Friday, 20th September 2024

ಅಧಿಕಾರದಾಹಿತ್ವ ಹೇಳಿಕೆ

#corona

ರಾಜ್ಯ ಸರಕಾರ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಯಾವುದೇ ಸರಕಾರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರೆ ಅದರ ವ್ಯತಿರಿಕ್ತ ಪರಿಣಾಮ ಜನತೆ ಮೇಲೆ ಬೀರಲಿದೆ.

ಕೋವಿಡ್-19 ಎರಡನೆ ಅಲೆಯು ವೇಗವಾಗಿ ಹರಡುತ್ತಿರುವ ಈ ವೇಳೆ ಸರಕಾರಕ್ಕೆ ಜವಾಬ್ದಾರಿ ಹೆಚ್ಚಿದೆ. ಜನತೆಯಲ್ಲೂ ಆತಂಕ ಹೆಚ್ಚುತ್ತಿದೆ. ಈ ವೇಳೆ ಜನತೆ ಜನಪ್ರತಿನಿಧಿಗಳಿಂದ ಹೆಚ್ಚಿನ ಜವಾಬ್ದಾರಿಯುತ ನಡೆಯನ್ನು ಬಯಸುತ್ತದೆ. ಆದರೆ ಕೆಲವು
ಜನಪ್ರತಿನಿಧಿಗಳು ಸರಕಾರಕ್ಕೆ ಮುಜುಗರ ಉಂಟುಮಾಡುವಂಥ ರೀತಿಯಲ್ಲಿ ವರ್ತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಇತ್ತೀಚೆಗೆ ಸೀಡಿ ಪ್ರಕರಣದ ಕಾರಣದಿಂದ ಆಡಳಿತ ಪಕ್ಷ ಮುಜುಗರಕ್ಕೆ ಒಳಗಾಗಿತ್ತು. ಈ ಮುಜುಗರದಿಂದ ಹೊರಬರುವುದ ರೊಳಗಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಸ್ತಾಪಿಸಿರುವುದು ಮತ್ತೊಂದು
ಮುಜುಗರದ ನಡೆ. ಇಡೀ ರಾಜ್ಯ ಕೋವಿಡ್‌ನಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಚಿಂತೆಯಿಂದ ಕೂಡಿರುವಾಗ ನಾಯಕತ್ವ ಬದಲಾವಣೆಯ ಚರ್ಚೆ ಸೃಷ್ಟಿಯಾಗಿರುವುದು ಅಸಮಂಜಸ.

ಆಡಳಿತ ಪಕ್ಷ ನಾಯಕರು ಇಂಥ ಸಂದರ್ಭದಲ್ಲಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಮುಖ್ಯವಾಗಿ ಆಂತರಿಕ ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಿರುವುದು ಕಳವಳಕಾರಿ ಸಂಗತಿ. ಆಡಳಿತ ಪಕ್ಷವಾಗಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸ್ಥಾನಮಾನಕ್ಕಾಗಿ ಮನವಿ, ಒತ್ತಾಯ, ಪ್ರತಿಭಟಿಸುವುದು ಸಹಜ ಕ್ರಿಯೆ. ಆದರೆ ಅದಕ್ಕೆ ಸೂಕ್ತ ಸಮಯ ಮುಖ್ಯ. ಪ್ರಸ್ತುತ ರಾಜ್ಯ ಸರಕಾರ ಈಗಾಗಲೇ ಹಲವಾರು ಬಾರಿ ಸಚಿವ ಸಂಪುಟ ವಿಸ್ತರಣೆ ಮೂಲಕ ಜನತೆಯಲ್ಲಿ ಬೇಸರ ಮೂಡಿಸಿದೆ.

ಇದೀಗ ಇಡೀ ರಾಜ್ಯವು ಕೋವಿಡ್ ಎರಡನೆಯ ಹರಡುವಿಕೆಯ ಪರಿಣಾಮದಿಂದ ತತ್ತರಿಸುತ್ತಿರುವಾಗ ಜನಪ್ರತಿನಿಧಿಗಳು ನಾಯಕತ್ವ ಬದಲಾವಣೆಯಂಥ ವಿಷಯಗಳನ್ನು ಬಹಿರಂಗಗೊಳಿಸಿರುವುದು ಜನರ ಸಮಸ್ಯೆಗಳಿಗಿಂತ ಅಧಿಕಾರ ದಾಹಿತ್ವವೇ ಮುಖ್ಯವಾಗಿ ಗೋಚರಿಸುತ್ತಿದೆ.