ಈ ಬಾರಿ ದಸರಾ ಸಂಭ್ರಮಕ್ಕೆ ಕರೋನಾ ಅಡ್ಡಿಯಾಗಿದೆ. ಮೈಸೂರು ದಸರಾ ಉದ್ಘಾಟನೆಯ ವೇಳೆ ಕರೋನಾಗೆ ಬೇಗ ಲಸಿಕೆ ಸಿಗಲಿ ಎಂಬ ಪ್ರಾರ್ಥನೆ ಕೇಳಿಬಂದಿದೆ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಕರೋನಾ ಸ್ಥಿತಿ ಹಿಂದಿಗಿಂತಲೂ ಇದೀಗ ನಿರಾಳತೆಯನ್ನು ಮೂಡಿಸುತ್ತಿದೆ.
ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಇದೀಗ ಗುಣಮುಖರಾದವರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಚೇತರಿಕೆ ಪ್ರಮಾಣ ೮೭.೮ಕ್ಕೆ ಏರಿಕೆ ಯಾಗಿದೆ. ಇದರ ಜತೆಗೆ 2020ರ ಡಿಸೆಂಬರ್ ವೇಳೆಗೆ ಲಸಿಕೆ ಲಭ್ಯವಾಗುವ ಮುನ್ಸೂಚನೆ ದೊರೆತಿದೆ.
ಭಾರತದಲ್ಲಿ ಕೋವಿಡ್‌ಗೆ ಮೂರು ಲಸಿಕೆಗಳು ಅಭಿವೃದ್ಧಿಯ ಹಂತವನ್ನು ತಲುಪಿವೆ. ಎರಡು ಔಷಧಗಳು ಎರಡನೇ ಹಂತದಲ್ಲಿ ಹಾಗೂ ಒಂದು ಮೂರನೇ ಹಂತದಲ್ಲಿವೆ. ಇದರಿಂದ ಶೀಘ್ರದಲ್ಲಿ ಲಸಿಕೆ ಲಭ್ಯವಾಗುವ ಭರವಸೆ ವ್ಯಕ್ತವಾಗಿದೆ.
ಕೇವಲ ಭರವಸೆ ಮಾತ್ರವಲ್ಲದೆ ತಯಾರಿಕೆ ನಂತರ ಅದನ್ನು ಸಂಗ್ರಹಿಸುವ ಹಾಗೂ ಸರಬರಾಜು ಪ್ರಕ್ರಿಯೆ ಬಗ್ಗೆ ಈಗಾಗಲೇ
ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಈಗಾಗಲೇ ಪ್ರಧಾನಿ ಮೋದಿಯವರು ತಮ್ಮ ಅಧ್ಯಕ್ಷತೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿ – ಲಸಿಕೆ ವಿತರಣೆ ಮತ್ತು ಆಡಳಿತದ ಸನ್ನದ್ಧತೆ ಪರಿಶೀಲನಾ ಸಭೆ ನಡೆಸಿದ್ದಾರೆ.
ದೇಶದ ಭೌಗೋಳಿಕ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವೇಗವಾಗಿ ಲಸಿಕೆಯ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವಂತೆ ಅಽಕಾರಿಗಳಿಗೆ ಸಲಹೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ದೇಶದ ಜನರಲ್ಲಿ ಆತಂಕದ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ಶೀಘ್ರದಲ್ಲಿ ಲಸಿಕೆ ಲಭ್ಯವಾಗುವ ಭರವಸೆ ಮೂಡಿದೆ. ಕರೋನಾ ನಿವಾರಣೆ ಲಸಿಕೆ ಪ್ರತಿಯೊಬ್ಬ ಪ್ರಜೆಗೂ ದೊರೆಯಬೇಕಿರುವುದರಿಂದ ಇದನ್ನು ವಿಪತ್ತು ನಿರ್ವಹಣೆಯ ರೀತಿಯಲ್ಲಿ ಅಧಿಕಾರಿಗಳು ನಿರ್ವಹಿಸುವಂತೆ ಕರೆ ನೀಡಲಾಗಿದೆ. ಮೊದಲ ಹಂತದಲ್ಲಿ ೩೦ಕೋಟಿ ಜನರಿಗೆ ಮೊದಲ ಪ್ರಾಶಸ್ತ್ಯದ ಆಧಾರದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಈ ಲಸಿಕೆಗಳ ಸಂಗ್ರಹಕ್ಕಾಗಿ ಶೀತಲೀಕರಣ ಘಟಕಗಳ ವ್ಯವಸ್ಥೆ ಮತ್ತು ವಿತರಣೆ ಕ್ಲಿನಿಕ್ ಸಿದ್ಧಪಡಿಸಿಕೊಳ್ಳುವಂತೆ ಪ್ರಧಾನಿ ಯವರು ದೇಶದ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದಾಗಿ ದೇಶದ ಜನರಲ್ಲಿ ಹಿಂದಿಗಿಂತ ಇಂದು ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿದಂತಾಗಿದೆ.