Thursday, 12th December 2024

ಸೈನಿಕರ ಸೇವೆಗೆ ವ್ಯಕ್ತವಾಗಬೇಕಿದೆ ಶ್ಲಾಘನೆ

ಭಾರತ – ಚೀನಾ ನಡುವಿನ ಪೂರ್ವ ಭಾಗದಲ್ಲಿರುವ ಲಡಾಖ್ ಗಡಿ ವಿವಾದ ಆರಂಭಗೊಂಡ ದಿನದಿಂದ ಅದರ ವ್ಯತಿರಿಕ್ತ ಪರಿಣಾಮಗಳನ್ನು ಅನುಭವಿಸುತ್ತಿರುವುದು ಸೈನಿಕರು.

ಇದುವರೆಗೆ ಸುದೀರ್ಘ ಒಂಬತ್ತು ಸುತ್ತಿನ ಮಾತುಕತೆಗಳು ನಡೆದಿದ್ದು, ಸಂಘರ್ಷವಿನ್ನೂ ಬಗೆಹರಿಯದಾಗಿದೆ. ಚೀನಾ ತನ್ನ ಸೇನೆಯನ್ನು ಹಿಂಪಡೆಯದ ಕಾರಣ, ಭಾರತದ ರಕ್ಷಣಾ ಪಡೆಗಳಿಗೆ ಕಣ್ಗಾವಲು ಕಾಯುವ ಅನಿವಾರ್ಯತೆ ಮುಂದುವರಿದಿದೆ. ಈ ಬಿಕ್ಕಟ್ಟಿನಿಂದಾಗಿ ಎರಡೂ ದೇಶಗಳ ಯೋಧರು ಮೈನಸ್ 20ಡಿಗ್ರಿ ಸೆಲ್ಸಿಯಸ್ ಚಳಿಗಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,
ಇವರ ಶ್ರಮ ಶ್ಲಾಘನೀಯವಾಗಿದೆ.

ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವು ಸಂಭವಿಸಿದ ನಂತರದಲ್ಲಿ ಗಡಿ ವಿವಾದ ಕುರಿತು ಉಭಯ ದೇಶಗಳ ಮಾತುಕತೆಗಳು ನಿರಂತರವಾಗಿ ಮುಂದುವರಿದಿವೆ. ಬಿಕ್ಕಟ್ಟು ಮುಂದುವರಿದಿರುವುದರಿಂದಾಗಿ ಭಾರತೀಯ ನೌಕಪಡೆಯ ಸಾಗರ ಕಮಾಂಡೋ (ಮಾರ್ಕೋ)ಗಳನ್ನು ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ಬಳಿ ನಿಯೋಜಿಸಲಾಗಿದೆ.

ಭಾರತೀಯ ವಾಯುಪಡೆಯ ಗರುಡ ತುಕಡಿ ಹಾಗೂ ಪ್ಯಾರಾ ವಿಶೇಷ ಪಡೆಯ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದು ವರಿದಿರುವುದರ ಜತೆಗೆ, ಇದೀಗ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೌಕಾಪಡೆಯ ಕಮಾಂಡೋಗಳನ್ನೂ ನಿಯೋಜಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಈ ನಮ್ಮ ಭಾರತೀಯ ಸೈನಿಕರು ಹವಾಮಾನ ಬದಲಾವಣೆಗೆ ಒಗ್ಗಿಕೊಂಡು ಕರ್ತವ್ಯ ಪರಿಪಾಲನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

ಭಾರತ – ಚೀನಾ ಗಡಿಬಿಕ್ಕಟ್ಟು ಸುದೀರ್ಘ ಮಾತುಕತೆಯೊಂದಿಗೆ ಮುಂದುವರಿಯುತ್ತಲೇ ಸಾಗಿದೆಯಾದರೂ, ಅದರ ವ್ಯತಿರಿಕ್ತ ಪರಿಣಾಮ ಸೈನಿಕರ ಮೇಲೆ ಜವಾಬ್ದಾರಿ ಹೆಚ್ಚುತ್ತಾ ಸಾಗಿದೆ.