿತರಣೆಯಾಗುತ್ತಿರುವ ಲಸಿಕೆಯ ಗುಣಮಟ್ಟದ ಬಗ್ಗೆ ಇಂದಿಗೂ ಪೂರ್ಣಪ್ರಮಾಣದ ಸ್ಪಷ್ಟತೆಯಿಲ್ಲ.

ಪೈಝರ್ ಬಯೋಟೆಕ್ ಕಂಪನಿ ತಯಾರಿಸಿರುವ ಲಸಿಕೆಯನ್ನು ಇಂಗ್ಲೆಂಡ್ ರಾಣಿ 2ನೇ ಎಲಿಜೆಬತ್‌ಗೆ ನೀಡುವ ಮೂಲಕ ಇಂಗ್ಲೆಂಡ್‌ನಲ್ಲಿ ಚಾಲನೆ ನೀಡಲಾಯಿತು. ಆದರೆ ಲಸಿಕೆ ಪಡೆದ ವ್ಯಕ್ತಿಯೊಬ್ಬರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿ ರುವುದರಿಂದ ಅಲ್ಲಿನ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿರುವುದಾಗಿ ಪ್ರಕಟಿಸಿದೆ. ರಷ್ಯಾದಲ್ಲಿ ಸ್ಪುಟ್ನಿಕ್ ಲಸಿಕೆ ನೀಡುವ
ಕಾರ್ಯ ಮುಂದುವರಿದಿದೆ. ಆದರೆ ನಾಗರಿಕರಿಂದ ಗುಣಮಟ್ಟದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೆಲವರು ಲಸಿಕೆ ಪಡೆಯಲು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ವೇಳೆ ವಿವಿಧ ದೇಶಗಳ ತಜ್ಞರು ಸೇರಿ ಲಸಿಕೆಗಳ ಗುಣಮಟ್ಟದ ವೃದ್ಧಿಗೆ ಪ್ರಯತ್ನ ನಡೆಸಬಹುದಾದ ಅವಕಾಶಗಳಿವೆ. ಆದರೆ ಇದರ ಹೊರತಾಗಿ ತಜ್ಞರ ತಂಡವು ಸೋಂಕು ಕಾಣಿಸಿಕೊಂಡಿದ್ದು ಎಲ್ಲಿಂದ ಎಂದು ಪತ್ತೆ ಹಚ್ಚುವ ಕಾರ್ಯ ಆರಂಭಿಸಲು ಹೊರಟಿದೆ. ಸೋಂಕು ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್‌ನಿಂದಲ್ಲ, ಬೇರೆ ದೇಶದ ವಸ್ತುಗಳ ಮೂಲಕ ವುಹಾನ್‌ಗೆ ಆಗಮಿಸಿದೆ ಎಂಬುದು ಚೀನಾದ ವಾದ.

ಈ ಕಾರಣದಿಂದಾಗಿ ಇದೀಗ ವಿಶ್ವ ಆರೋಗ್ಯ ಸಂಸ್ಥೆ ವೈರಸ್‌ನ ಮೂಲವೊಂದನ್ನು ಪತ್ತೆ ಹಚ್ಚಲು ತನಿಖಾ ತಂಡವನ್ನು ರೂಪಿಸಿದೆ. ಈ ತಂಡವು ನಾನಾ ದೇಶಗಳ 10 ಮಂದಿ ತಜ್ಞರನ್ನು ಒಳಗೊಂಡಿದೆ. ಕರೋನಾ ಸೋಂಕು ಅನೇಕ ದೇಶಗಳಲ್ಲಿ ಅವಾಂತರ ಸೃಷ್ಟಿಸಿ, ವರ್ಷಕ್ಕೆ ಸಮೀಪಿಸುತ್ತಿರುವ ಇಂದಿನ ದಿನಗಳಲ್ಲಿ ಕೆಲವು ಬೆಳವಣಿಗಳು ಇಂದಿಗೂ ನಿಗೂಢವಾಗಿಯೇ ಉಳಿದಿದೆ.